ಜೇವರ್ಗಿ: ಯಡ್ರಾಮಿ ತಾಲ್ಲೂಕಿನ ಕಾಖಂಡಕಿ ಗ್ರಾಮದಲ್ಲಿ ಸದ್ಗುರು ಮಲ್ಲಾರಾಧ್ಯ ಹಾಗೂ ಕೋರಿಸಿದ್ಧೇಶ್ವರ ಜಾತ್ರೆ ಮೇ 27 ಮತ್ತು 28 ರಂದು ನಡೆಯಲಿದೆ.
ನಾಲವಾರ ಹಾಗೂ ಕಾಖಂಡಕಿ ಶ್ರೀಮಠಗಳ ಪೀಠಾಧಿಪತಿಗಳಾದ ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 27ರ ಬಾದಾಮಿ ಅಮಾವಾಸ್ಯೆ ದಿನದಂದು ಸಂಜೆ ನಾಡಿನ ಅನೇಕ ಪೂಜ್ಯರ ಸಮ್ಮುಖದಲ್ಲಿ ಶಿವಾನುಭವ ಸಾಂಸ್ಕೃತಿಕ ಸಂಭ್ರಮ ಹಾಗೂ ಪೂಜ್ಯರ ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಮಧ್ಯರಾತ್ರಿ ಭಕ್ತರ ಹರಕೆಯ ತನಾರತಿ ಉತ್ಸವ ಕಾರ್ಯಕ್ರಮ ನಡೆಯಲಿದೆ.
ಮೇ 28ರಂದು ಸಹಸ್ರಾರು ಸದ್ಭಕ್ತರ ಮಧ್ಯೆ ಸದ್ಗುರು ಮಲ್ಲಾರಾಧ್ಯರ ಹಾಗೂ ಕೋರಿಸಿದ್ಧೇಶ್ವರ ಶಿವಯೋಗಿಗಳ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ. ರಥೋತ್ಸವದ ಸಂದರ್ಭದಲ್ಲಿ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಜಾನಪದ ಕಲಾತಂಡಗಳ ಕಲಾಪ್ರದರ್ಶನ ರಥೋತ್ಸವದ ಮೆರುಗು ಹೆಚ್ಚಿಸಲಿವೆ.
ರಾತ್ರಿ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಸದ್ಭಕ್ತರಿಗೆ ಗುರುರಕ್ಷಾ ಪ್ರದಾನ ಸಮಾರಂಭದಲ್ಲಿ ಜೇವರ್ಗಿ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕಲಬುರಗಿ ಶಾಸಕ ಅಲ್ಲಮಪ್ರಭು ಪಾಟೀಲ, ಅಶೋಕ್ ಮನಗೂಳಿ, ಚನ್ನಾರಡ್ಡಿ ಪಾಟೀಲ್ ತುನ್ನೂರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸೇರಿದಂತೆ ಅನೇಕರು ಭಾಗವಹಿಸುವರು. ನಂತರ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರೋತ್ಸವದ ಪ್ರಯುಕ್ತ ಈಗಾಗಲೇ ಶ್ರೀಮಠದಲ್ಲಿ ಮಡಿವಾಳಯ್ಯ ಶಾಸ್ತ್ರಿ ಜೇರಟಗಿ ಅವರಿಂದ ನಾಲವಾರ ಪವಾಡ ಪುರುಷ ಸಿದ್ಧ ಶಿವಯೋಗಿ ಶ್ರೀಕೋರಿಸಿದ್ದೇಶ್ವರರ ಪುರಾಣ ಪ್ರವಚನ ನಡೆದಿದೆ. ಸಿದ್ದಯ್ಯಸ್ವಾಮಿ ಪಡದಳ್ಳಿ ಹಾಗೂ ರಾಜಶೇಖರ ಗೆಜ್ಜಿ ಅವರಿಂದ ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಾರದಿಂದ ನಡೆಯುತ್ತಿವೆ.
ಜಾತ್ರಾ ಮಹೋತ್ಸವಕ್ಕಾಗಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ನಾಲವಾರದಿಂದ ಪಾದಯಾತ್ರೆ ಮೂಲಕ ಕಾಖಂಡಕಿ ಗ್ರಾಮಕ್ಕೆ ಆಗಮಿಸುವುದು ಇಲ್ಲಿನ ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.