
ಕಲಬುರಗಿ: ‘ಸಾಹಿತ್ಯ, ಕಲೆ, ಸಂಗೀತಕ್ಕೆ ಮಾತ್ರವೇ ನಮ್ಮ ಜೀವಕ್ಕೆ ಜೀವತ್ವ ತುಂಬುವ ಶಕ್ತಿ ಇದೆ. ಅವು ಇಲ್ಲದಿದ್ದರೆ ಬದುಕಿಗೆ ಜಡತ್ವ ತಂತಾನೆ ಆವರಿಸಿಕೊಳ್ಳುತ್ತದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮೈಸೂರು ಅಭಿಪ್ರಾಯಪಟ್ಟರು.
ನಗರದ ರಂಗಾಯಣ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಕರ ಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರ ನೇಮಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬದುಕಿನಲ್ಲಿ ಜಡತ್ವ ಹೋಗಬೇಕಾದರೆ ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಪುಸ್ತಕ ಕಾರು, ಸೈಟು, ಕೆಲಸ ಕೊಡದಿದ್ದರೂ, ಇವೆಲ್ಲವನ್ನೂ ಗಳಿಸುವ ಮನಸ್ಥಿತಿ ಕಟ್ಟಿಕೊಡುತ್ತದೆ. ಇಷ್ಟಾದರೂ ಇಂದಿಗೂ ಪುಸ್ತಕ ನಮ್ಮ ಆದ್ಯತೆಯ ವಸ್ತು ಆಗಿಲ್ಲ. ಆದ್ಯತೆಯಲ್ಲದ ವಸ್ತುವನ್ನೇ ಪ್ರತಿಷ್ಠೆಯ ವಸ್ತುವಾಗಿ ಮಾಡುವುದು ನನ್ನ ಕಲ್ಪನೆ. ಆ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ ಕನಸು ಬಿತ್ತಲಾಗುತ್ತಿದೆ’ ಎಂದರು.
‘ರಾಜ್ಯದಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳು ಹೊಂದುವಂತೆ ಮಾಡುವುದು ನಮ್ಮ ಗುರಿ. ಮಾನಸಿಕವಾಗಿ ಈಗಾಗಲೇ ಅದು ಮುಗಿದಿದೆ. ಬರೀ ಭೌತಿಕವಾಗಿ ಸ್ಥಾಪಿಸುವುದಷ್ಟೇ ಬಾಕಿ ಇದೆ. ಅದಕ್ಕಾಗಿ ಪ್ರತಿ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಜಾಗೃತ ಸಮಿತಿ ರಚಿಸಲಾಗುತ್ತಿದೆ. ಸಚಿವರು, ಶಾಸಕರು, ಸೆಲೆಬ್ರಿಟಿಗಳ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಲು ಕ್ರಮಹಿಸಲಾಗುತ್ತಿದೆ. ಇದರೊಂದಿಗೆ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮವನ್ನೂ ಯೋಜಿಸಲಾಗಿದೆ’ ಎಂದರು.
ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಪ್ರಾಧಿಕಾರದ ಸದಸ್ಯೆ ಚಂದ್ರಕಲಾ ಬಿದರಿ, ಆಡಳಿತಾಧಿಕಾರಿ ಕೆ.ಬಿ.ಕಿರಣಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಜಗದೀಶ್ವರಿ ನಾಶಿ ವೇದಿಕೆಯಲ್ಲಿದ್ದರು.
ಇದೇ ವೇಳೆ ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಿಗೆ ನೇಮಕ ಪತ್ರಗಳನ್ನು ವಿತರಿಸಲಾಯಿತು.
‘ಗ್ರಂಥಾಲಯ ಬಳುವಳಿಯಾಗಲಿ’ ‘
ಹಿಂದಿನ ಕಾಲದಲ್ಲಿ ಓದುವ ಮನಸ್ಸಿದ್ದರೂ ಕೈಗೆ ಪುಸ್ತಕಗಳೇ ಸಿಗುತ್ತಿರಲಿಲ್ಲ. ಇಂದು ಮನಸು ತುಂಬುವಷ್ಟು ಪುಸ್ತಕ ಪ್ರಕಟವಾಗುತ್ತಿವೆ. ಆದರೆ ಮೊಬೈಲ್‌ಗಳು ಕೈಗಳಲ್ಲೇ ಬೇರುಬಿಟ್ಟಂತಿವೆ. ಇದರಿಂದ ಓದಿನ ಸಂಸ್ಕೃತಿ ಕ್ಷೀಣಿಸುತ್ತಿದ್ದು ಪುಸ್ತಕ ಉದ್ಯಮ ಸಂಕಷ್ಟದಲ್ಲಿದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮೈಸೂರು ಬೇಸರಿಸಿದರು. ‘ಗ್ರಂಥಾಲಯಗಳು ಬರೀ ಪುಸ್ತಕ ಗೂಡಲ್ಲ. ಅದೊಂದು ಸಂಸ್ಕೃತಿಯಾಗಿ ಬೆಳೆಯಬೇಕಿದೆ. ಇಲ್ಲದಿದ್ದರೆ ಸದ್ಯ ಅಲ್ಪಸಂಖ್ಯಾತರಾಗಿರುವ ಗ್ರಂಥಾಲಯ ಉಳ್ಳವರ ಸಂಖ್ಯೆಯು ನಿಧಾನಕ್ಕೆ ಶೂನ್ಯದತ್ತ ಹೋಗುತ್ತದೆ. ಅದನ್ನು ತಡೆಯಲು ಮನೆ–ಮನೆಗೆ ಗ್ರಂಥಾಲಯ ಸ್ಥಾಪಿಸಿ ಮನೆ–ಸೈಟುಗಳಂತೆಯೇ ಅದನ್ನೂ ಹಿಂದಿನವರಿಗೆ ಬಳವಳಿಯಾಗಿ ನೀಡುವ ಸಂಸ್ಕೃತಿ ಬೆಳೆಸಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.