
ಕಲಬುರಗಿ: ‘ಭಾರತದ ಚರಿತ್ರೆಯಲ್ಲಿ ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿಗಳು. ಇವರು ವರ್ತಮಾನದ ಜೊತೆಗೆ ಬದುಕಿದರೂ ಭಾರತೀಯ ಸಮಾಜಕ್ಕೆ ಮುಖಾಮುಖಿಯಾದವರು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಅಭಿಪ್ರಾಯಪಟ್ಟರು.
ಶಿವಮೊಗ್ಗ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ ಡಿ.ಎಸ್.ಚೌಗಲೆ ಅವರು ರಚಿಸಿದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಯಾರು ವರ್ತಮಾನದ ಜೊತೆಗೆ ಬದುಕುತ್ತಾರೆ. ಅವರು ಹೆಚ್ಚು ಚರ್ಚೆಗೆ ಒಳಗಾಗುತ್ತಾರೆ. ಬುದ್ದ, ಬಸವಣ್ಣ, ಕುವೆಂಪು ಎಲ್ಲರಿಗೂ ಇದು ಅನ್ವಯವಾಗುತ್ತದೆ. ಆದರೆ, ನಾವು ಇವರನ್ನು ಆರಾಧನಾ ದೃಷ್ಟಿಯಿಂದ ನೋಡಿದ್ದರಿಂದ ಇವರ ವಿಚಾರಗಳು ಹಿನ್ನೆಲೆಗೆ ಸರಿದವು. ಗಾಂಧಿಯನ್ನು ಅವರಿದ್ದ ಮಾದರಿಯಲ್ಲೇ ನೋಡುವುದರಿಂದ ಅವರು ನಮ್ಮ ಯುವಜನಾಂಗವನ್ನು ತಲುಪಿಲ್ಲ. ಅವರ ವಿಚಾರಗಳನ್ನು ವರ್ತಮಾನಕ್ಕೆ ಅನುಸಂಧಾನ ಮಾಡಿದಾಗ ಮಾತ್ರ ಗಾಂಧಿ ಯುವಕರಿಗೆ ತಲುಪಲು ಸಾಧ್ಯ’ ಎಂದರು.
‘ಒಬ್ಬ ವ್ಯಕ್ತಿಯ ಸಾರ್ವಜನಿಕ ಜೀವನ ಹಾಗೂ ಖಾಸಗಿ ಜೀವನವನ್ನು ವಸ್ತುನಿಷ್ಠವಾಗಿ ನೋಡುವ ಪರಿಭಾಷೆ ನಮ್ಮಲ್ಲಿ ಇನ್ನೂ ಬೆಳೆದಿಲ್ಲ. ಗಾಂಧಿ–ದೇವದಾಸರ ಚರ್ಚೆಗಳು, ಬಸವಣ್ಣನಿಗೆ ನೀಲಾಂಬಿಕೆ ಹಾಕಿದ ಪ್ರಶ್ನೆಗಳು, ಬಾಬಾಸಾಹೇಬರು ವಿದೇಶಕ್ಕೆ ಹೋದಾಗ ರಮಾಬಾಯಿಗೆ ಬರೆದ ಪತ್ರಗಳನ್ನಿಟ್ಟುಕೊಂಡು ನಾವು ವ್ಯಕ್ತಿತ್ವಗಳನ್ನು, ಆ ಮೂಲಕ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿ ಗಿರೀಶ ಪಾಟೀಲ ಮಾತನಾಡಿ, ‘ಕಲಬುರಗಿಯಂತಹ ವಿಭಾಗೀಯ ಕೇಂದ್ರದಲ್ಲಿ ಒಂದು ಗಾಂಧಿ ಭವನ ಇಲ್ಲದೇ ಇರುವುದು ವಿಷಾದನೀಯ. ಗಾಂಧೀಜಿಯವರ ಮೂರ್ತಿ ಹಾಗೂ ವೃತ್ತವೂ ಇಲ್ಲ. ಕಳೆದ ವರ್ಷವೇ ಸ್ಥಳೀಯ ಶಾಸಕರಿಗೆ ಮನವಿ ಪತ್ರ ನೀಡಿದ್ದರೂ ಪ್ರಗತಿಯಾಗಿಲ್ಲ’ ಎಂದು ವಿಷಾದಿಸಿದರು.
‘ಸಾಮಾಜಿಕ ಜಾಲತಾಣದಲ್ಲಿ ಗಾಂಧೀಜಿ ಅವರ ಅವಹೇಳನ ಮಾಡುವುದು ಮಾಮೂಲಿಯಾಗಿದೆ. ಈ ಬಗ್ಗೆ ಯುವಕರಲ್ಲಿ ತಿಳಿವಳಿಕೆ ಮೂಡಿಸಬೇಕು’ ಎಂದರು.
ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನಂತರ ನಡೆದ ಸಂವಾದದಲ್ಲಿ ಶಂಕ್ರಯ್ಯ ಘಂಟಿ, ವಿಕ್ರಮ ವಿಸಾಜಿ, ದತ್ತಾತ್ರಯ ಇಕ್ಕಳಕಿ, ಮಹಾಂತೇಶ ನವಲಕಲ್, ಕೋದಂಡರಾಮ, ಲವಿತ್ರ ವಸ್ತ್ರದ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.