ADVERTISEMENT

ಕಲಬುರ್ಗಿ ವಿರಶೈವ ಮಹಾಸಭಾ ಕಚೇರಿಯು ಸಂಘದ ಚಟುವಟಿಕೆಗಷ್ಟೇ ಮೀಸಲು

ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿಗೆ ಕೀಲಿ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 9:17 IST
Last Updated 2 ಡಿಸೆಂಬರ್ 2019, 9:17 IST
ಶರಣಕುಮಾರ ಮೋದಿ
ಶರಣಕುಮಾರ ಮೋದಿ   

ಕಲಬುರ್ಗಿ‌: ‘ಇಲ್ಲಿನ ಸಾರ್ವಜನಿಕ ಉದ್ಯಾನದ ವೀರಶೈವ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಕೊಠಡಿಯನ್ನು 20 ವರ್ಷಗಳಿಂದ ಅಖಿಲ ಭಾರತ ವೀರಶೈವ ಮಹಾಸಭಾ ಚಟುವಟಿಕೆಗೆ ಬಳಸಲಾಗುತ್ತಿದೆ. ಹೀಗಾಗಿ, ಮಹಾಸಭಾದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಡಾ.ಶರಣಬಸವಪ್ಪ ಅಪ್ಪ ಅವರು ಕೊಠಡಿಯ ಕೀಲಿಯನ್ನೇ ನಮಗೇ ಹಸ್ತಾಂತರಿಸಿದ್ದಾರೆ’ ಎಂದು ಮಹಾಸಭಾ ಅಧ್ಯಕ್ಷ ಶರಣಕುಮಾರ ಮೋದಿ ಸ್ಪಷ್ಟಪಡಿಸಿದರು.

ಮಹಾಸಭಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಇಬ್ಭಾಗವಾಗುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ, ಸಮಾಜ ಇಬ್ಭಾಗವಾಗಿಲ್ಲ. ಈ ಬಗ್ಗೆ ಯಾವುದೇ ಗೊಂದಲ ಬೇಡ. ವೀರಶೈವ–ಲಿಂಗಾಯತ ಸಮಾಜದಲ್ಲಿ ಹಲವಾರು ಸಂಘಟನೆಗಳಿವೆ. ಅವು ತಮ್ಮ ಚಟುವಟಿಕೆಯನ್ನು ಮಾಡಿಕೊಂಡು ಹೋಗುತ್ತಿವೆ’ ಎಂದರು.

‘ಮಹಾಸಭಾ ಜಿಲ್ಲೆಯ ಆರೂವರೆ ಲಕ್ಷ ಸಮಾಜದ ಸದಸ್ಯರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಅದಕ್ಕಾಗಿ ಮೊದಲಿನ ರೂಢಿಯಂತೆ ಇದೇ ಕಚೇರಿ ಬಳಕೆ ಮಾಡುತ್ತಿದ್ದೇವೆ. ಇದಕ್ಕೆ ಡಾ. ಅಪ್ಪ ಅವರ ಒಪ್ಪಿಗೆಯೂ ಇದೆ. ಯಾರೇ ಅಧ್ಯಕ್ಷರಾಗಿ ಆಯ್ಕೆಯಾದರೂ ಇಲ್ಲಿಂದಲೇ ಮಹಾಸಭಾ ಚಟುವಟಿಕೆಗಳನ್ನು ಮಾಡುತ್ತಾರೆ’ ಎಂದರು.

ADVERTISEMENT

50 ಸಾವಿರ ಸದಸ್ಯತ್ವ ಗುರಿ: ಹಿಂದಿನ ಮಹಾಸಭಾ ಆಡಳಿತ ಮಂಡಳಿಯು 850 ಜನರ ಸದಸ್ಯತ್ವವನ್ನೇ ಮುಂದುವರಿಸಿಕೊಂಡು ಬಂದಿತ್ತು. ಹೊಸ ಆಡಳಿತ ಮಂಡಳಿ ಬಂದ ಬಳಿಕ 4 ಸಾವಿರ ಜನರಿಗೆ ಸದಸ್ಯತ್ವ ನೀಡಲಾಗಿದ್ದು, ಒಟ್ಟು 50 ಸಾವಿರ ಜನರಿಗೆ ಸದಸ್ಯತ್ವ ನೀಡುವ ಗುರಿ ಹೊಂದಲಾಗಿದೆ’ ಎಂದು ಮೋದಿ ಹೇಳಿದರು.

ತಾಲ್ಲೂಕು ಕೇಂದ್ರಗಳಲ್ಲಿ ಭಕ್ತಿ ಭವನ: ‘ಮಹಾಸಭಾ ಚಟುವಟಿಕೆಗಳನ್ನು ತಾಲ್ಲೂಕು ಕೇಂದ್ರಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಭಕ್ತಿ ಭವನ ನಿರ್ಮಿಸುವ ಚಿಂತನೆ ಇದೆ. ಇದಕ್ಕೆ ಆಯಾ ಪುರಸಭೆ, ಪಟ್ಟಣ ಪಂಚಾಯಿತಿಗಳಿಂದ ಸಾರ್ವಜನಿಕ ಉದ್ದೇಶಕ್ಕಾಗಿ ನಿವೇಶನ ನೀಡುವಂತೆ ಕೋರಲಾಗುವುದು. ದಾನಿಗಳ ನೆರವಿನಿಂದ ಕಟ್ಟಡ ಕಟ್ಟಿಸಲಾಗುವುದು. ಜನವರಿಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದರು.

ಮಹಾಸಭಾ ಪದಾಧಿಕಾರಿಗಳಾದ ರಾಜು ನಾಗನಳ್ಳಿ, ಸಿದ್ದುಗೌಡ ಅಫಜಲಪುರ, ಈರಣ್ಣ ಗುಳೇದ, ಶರಣ ಪಾಟೀಲ, ಶರಣಪ್ಪ ದಿಗ್ಗಾಂವಿ, ಎಂ.ಎಸ್‌.ಪಾಟೀಲ, ಶಾಂತರೆಡ್ಡಿ, ಮಹಾಂತೇಶ ಪಾಟೀಲ, ಭೀಮಾಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.