ADVERTISEMENT

ಪ್ರಧಾನಿ ಮೋದಿಗೆ ದೂರದೃಷ್ಟಿಯಿಲ್ಲ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:20 IST
Last Updated 8 ಸೆಪ್ಟೆಂಬರ್ 2025, 6:20 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ‘ದೂರದೃಷ್ಟಿಯುಳ್ಳವರು ದೇಶಕ್ಕಾಗಿ ಏನು ಮಾಡಬೇಕು ಎಂಬುದನ್ನು ಯೋಚಿಸಿ ಮಾಡುತ್ತಾರೆ. ಆದರೆ, ಪ್ರಧಾನಿ ಮೋದಿ ಬಳಿ ದೂರದೃಷ್ಟಿಯಿಲ್ಲ. ಅದರಿಂದಲೇ ಭಾರತದ ಅಮೆರಿಕದ ಸುಂಕಾಸ್ತ್ರ ಎದುರಿಸುವಂತಾಯಿತು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.‌

ನಗರದಲ್ಲಿ ಭಾನುವಾರ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ವಿಶ್ವದಲ್ಲಿ ಯಾವುದೇ ದೇಶದ ನಾಯಕ ಇನ್ನೊಂದು ರಾಷ್ಟ್ರದ ನಾಯಕನ ಪರ ಚುನಾವಣಾ ಪ್ರಚಾರ ನಡೆಸಿದ್ದಿಲ್ಲ. ಆದರೆ, ಮೋದಿ ಅವರು ಟ್ರಂಪ್‌ ಪರವಾಗಿ ಪ್ರಚಾರ ನಡೆಸಿದರು. ಹೀಗೆ ಮಾಡಿದ್ದು ತಪ್ಪು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಕಲ್ಯಾಣ ಕರ್ನಾಟಕ ಭಾಗದ ಜನರು ಹನಿ ರಕ್ತ ಸುರಿಸದಿದ್ದರೂ, ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕುಳಿತುಕೊಳ್ಳದಿದ್ದರೂ, ನಾವು ದೂರದೃಷ್ಟಿಯಿಂದ ಕಲ್ಯಾಣ ಭಾಗಕ್ಕೆ 371(ಜೆ) ಕಲಂ ಜಾರಿಗೊಳಿಸಿದೆವು. ನಾವು ಇರಬಹುದು, ಹೋಗಬಹುದು. ಆದರೆ, ಮುಂದಿನ ಪೀಳಿಗೆಗೆ ಸಹಾಯವಾಗಲಿ ಎಂದುಕೊಂಡು ಬಹುಮತವಿಲ್ಲದ ಸಂದರ್ಭದಲ್ಲೂ ಸರ್ವಾನುಮತದಿಂದ ಈ ಕಾಯ್ದೆ ಜಾರಿಗೆ ಶ್ರಮಿಸಿದ್ದೆ’ ಎಂದರು.

‘ನಮಗೆ ದೇಶ ಮುಖ್ಯವಾಗಬೇಕೇ ಹೊರತು, ಪಕ್ಷ, ವ್ಯಕ್ತಿ ಮುಖ್ಯವಾಗಬಾರದು. ಆದರೆ, ಬಿಜೆಪಿಯವರು ಮೋದಿ ಇರುವ ತನಕ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದೆಲ್ಲ ಮಾತನಾಡುತ್ತಾರೆ. 1952ರಿಂದಲೂ ಈತನಕದ ಯಾವುದೇ ಪ್ರಧಾನಿ ಇಂಥ ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮ ಅಹಂ ಬಿಡಬೇಕು. ಎಲ್ಲರನ್ನೂ ತೆಗೆದುಕೊಂಡು ದೇಶದ ಅಭಿವೃದ್ಧಿಗೆ ದುಡಿಯಬೇಕು’ ಎಂದು ಆಗ್ರಹಿಸಿದರು.

ಪಬ್ಲಿಸಿಟಿ ಮಾಡಿಕೊಳ್ಳಲು ಬರಬೇಡ: ಖರ್ಗೆ

ಗರಂ ಅತಿವೃಷ್ಟಿಯಿಂದ ತೊಗರಿ ಹಾಳಾಗಿರುವ ಬಗೆಗೆ ಪ್ರಸ್ತಾಪಿಸಲು ಮುಂದಾದ ವ್ಯಕ್ತಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಗರಂ ಆದರು. ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಳಿಕ ವ್ಯಕ್ತಿಯೊಬ್ಬರು ತೊಗರಿ ಗಿಡಗಳೊಂದಿಗೆ ಬಂದು ಸಮಸ್ಯೆ ಹೇಳಲು ಮುಂದಾದರು. ಆಗ ಖರ್ಗೆ ಅವರು ‘ಏ ಗೊತ್ತಿದೆ. ನಾವೂ 40 ಎಕರೆಯಲ್ಲಿ ತೊಗರಿ ಬಿತ್ತಿದ್ದೇವೆ. ನನಗೆ ಸಮಸ್ಯೆ ಗೊತ್ತಿದೆ. ಇದು ಆರು ಹಡೆದವರ ಮುಂದೆ ಮೂರು ಹಡೆದವರು ಸಮಸ್ಯೆ ಹೇಳಿದಂತಾಯಿತು. ತೊಗರಿಯಷ್ಟೇ ಅಲ್ಲ ಹೆಸರು ಉದ್ದು ಹಾಳಾಗಿರುವುದು ಗೊತ್ತಿದೆ. ಪಬ್ಲಿಸಿಟಿ ಮಾಡಿಕೊಳ್ಳಲು ಬರಬೇಡ’ ಎಂದು ಗದರಿಸಿ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.