ADVERTISEMENT

ಅಂದು ಟೇಲರ್; ಇಂದು ನಾಟಕ ಕಂಪನಿ ಮಾಲೀಕ!

ಮನದಾಳದ ಮಾತು ಕಾರ್ಯಕ್ರಮ; ಅನುಭವ ಹಂಚಿಕೊಂಡ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 11:43 IST
Last Updated 2 ಸೆಪ್ಟೆಂಬರ್ 2018, 11:43 IST
ಮನದಾಳದ ಮಾತು ಕಾರ್ಯಕ್ರಮದಲ್ಲಿ ರಾಜಣ್ಣ ಜೇವರ್ಗಿ ಮಾತನಾಡಿದರು
ಮನದಾಳದ ಮಾತು ಕಾರ್ಯಕ್ರಮದಲ್ಲಿ ರಾಜಣ್ಣ ಜೇವರ್ಗಿ ಮಾತನಾಡಿದರು   

ಕಲಬುರ್ಗಿ: ಓದಿದ್ದು 5ನೇ ತರಗತಿ. ಆ ಬಳಿಕ ಬಾಹ್ಯ ವಿದ್ಯಾರ್ಥಿಯಾಗಿ ಎಸ್ಸೆಸ್ಸೆಲ್ಸಿ ಉತ್ತೀರ್ಣ. ವೃತ್ತಿ ಟೇಲರಿಂಗ್. ಪ್ರವೃತ್ತಿ ನಾಟಕ ರಚನೆ, ನಿರ್ದೇಶನ. ಅಷ್ಟೇ ಅಲ್ಲ, ಅಂದು ಟೇಲರ್ ಆಗಿದ್ದವರು ಇಂದು ನಾಟಕ ಕಂಪನಿ ಮಾಲೀಕ!

–ಇವು ಜೇವರ್ಗಿಯ ನಾಟಕ ಕಂಪನಿ ಮಾಲೀಕ, ನಟ, ನಿರ್ದೇಶಕ, ಕವಿ ರಾಜಣ್ಣ ಜೇವರ್ಗಿ ಅವರು ಬೆಳೆದುಬಂದ ಹಾದಿಯ ಹಿನ್ನೋಟ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ವೃತ್ತಿ ಜೀವನದ ಸಿಹಿ–ಕಹಿ ಅನುಭವಗಳನ್ನು ಹಂಚಿಕೊಂಡರು.

ADVERTISEMENT

ಅವರ ಮಾತುಗಳು ಹೀಗಿವೆ: ‘ಬಾಲ್ಯ ತುಂಬಾ ಬಡತನದಿಂದ ಕೂಡಿತ್ತು. ತಾಯಿ ಚಂದ್ರಮ್ಮ ಹಾಡುತ್ತಿದ್ದ ಹಾಡುಗಳನ್ನು ಕೇಳಿ ಬಾಲ್ಯದಿಂದಲೇ ಹಾಡಿನ ಅಭಿರುಚಿ ಬೆಳೆಯಿತು. ಮಠದಲ್ಲಿ ಹಾಡಲು ಆರಂಭಿಸಿದೆ. ಹಾರ್ಮೋನಿಯಂ ನುಡಿಸುವುದನ್ನು ಕಲಿತೆ. ನಮ್ಮೂರಿಗೆ ನಾಟಕ ಕಂಪನಿಗಳು ಬರುತ್ತಿದ್ದವು. ಆಗ ಕುತೂಹಲದಿಂದ ನಾಟಕಗಳನ್ನು ನೋಡುತ್ತಿದ್ದೆ’.

‘1972ರಲ್ಲಿ ತೀವ್ರ ಬರಗಾಲ. ಮಧ್ಯಮ ವರ್ಗದವರು ಬದುಕುವುದೇ ಕಷ್ಟವಾಯಿತು. ತಾಯಿಯೊಂದಿಗೆ ಕಲ್ಲು ಒಡೆಯುವ ಕೆಲಸಕ್ಕೆ ಹೋದೆ. ಕೈತುಂಬ ಗುಳ್ಳೆಗಳೆದ್ದವು. ತಾಯಿ ಮನನೊಂದು ಕೆಲಸ ಬಿಡಿಸಿ, ಮನೆಗೆ ಕಳುಹಿಸಿದರು. ತಂದೆ, ಸಹೋದರ ಆಂಧ್ರಪ್ರದೇಶಕ್ಕೆ ದುಡಿಮೆಗೆ ಹೋಗಿದ್ದರಿಂದ ಕುಟುಂಬದ ಸ್ಥಿತಿ ಸುಧಾರಿಸಿತು’.

