ADVERTISEMENT

ಮೋದಿಯಂಥ ಸುಳ್ಳುಗಾರ ಪ್ರಧಾನಿಯನ್ನು ನೋಡಿಲ್ಲ: ಖರ್ಗೆ ವಾಗ್ದಾಳಿ

ಎನ್‌ಡಿಎ ಸರ್ಕಾರಕ್ಕೆ 11 ವರ್ಷ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 5:20 IST
Last Updated 12 ಜೂನ್ 2025, 5:20 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 11 ವರ್ಷಗಳಲ್ಲಿ 36 ತಪ್ಪುಗಳನ್ನು ಮಾಡಿದೆ. ಮೋದಿ ಅವರಂತೆ ಪದೇ ಪದೇ ಸುಳ್ಳು ಹೇಳಿ, ಇಷ್ಟೊಂದು ತಪ್ಪುಗಳನ್ನು ಮಾಡಿ, ಜನರನ್ನು ದಾರಿ ತಪ್ಪಿಸಿ, ಯುವಕರನ್ನು ಮೋಸಗೊಳಿಸುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ’ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನ್ನ 65 ವರ್ಷಗಳ ರಾಜಕೀಯ ಜೀವನ ಮತ್ತು 55 ವರ್ಷಗಳ ಅಧಿಕಾರದಲ್ಲಿ ಇದ್ದಾಗ ಮೋದಿ ಅವರಂತಹ ಪ್ರಧಾನಿಯನ್ನು ನಾನು ಕಂಡಿಲ್ಲ. ತಾವು ಮಾಡಿದ್ದ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ, ಕ್ಷಮೆ ಸಹ ಯಾಚಿಸುವುದಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಕಾಶ್ಮೀರ ಕಣಿವೆಯಲ್ಲಿ ರೈಲ್ವೆ ಸಂಪರ್ಕ ಜಾಲ ವಿಸ್ತರಿಸುವಲ್ಲಿ ಈ ಹಿಂದಿನ ಸರ್ಕಾರಗಳು ನೀಡಿದ್ದ ಕೊಡುಗೆಗಳನ್ನು ಸ್ಮರಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ರೈಲ್ವೆ ಯೋಜನೆಗಳನ್ನು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಆರಂಭಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವುಗಳನ್ನು ಇನ್ನಷ್ಟು ಮುಂದವರಿಸಿಕೊಂಡು ಬಂದರು. ಡಾ.ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಿತ್ತು. ಮನಮೋಹನ್‌ ಸಿಂಗ್, ಸೋನಿಯಾ ಗಾಂಧಿ, ನಾನು ಸೇರಿದಂತೆ ಹಲವರು ಕಾಶ್ಮೀರಕ್ಕೆ ತೆರಳಿ ಚಾಲನೆ ನೀಡಿದ್ದೇವೆ’ ಎಂದು ಉದ್ಘಾಟನೆಗೆ ತೆರಳಿದ್ದು ಫೋಟೊಗಳನ್ನು ಪ್ರದರ್ಶಿಸಿದರು.

‘ನಾನು ರೈಲ್ವೆ ಸಚಿವನಾಗಿದ್ದಾಗ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ರೈಲ್ವೆ ಯೋಜನೆಗಳಲ್ಲಿ ಸಾಕಷ್ಟು ಅನುದಾನವನ್ನು ಹಂಚಿಕೆ ಮಾಡಿದ್ದೇನೆ. ಮೋದಿ ಅವರು ನಾವು ಪ್ರಾರಂಭಿಸಿದ್ದ ಯೋಜನೆಗಳನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ’ ಎಂದರು.

‘ಚುನಾವಣೆಯಲ್ಲಿ ಎಲ್ಲ ಪಕ್ಷದವರ ಸಾವಿರಾರು ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಆ ಹಣ ಎಲ್ಲಿಂದ ಬಂತು? ಯಾರದು ಎಂಬುದು ಇಲ್ಲಿಯವರೆಗೂ ಅದರ ಲೆಕ್ಕ ಹೊರಗೆ ಬಂದಿಲ್ಲ. ಎಲ್ಲ ಪಕ್ಷಗಳು ಚುನಾವಣೆಗಳಲ್ಲಿ ಖರ್ಚು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಒಂದೇ ಪಕ್ಷವನ್ನು ಗುರಿಯಾಗಿಸಿಕೊಂಡು ತೊಂದರೆ ಕೊಟ್ಟರೆ ಆ ಪಕ್ಷದಲ್ಲಿ ಸಹಜವಾಗಿ ಭೇದಭಾವ ಉಂಟಾಗಿ ಎದುರಿನವರಿಗೆ ಅನುಕೂಲ ಆಗುತ್ತದೆ ಎಂಬ ಲೆಕ್ಕಚಾರವಿದೆ’ ಎಂದು ಇ.ಡಿ. ದಾಳಿಗೆ ಪ್ರತಿಕ್ರಿಯಿಸಿದರು.

