ADVERTISEMENT

ಜಯತೀರ್ಥರ ವೃಂದಾವನ ವಿವಾದ: ಭಕ್ತರ ಆಕ್ರೋಶ

ಮಂತ್ರಾಲಯದ ಮಠದ ಶ್ರೀಗಳ ಹೇಳಿಕೆಗೆ ಬೇಸರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:45 IST
Last Updated 24 ಜೂನ್ 2022, 3:45 IST
ಕಲಬುರಗಿಯಲ್ಲಿ ಮಾಧ್ವ ಸಮುದಾಯದವರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಮಾಧ್ವ ಸಮುದಾಯದವರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು   

ಕಲಬುರಗಿ: ‘ಮಾಧ್ವ ಸಂಪ್ರದಾಯದ ಜಯತೀರ್ಥರ ಸಮಾಧಿ (ಮೂಲವೃಂದಾವನ) ಸೇಡಂ ತಾಲ್ಲೂಕಿನ ಮಳಖೇಡದಲ್ಲಿದ್ದರೂ ಮಂತ್ರಾಲಯ ಮಠದವರು ಆನೆಗೊಂದಿಯಲ್ಲಿದೆ ಎನ್ನುವ ಮೂಲಕ ಕಲ್ಯಾಣ ಕರ್ನಾಟಕದ ಮಾಧ್ವಭಕ್ತರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ’ ಎಂದು ಆರೋಪಿಸಿ ಜಯತೀರ್ಥರ ಭಕ್ತವೃಂದದವರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

‘ಗಂಗಾವತಿಯ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆ ಯಲ್ಲಿನ ರಘುವರ್ಯತೀರ್ಥರ ಸಮಾಧಿ ಯನ್ನು ಜಯತೀರ್ಥರ ಸಮಾಧಿಯೆಂದು ಬಿಂಬಿಸಿ ಹೇಳಿಕೆ ನೀಡಿ, ಜಯತೀರ್ಥರ ಆರಾಧನೆ ವೃಂದಾವನದಲ್ಲೇ ಆಚರಿಸುವುದಾಗಿ ಮಂತ್ರಾಲಯ ಮಠದ ಶ್ರೀಗಳು ಘೋಷಿಸಿದ್ದು ಕಲ್ಯಾಣ ಕರ್ನಾಟಕದ ಮಾಧ್ವ ವರ್ಗದವರಿಗೆ ಘಾಸಿಗೊಳಿಸಿದೆ’ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

‘ಇಂಥ ಹೇಳಿಕೆಗಳು ಸಮಾಜದ ಸಾಮರಸ್ಯ ಹಾಳು ಮಾಡುವುದಲ್ಲದೇ ಜನರ ಧಾರ್ಮಿಕ ನಂಬಿಕೆ ಕೆರಳಿಸುತ್ತದೆ. ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅಥವಾ ಆ ಮಠದ ಭಕ್ತರ ಮೇಲೆ ಯಾವುದೇ ರೀತಿಯ ದ್ವೇಷ ಭಾವನೆಯಿಲ್ಲ. ಆದರೆ, ಪ್ರಾಚೀನ ಕಾಲದಿಂದಲೂ ಎಲ್ಲ ಮಾಧ್ವರ ಶ್ರದ್ಧಾಕೇಂದ್ರವಾದ ಮಳಖೇಡದ ಜಯತೀರ್ಥರ ಸಮಾಧಿ ಸ್ಥಳದ ಬಗ್ಗೆ ಶ್ರೀಗಳ ನಿಲುವು ಸರಿಯಲ್ಲ. ಈ ಮಾತು ಶೋಭೆ ತರುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಜಯತೀರ್ಥರ ಆರಾಧನೆಯ ದಿನವಾದ ಜುಲೈ 17 ರಿಂದ 19ರವರೆಗೆ ನವವೃಂದಾವನದಲ್ಲಿರುವ ರಘುವರ್ಯರ ಸಮಾಧಿಯೇ ಜಯತೀರ್ಥರ ವೃಂದಾವನವೆಂದು ತಿಳಿದು ಆರಾಧನೆಗೆ ಬರುವವರನ್ನು ತಡೆದು ಘರ್ಷಣೆಗೆ ಅವಕಾಶ ಮಾಡಿಕೊಡಬಾರದು. ಪ್ರತಿ ವರ್ಷ ಮಳ ಖೇಡದಲ್ಲಿನ ಜಯತೀರ್ಥರ ಆರಾಧನೆಗೆ ಬರುವ ಭಕ್ತರಿಗೆ ಜಿಲ್ಲಾಡಳಿತ ಸಹಕಾರ ನೀಡಬೇಕು’ ಎಂದರು.

ನೂತನ ವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಗುರುಮಧ್ವಾಚಾರ್ಯ ನವಲಿ ಮಾತನಾಡಿ, ‘ಮಳಖೇಡ ವಿಚಾರದಲ್ಲಿ ಅನಗತ್ಯ ವಿವಾದ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ. ಇದು ಸರಿಯಲ್ಲ. ಮಾಧ್ವ ಸಂಪ್ರದಾಯದ ಮಹಾನ್ ಯತಿಗಳು ಮಳಖೇಡದಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಿದ್ದರೂ ವಿವಾದ ಎಬ್ಬಿಸುವುದು ಸರಿಯಲ್ಲ. ಇದು ಖಂಡನೀಯ’ ಎಂದರು.

ಪಂ. ಗೋಪಾಲಾಚಾರ್ಯ ಅಕಮಂಚಿ, ಹಣಮಂತರಾವ್ ಸರಡಗಿ, ಶ್ರೀನಿವಾಸಾಚಾರ್ಯ ಪದಕಿ, ಚಿತ್ತಾಪುರದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಲ್ಲಿನಾಥ ತಳವಾರ, ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ, ಸಾಹಿತಿ ಬಳಗದ ಡಾ. ಕಾಶೀನಾಥ ಹಿರೇಮಠ, ಪವನ ಫಿರೋಜಾಬಾದ್, ಗುಂಡಾಚಾರ್ಯ ನರಿಬೋಳ, ದಾಸ ಸಾಹಿತ್ಯ ಅಕಾಡೆಮಿಯ ರವಿ ಲಾತೂರಕರ್, ಪಾರಾಯಣ ಸಂಘಗಳ ಸದಸ್ಯರು, ಚಿತ್ತಾಪುರ, ಜೇವರ್ಗಿ, ಕಲಬುರಗಿ ಸೇರಿದಂತೆ 52 ಸಂಘಟನೆಗಳವರು, ವಿಷ್ಣುದಾಸಾಚಾರ್ಯ ಖಜೂರಿ, ಸತ್ಯಾತ್ಮ ಸೇನೆ ಸದಸ್ಯರು, ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ರಘೋತ್ತಮ ಘಂಟಿ, ಅರವಿಂದ ನವಲಿ, ಮುಕುಂದ ದೇಶಪಾಂಡೆ, ಪ್ರಶಾಂತ ಕೋರಳ್ಳಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಶೈಲ ನಾಗರಾಳ, ಎಂ.ಎಸ್. ಪಾಟೀಲ ನರಿಬೋಳ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.