ADVERTISEMENT

‘ವೀರಶೈವ ಮಹಾಸಭಾಕ್ಕೆ ಮತ್ತೊಮ್ಮೆ ಚುನಾವಣೆ ನಡೆಯಲಿ’

ಪತ್ರಿಕಾಗೋಷ್ಠಿಯಲ್ಲಿ ಅರುಣಕುಮಾರ ಎಸ್‌. ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:41 IST
Last Updated 19 ನವೆಂಬರ್ 2019, 12:41 IST
ಅರುಣಕುಮಾರ ಪಾಟೀಲ
ಅರುಣಕುಮಾರ ಪಾಟೀಲ   

ಕಲಬುರ್ಗಿ: ‘ವೀರಶೈವ ಮಹಾಸಭಾದ ಅವಿರೋಧ ಆಯ್ಕೆಯು ನಮ್ಮ ನಿರೀಕ್ಷೆಯಂತೆ ನಡೆದಿಲ್ಲ. ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು ಜಿಲ್ಲೆಯ ಮಠಾಧೀಶರು, ಹಿರಿಯರ ಅಭಿಪ್ರಾಯವನ್ನೂ ಪಡೆಯದೇ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ. ಹೀಗಾಗಿ, ಮತ್ತೊಮ್ಮೆ ಚುನಾವಣೆ ನಡೆಸಲಿ’ ಎಂದು ಜಿಲ್ಲಾ ವೀರಶೈವ ಸಮಾಜದ ನೂತನ ಅಧ್ಯಕ್ಷ ಅರುಣಕುಮಾರ ಎಸ್‌. ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯರಾದ ಗಣೇಶ ಡಿ. ಅಣಕಲ್‌ ಅವರನ್ನು ಮಹಾಸಭಾ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಾಗಿ ತಿಳಿಸಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದರು. ಆದರೆ ನಂತರ ಶರಣಕುಮಾರ ಮೋದಿ ಅವರ ಹೆಸರನ್ನು ಘೋಷಿಸಿದರು. ನನ್ನೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಖಂಡ್ರೆಯವರು ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡುವುದಾಗಿ ತಿಳಿಸಿದ್ದರು. ಜಿಲ್ಲೆಯ ಮಠಾಧೀಶರು, ಹಿರಿಯರ ಸಭೆಯನ್ನು ಖಂಡ್ರೆಯವರು ಕರೆದು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬಹುದಿತ್ತು’ ಎಂದು ಅವರು ಅಸಮಾಧಾನ ಹೊರಹಾಕಿದರು.

ಜಿಲ್ಲಾ ವೀರಶೈವ ಸಮಾಜವು ಮಹಾಸಭಾಕ್ಕೆ ಪರ್ಯಾಯವಲ್ಲ. ನಾವೂ ಮಹಾಸಭಾ ಸದಸ್ಯರೇ ಇದ್ದೇವೆ. ಎರಡೂ ಸಂಘಟನೆಗಳು ವೀರಶೈವ–ಲಿಂಗಾಯತ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತವೆ. ಎರಡು ಸಂಘಟನೆಗಳಿಂದಾಗಿ ಸಮಾಜ ಇಬ್ಭಾಗವಾದಂತಾಗುವುದಿಲ್ಲ ಎಂದೂ ಅರುಣಕುಮಾರ ಸ್ಪಷ್ಟನೆ ನೀಡಿದರು.

ADVERTISEMENT

1979ರಲ್ಲಿ ಸ್ಥಾಪನೆಯಾದ ಜಿಲ್ಲಾ ವೀರಶೈವ ಸಮಾಜದ ಸದಸ್ಯತ್ವ ಸಂಖ್ಯೆ ಪ್ರಸ್ತುತ 2 ಸಾವಿರ ಇದೆ. ಆರೇಳು ವರ್ಷಗಳಿಂದ ಸಂಸ್ಥೆಯ ಚಟುವಟಿಕೆಗಳು ಕಡಿಮೆಯಾಗಿದ್ದವು. ಈಗ ಹೊಸ ಸದಸ್ಯತ್ವವನ್ನು ನೀಡಲಾಗುವುದು ಎಂದರು.‌

ಜಿಲ್ಲಾ ವೀರಶೈವ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುವುದು, ವಸತಿ ನಿಲಯದ ಸವಲತ್ತು ನೀಡುವುದು, ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು, ನಗರ ಮತ್ತು ತಾಲ್ಲೂಕು ಪ್ರದೇಶಗಳಲ್ಲಿ ಸಮಾಜದ ಘಟಕಗಳನ್ನು ತೆರೆದು ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಸಮಾಜದ ಮಹಿಳಾ ಮತ್ತು ಯುವ ಘಟಕಗಳನ್ನು ಸ್ಥಾಪಿಸುವುದು, ಪ್ರತಿ ತಾಲ್ಲೂಕಿನಲ್ಲಿ ವೀರಶೈವ ಲಿಂಗಾಯತ ಸಮಾಜದ ಸಮುದಾಯ ಭವನವನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು, ಸಂಸ್ಥೆಯಿಂದ ತ್ರೈಮಾಸಿಕವನ್ನು ಹೊರತರಲಾಗುವುದು, ಸಮಾಜದ ವಧು–ವರರ ಕೇಂದ್ರವನ್ನು ಪ್ರಾರಂಭಿಸಲಾಗುವುದು, ಸಮಾಜದ ರಾಜಕೀಯ ಮುಖಂಡರಿಗೆ ಸ್ಥಾನಮಾನ ಸಿಗದಿದ್ದರೆ ಪಕ್ಷಭೇದ ಮರೆತು ಹೋರಾಟ ಮಾಡಲಾಗುವುದು ಎಂದು ಅರುಣಕುಮಾರ ಪಾಟೀಲ ತಿಳಿಸಿದರು.

ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ್ಷರಾದ ಕಲ್ಯಾಣಪ್ಪ ಪಾಟೀಲ, ಎಸ್‌.ವಿ.ಮಠಪತಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಳ ಘೂಳಿ, ಖಜಾಂಚಿ ಚಂದ್ರಶೇಖರ ತಳ್ಳಳ್ಳಿ, ರಾಜಶೇಖರ ವಲ್ಲಾದ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.