ADVERTISEMENT

ಗಿಡ ಬೆಳೆಸದವರಿಗೆ ಕಡಿಯುವ ಹಕ್ಕೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:21 IST
Last Updated 6 ಜುಲೈ 2025, 6:21 IST
<div class="paragraphs"><p>ಕಲಬುಗಿಯಲ್ಲಿ ಆಯೋಜಿಸಿದ್ದ ವನಮಹೋತ್ಸವ, ಹಸಿರು ಪಥಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶಾಲಾ ವಿದ್ಯಾರ್ಥಿಗೆ ಸಸಿ ನೀಡಿದರು. </p></div>

ಕಲಬುಗಿಯಲ್ಲಿ ಆಯೋಜಿಸಿದ್ದ ವನಮಹೋತ್ಸವ, ಹಸಿರು ಪಥಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶಾಲಾ ವಿದ್ಯಾರ್ಥಿಗೆ ಸಸಿ ನೀಡಿದರು.

   

  ಪ್ರಜಾವಾಣಿ ಚಿತ್ರ 

ಕಲಬುರಗಿ: ‘ಗಿಡ ಹಚ್ಚದವರಿಗೆ ಅದನ್ನು ಕಡಿಯುವ ಹಕ್ಕೂ ಇಲ್ಲ. ಸರ್ಕಾರ ನೆಟ್ಟ ಗಿಡದ ಬಗ್ಗೆ ಕೇಳಲು ನೀವ್ಯಾರೂ ಎಂಬ ಧೋರಣೆ ಸರಿಯಲ್ಲ. ಇಂತಹ ಮಾತುಗಳು ಪರಿಸರಕ್ಕೆ ಹಸಿರು ಹೊದಿಕೆ ಹೊಚ್ಚುವ ಸರ್ಕಾರದ ಸಂಕಲ್ಪಕ್ಕೆ ಅಡ್ಡಿಯಾಗುತ್ತವೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.

ADVERTISEMENT

ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಎಂ.ಎಸ್. ಇರಾನಿ ಕಾಲೇಜಿನ ಬಳಿಯ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವನಮಹೋತ್ಸವ, ಹಸಿರು ಪಥ ಹಾಗೂ ಕಲಬುರಗಿಯ ಹಸಿರು ಹೆಜ್ಜೆ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ರಾಜ್ಯದಲ್ಲಿ ಸಚಿವನಾಗಿದ್ದ ವೇಳೆ ಕಲಬುರಗಿಯಲ್ಲಿ ಸಸಿಗಳನ್ನು ನೆಡಲು ಪ್ರಯತ್ನ ಮಾಡಿದ್ದೆ. ರಸ್ತೆ ಬದಿಯ ಸಸಿಗಳು ದೊಡ್ಡದಾಗುತ್ತಿದ್ದಂತೆ ಅವುಗಳನ್ನು ಕಡಿದು ಕೃಷಿ ಉಪಕರಣಗಳಿಗೆ, ಮನೆ ಬಳಕೆಗೆ ಕೊಂಡೊಯ್ಯುತ್ತಿದ್ದರು. ಇದನ್ನು ಪ್ರಶ್ನಿಸಿದರೆ ಇವು ಸರ್ಕಾರದ ಗಿಡಗಳು, ಕಡಿಯಬೇಡ ಎನ್ನಲು ನೀವು ಯಾರು ಎಂದು ಪ್ರಶ್ನಿಸಿದ್ದರು. ರೈತರಿಗೆ ಕೃಷಿ ಪರಿಕರಗಳನ್ನು ತಯಾರಿಸಿಕೊಡುವ ಬಡಿಗ ಸಮುದಾಯದವರು ಎಂದಿಗೂ ಹಸಿ ಮರಗಳನ್ನು ಕಡಿದಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಸಂರಕ್ಷಿಸಿ ಬೆಳೆಯುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಕಲ್ಯಾಣ ಕರ್ನಾಟಕದಲ್ಲಿ ಅರಣ್ಯ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ. ಹೆಚ್ಚು ಸಸಿಗಳನ್ನು ನೆಟ್ಟರೆ ತಾಪಮಾನ ಹಾಗೂ ನಗರದಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿಯೇ 28 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಆ ಪೈಕಿ ಕಲಬುರಗಿ ಜಿಲ್ಲೆಯಲ್ಲಿ 7 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು. ಅರಣ್ಯ ಇಲಾಖೆಯು ಗ್ರಾಮೀಣಾಭಿವೃದ್ಧಿ ಇಲಾಖೆಯ ನರೇಗಾ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಕ್ಕ ಪಕ್ಕ ಸಸಿಗಳನ್ನು ನೆಡಲಾಗುವುದು. ಸಸಿಗಳನ್ನು ನೆಟ್ಟಿರುವ ಬಗ್ಗೆ ಮೂರನೇ ಸಂಸ್ಥೆಯ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರು 371 (ಜೆ) ಕಲಂ ಜಾರಿಗೆ ತಂದ ಬಳಿಕವೇ ಕಲ್ಯಾಣ ಕರ್ನಾಟಕದ ಪ್ರಗತಿಯು ವೇಗ ಪಡೆದುಕೊಂಡಿತು. ಇದರಿಂದಾಗಿ ಈ ಭಾಗದ ಯುವ ಜನತೆಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತಿದೆ. ಆದ್ದರಿಂದ ಇವರ ಸೇವೆಯನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿಯನ್ನು ಸರ್ಕಾರ ನೀಡಬೇಕು. ರಾಷ್ಟ್ರಪತಿ ಹುದ್ದೆಯನ್ನೂ ನೀಡಬೇಕು’ ಎಂದು ಒತ್ತಾಯಿಸಿದರು.

ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಹಾಗೂ ಇತರ ಜನಪ್ರತಿನಿಧಿಗಳು ಸಸಿ ನೆಟ್ಟು ನೀರು ಹಾಕಿದರು. ಎಚ್‌ಕೆಇ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಅಭಿಯಾನದ ಅಂಗವಾಗಿ ಸುಮಾರು ಸಾವಿರ ಸಸಿಗಳನ್ನು ನೆಡಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಹಸಿರು ಪಥ ಲೋಗೊ, ಹಸಿರು ಹೆಜ್ಜೆಗಳು ಹಾಗೂ ಹಸಿರು ಪಥದ ವಿಡಿಯೊ ಟೀಸರ್ ಬಿಡುಗಡೆಗೊಳಿಸಲಾಯಿತು.

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಶಾಸಕ ಎಂ.ವೈ. ಪಾಟೀಲ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮೇಯರ್ ಯಲ್ಲಪ್ಪ ನಾಯಕೊಡಿ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥೆ) ಮೀನಾಕ್ಷಿ ನೇಗಿ, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಕಮಿಷನರ್ ಎಸ್.ಡಿ.ಶರಣಪ್ಪ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಸಿಎಫ್ ಸುಮಿತ್ ಪಾಟೀಲ ವೇದಿಕೆಯಲ್ಲಿದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಸ್ವಾಗತಿಸಿದರು.

ಕಲಬುರಗಿಯ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಅರಣ್ಯ ಇಲಾಖೆ ನೀಡಿದ ಸಸಿಗಳೊಂದಿಗೆ ಮನೆಯತ್ತ ತೆರಳಿದರು
1972 ಹಾಗೂ 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಕಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಮರೆಯಲಾಗದ ಕೊಡುಗೆ ನೀಡಿದ್ದಾರೆ
ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ
ಕಲಬುರಗಿ ಜಿಲ್ಲೆಯಲ್ಲಿ ಕಲ್ಯಾಣ ಪಥ ಹಸಿರು ಪಥ ಯೋಜನೆ ಕೆರೆ ಅಭಿವೃದ್ಧಿ ರಸ್ತೆಗಳ ಅಭಿವೃದ್ಧಿಗೆ ಉಸ್ತುವಾರಿ ಸಚಿವ ₹ 270 ಕೋಟಿ ಅನುದಾನ ತರುವ ಮೂಲಕ ಅಭಿವೃದ್ಧಿ ಪರ್ವವನ್ನು ಆರಂಭಿಸಿದ್ದಾರೆ
ಅಲ್ಲಮಪ್ರಭು ಪಾಟೀಲ ಶಾಸಕ
ಕಡ್ಡಾಯವಾಗಿ ಪ್ರತಿಯೊಬ್ಬರೂ ಸಸಿ ಬೆಳೆಸುವ ಬಗ್ಗೆ ಕಾಯ್ದೆ ರೂಪಿಸಬೇಕು. ಪರಿಸರಕ್ಕೆ ಹಾನಿಕರವಾದ ಅಕೇಷಿಯಾ ಮರಗಳನ್ನು ಬೆಳೆಯದಂತೆ ಅರಣ್ಯ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪರಿಸರಕ್ಕೆ ಹಾನಿಯಾಗುವ ಯೋಜನೆಗಳನ್ನು ತಡೆಯಬೇಕು
ಬಿ.ಆರ್. ಪಾಟೀಲ ಶಾಸಕ ಯೋಜನಾ ಆಯೋಗದ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.