
ಕಮಲಾಪುರ: ತಾಲ್ಲೂಕಿನ ಕಲಮೂಡ ಪರುಷಗುಡ್ಡದ ದತ್ತ ದಿಗಂಬರ ಮಾಣಿಕನಾಥ ಮಂದಿರದಲ್ಲಿ ನ.24ರಂದು ಸಂಜೆ 6ಕ್ಕೆ ಕಾಶಿ ಗಂಗಾರತಿ ಮಾದರಿಯಲ್ಲಿ ಮಾಣಿಕನಾಥ ಆರತಿ ನಡೆಯಲಿದೆ ಎಂದು ಆಶ್ರಮದ ಪೀಠಾಧಿಪತಿ ಶರಣ ಶಂಕರಲಿಂಗ ಮಹಾರಾಜರು ತಿಳಿಸಿದ್ದಾರೆ.
ಕಳೆದ ನ.19ರಿಂದ ನಿರಂತರ ಅತಿರುದ್ರ ಮಹಾಯಾಗ ನಡೆಯುತ್ತಿದ್ದು, ಹೋಮ ಹವನ ಮಾಡಲಾಗುತ್ತಿದೆ. ರೈತರ ಶ್ರೇಯೋಭಿವೃದ್ಧಿ, ಸೈನಿಕರ ಸುರಕ್ಷತೆ, ಸಾರ್ವಜನಿಕರ ಸಮೃದ್ಧ ಜೀವನ, ರಾಷ್ಟ್ರದ ಹಿತಾಸಕ್ತಿ ಈಡೇರಿಸುವುದರ ಜೊತೆಗೆ ಪರಿಸರ ಮಾಲಿನ್ಯ ತಡೆಗೆ ಪ್ರಾರ್ಥಿಸಿ ಈ ಮಹಾಯಾಗ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ 6ಕ್ಕೆ ಮಾಣಿಕನಾಥರ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದೆ. 10ಕ್ಕೆ ಅತಿರುದ್ರ ಮಹಾಯಾಗ ಆರಂಭಗೊಳ್ಳಲಿದ್ದು, 108 ಯಜ್ಞ ಕುಂಡಗಳನ್ನು ನಿರ್ಮಿಸಲಾಗಿದೆ. ಶಾಸಕ ಬಸವರಾಜ ಮತ್ತಿಮಡು, ಹುಮನಾಬಾದ್ ಶಾಸಕ ಸಿದ್ದಲಿಂಗಪ್ಪ ಪಾಟೀಲ, ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ದಂಪತಿ ಸೇರಿದಂತೆ 108 ದಂಪತಿಗಳು ಈ ಅತಿರುದ್ರ ಮಹಾಯಾಗದಲ್ಲಿ ಭಾಗವಹಿಸಲಿದ್ದಾರೆ. ಕಾಶಿ ಹಾಗೂ ಶ್ರೀಶೈಲದ 200 ಜನ ಪುರೋಹಿತರಿಂದ ಈ ಯಾಗ ಸಂಪನ್ನಗೊಳ್ಳಲಿದೆ.
ಸಂಜೆ ನಡೆಯುವ ಮಾಣಿಕನಾಥ ಆರತಿಯಲ್ಲಿ ಸುಮಾರು 5 ಸಾವಿರ ಜನ ಭಾಗವಹಿಸಲಿದ್ದಾರೆ. ಕಲಮೂಡ ಗ್ರಾಮಕ್ಕೆ ತೆರಳಲು ವಿಶೇಷ ಬಸ್ ಇದ್ದು, ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.