ADVERTISEMENT

ನನ್ನ ಹಣೆಬರಹ ಬರೆಯುವ ಬ್ರಹ್ಮರು ನೀವೇ: ಖರ್ಗೆ

ಸೋತವರ ಸಂಘ ಸ್ಥಾಪನೆ:ಲೇವಡಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 15:12 IST
Last Updated 30 ಏಪ್ರಿಲ್ 2019, 15:12 IST
ಕಲಬುರ್ಗಿಯ ಫಿಲ್ಟರ್ ಬೆಡ್‍ ಪ್ರದೇಶದ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು
ಕಲಬುರ್ಗಿಯ ಫಿಲ್ಟರ್ ಬೆಡ್‍ ಪ್ರದೇಶದ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು   

ಕಲಬುರ್ಗಿ: ‘ಬ್ರಹ್ಮ ಹಣೆಬರಹ ಬರೆಯುತ್ತಾನೆ ಎಂದು ಹೇಳುತ್ತಾರೆ. ನಾನಂತೂ ಬ್ರಹ್ಮನ ಬಳಿ ಹೋಗಿಲ್ಲ. ಹೋಗುವುದು ನನಗೆ ಗೊತ್ತಿಲ್ಲ. ನಾನು ನಂಬಿದ್ದು ಮತದಾರರನ್ನು. ಅವರೇ ನನ್ನ ಪಾಲಿಗೆ ಬ್ರಹ್ಮರು’ ಎಂದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಫಿಲ್ಟರ್ ಬೆಡ್‍ ಪ್ರದೇಶದಲ್ಲಿನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಐದು ದಶಕಗಳಿಂದ ರಾಜಕಾರಣದಲ್ಲಿ ಇದ್ದೇನೆ. ಹಳ್ಳಿಯಿಂದ ದೆಹಲಿಯವರೆಗೂ ಬೆಳೆಸಿದವರು ಮತದಾರರು. ಆದರೆ, ಇತ್ತೀಚಿಗೆ ಸೋತವರ ಸಂಘವೊಂದು ಸ್ಥಾಪನೆಗೊಂಡಿದೆ. ಈ ಗುಂಪಿನ ಅಜೆಂಡಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವುದು. ಆದರೆ, ನನ್ನ ಸೋಲು- ಗೆಲುವು ಇರುವುದು ಮತದಾರ ಪ್ರಭುಗಳ ಕೈಯಲ್ಲಿ. ಈ ಗುಂಪು ಇದನ್ನು ತಿಳಿದುಕೊಳ್ಲಬೇಕು’ ಎಂದರು.

ADVERTISEMENT

‘ದೇಶದ 543 ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅದರಲ್ಲಿ ನಾನೂ ಒಬ್ಬ. ಆದರೆ ನನ್ನನ್ನು ಸೋಲಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ನೋಡಿದರೆ ಬಿಜೆಪಿಯವರಿಗೆ ನನ್ನ ಭಯ ಎಷ್ಟಿದೆ ಎನ್ನುವುದುಗೊತ್ತಾಗುತ್ತದೆ’ ಎಂದು ಹೇಳಿದರು.

‘ನನ್ನ ವಿರುದ್ಧ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ’ ಎಂದರು.

ಶಾಸಕಿ ಕನೀಜ್ ಫಾತಿಮಾ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮುಖಂಡರಾದ ಅಲ್ಲಂ ವೀರಭದ್ರಪ್ಪ,ಶರಣು ಮೋದಿ, ಮಾರುತಿರಾವ ಮಾಲೆ, ಶ್ಯಾಮರಾವ ಪ್ಯಾಟಿ, ರಾಜು ಕಪನೂರ, ರಾಜಗೋಪಾಲರೆಡ್ಡಿ, ಯಲ್ಲಪ್ಪ ನಾಯ್ಕೋಡಿ, ಶರಣು ಗೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.