‘ಇ.ಡಿ.ಯವರು ಎಷ್ಟೇ ಕಿರುಕುಳ ಕೊಟ್ಟರೂ ನಾವು ಒಗ್ಗಟ್ಟಾಗಿ ಇದ್ದೇವೆ. ಕರ್ನಾಟದಲ್ಲಿ ಇದೇನು ಹೊಸದಲ್ಲ. ಈ ಹಿಂದೆಯೂ ನಿಗಮದ ನಮ್ಮ ಪಕ್ಷದ ಒಬ್ಬರನ್ನು ಜೈಲಿಗೆ ಹಾಕಿದ್ದರು. ಯಡಿಯೂರಪ್ಪ ಸಹ ಜೈಲಿನಲ್ಲಿ ಹಾಕಿದ್ದರು. ಇ.ಡಿ. ಅಧಿಕಾರಿಗಳು ಯಾವ ರೀತಿ ಪ್ರಕರಣ ದಾಖಲಿಸುತ್ತಾರೆ ನೋಡಿ, ವಿಚಾರಣೆ ಮುಗಿದ ಮೇಲೆ ಶಾಸಕರಿಂದ ಮಾಹಿತಿ ಪಡೆದು ಪ್ರತಿಕ್ರಿಯೆ ಕೊಡುತ್ತೇನೆ’ ಎಂದು ಹೇಳಿದರು.

ಈ ವೇಳೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಉಪಸ್ಥಿತರಿದ್ದರು.

‘ಹಿಂದಿಗೆ ಅನುವಾದ ಮಾಡಿಕೊಳ್ಳಿ’

‘ನಾನು ಕನ್ನಡದಲ್ಲಿ ಮಾತನಾಡಿದ್ದನ್ನು ಹಿಂದೆ ಭಾಷೆಗೆ ಅನುವಾದ ಮಾಡಿದರೆ ಒಬ್ಬ ಅನುವಾದಕನಿಗೆ ಕೆಲಸ ಸಿಗುತ್ತದೆ. ಅದನ್ನು ಏಕೆ ತಪ್ಪಿಸುತ್ತಿರಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಮನವಿ ಮಾಡಿದ್ದ ರಾಷ್ಟ್ರೀಯ ಸುದ್ದಿ ಏಜೆನ್ಸಿಗಳ ಪ್ರತಿನಿಧಿಗಳಿಗೆ ಪ್ರಶ್ನಿಸಿದರು.

‘ಕನ್ನಡದಲ್ಲಿ ಮಾತನಾಡಿದ್ದನ್ನು ಹಿಂದಿ ಭಾಷೆಯಲ್ಲಿ ಹಾಕಿ ಪ್ರಸಾರ ಮಾಡಿ. ನೀವು ತಮಿಳುನಾಡು, ಕೇರಳದಿಂದ ನೋಡಿ ತಿಳಿಯಿರಿ’ ಎಂದು ಕನ್ನಡ ಭಾಷಾ ಪ್ರೇಮ ಪ್ರದರ್ಶಿಸಿದರು.

ಡೇವಿಡ್ ಸಿಮಿಯೋನ್‌ಗೆ ಸಂತಾಪ

ವಿಧಾನ ಪರಿಷತ್‌ನ ಮಾಜಿ ಹಂಗಾಮಿ ಸಭಾಪತಿ ಡೇವಿಡ್ ಸಿಮಿಯೋನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ, ‘ಕಾಂಗ್ರೆಸ್ ಪಕ್ಷ ಹಾಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವರು. ಎಲ್ಲರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷ, ಕ್ರಿಶ್ಚಿಯನ್ ಸಮುದಾಯ ಒಬ್ಬ ಒಳ್ಳೆಯ ನಾಯಕನನ್ನು ಕಳೆದುಕೊಂಡಿದೆ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.