‘ಎರಡೂವರೆ ತಿಂಗಳ ಮಗುವಿಗೆ ಹಾಲುಣಿಸಲು ತಾಯಿಯೊಬ್ಬರು ಪರದಾಡುತ್ತಿದ್ದರು. ಆದರೆ, ಅವರಿಗೆ ಎದೆ ಹಾಲು ಬರುತ್ತಿರಲಿಲ್ಲ. ಲಾರಿ ಚಾಲಕನ ಬಳಿ ಊಟಕ್ಕೆ ಹಣ ಕೇಳಿದ್ದರಿಂದ ಆತ ತನ್ನೊಂದಿಗೆ ಬಂದು ಇರುವಂತೆ ಆಕೆಗೆ ಹೇಳಿದ. ಮಗುವಿನ ಮುಖ ನೋಡಿ, ಒಂದೊತ್ತು ಊಟ ಸಿಕ್ಕರೆ ಎದೆ ಹಾಲು ಬರುತ್ತದೆ, ಮಗು ಬದುಕಿಕೊಳ್ಳುತ್ತದೆ ಎಂದು ಆಕೆ ಅವನ ಜತೆ ಹೋದಳು. ಈ ದೃಶ್ಯ ನನ್ನ ಮನಕಲುಕಿತು’.

‘ಬದುಕು ದಿಕ್ಕಿಲ್ಲದೆ ಸಾಗುತ್ತಿರುವಾಗಲೇ ನಾಟಕದ ಗೀಳು ಹೆಚ್ಚಾಯಿತು. ನಾನೇ ಒಂದು ನಾಟಕ ಬರೆದೆ. ಆ ಬಳಿಕ ಟೇಲರಿಂಗ್ ವೃತ್ತಿ ಆರಂಭಿಸಿದೆ. ನಾಟಕಗಳಲ್ಲಿ ಅಭಿನಯಿಸಲು ಮೂರು ಬಾರಿ ವೃತ್ತಿ ತೊರೆದು ಹೋಗಿದ್ದೆ. ಸಹೋದರರು ಮತ್ತೆ ಕರೆತಂದರು. ಹಲವು ಏರಿಳಿತಗಳ ಮಧ್ಯೆ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಅಭಿನಯಿಸಿದೆ’.

‘ಇದಾದ ಬಳಿಕ ಸ್ವಂತ ನಾಟಕ ಕಂಪನಿ ಆರಂಭಿಸಿದೆ. ಸಾಕಷ್ಟು ಕಷ್ಟ–ನಷ್ಟ ಅನುಭವಿಸಿದೆ. ಸಾಲ ತೀರಿಸಲು ₹18 ಸಾವಿರಕ್ಕೆ ಮನೆ ಮಾರಿದೆ. ಆ ಬಳಿಕ ಕಂಪನಿ ಕೈಹಿಡಿಯಿತು. ಈಗ ಆರಾಮವಾಗಿದ್ದೇನೆ’.

ಮಾವ ಸತ್ತ ದಿನವೇ ಅಭಿನಯ

‘ನನ್ನ ಸೋದರ ಮಾವ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ತೋರಿಸುವಂತೆ ನನ್ನ ಬಳಿ ಬಂದರು. ಆದರೆ ತಿಂಗಳಿನಿಂದ ನಾಟಕವಾಡದ್ದರಿಂದ ಕೈಯಲ್ಲಿ ಹಣ ಇರಲಿಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಇನ್ನೇನು ನಾಟಕವಾಡಲು ಆರಂಭಿಸಬೇಕು, ಅದೇ ದಿನ ಅವರು ಮೃತಪಟ್ಟರು. ಅವರನ್ನು ಮಣ್ಣು ಮಾಡಿ ಬಂದು ಹಾಸ್ಯ ಪಾತ್ರದಲ್ಲಿ ನಾನು ಅಭಿನಯಿಸಬೇಕಾಗಿತ್ತು. ಆ ದುರ್ಘಳಿಗೆಯನ್ನು ಯಾವತ್ತೂ ಮರೆಯಲಾರೆ’ ಎಂದು ಹೇಳುತ್ತಲೇ ರಾಜಣ್ಣ ಭಾವುಕರಾದರು.

ಮೊಬೈಲ್ ಹುಚ್ಚು ಹೋಗಬಹುದು!

‘ಇಂದು ಮೊಬೈಲ್ ಹುಚ್ಚು ಹೆಚ್ಚಾಗಿದೆ. ಎಲ್ಲರೂ ಅದರಲ್ಲೇ ಕಾಲಕಳೆಯುತ್ತಿದ್ದಾರೆ. ಆದರೆ ಕ್ರಮೇಣ ಈ ಹುಚ್ಚು ಹೋಗಬಹುದು’ ಎಂದು ರಾಜಣ್ಣ ಹೇಳಿದರು.

‘ರೇಡಿಯೊ, ಟಿ.ವಿ ಬಂದಾಗ ನಾಟಕಗಳು ನಿಂತೇ ಹೋದವು ಎಂದು ಜನರು ಮಾತನಾಡಿಕೊಂಡರು. ಆದರೆ ನಾಟಕ ಮತ್ತು ನಾಟಕ ಕಂಪನಿಗಳು ಇಂದಿಗೂ ಉಳಿದುಕೊಂಡಿವೆ. ಮೊಬೈಲ್ ಬಂದಿದ್ದರಿಂದ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.