ADVERTISEMENT

ಕಲಬುರಗಿ: ಮಣಿಕಂಠ ರಾಠೋಡಗೆ ಭದ್ರತೆ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 16:22 IST
Last Updated 6 ಡಿಸೆಂಬರ್ 2022, 16:22 IST
ಬಿಜೆಪಿ ಮುಖಂಡ ‌ಮಣಿಕಂಠ ರಾಠೋಡಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿ ಮಣಿಕಂಠ ರಾಠೋಡ ಅಭಿಮಾನಿಗಳ ಬಳಗದಿಂದ ಕಲಬುರಗಿಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಯಿತು                    –ಪ್ರಜಾವಾಣಿ ಚಿತ್ರ
ಬಿಜೆಪಿ ಮುಖಂಡ ‌ಮಣಿಕಂಠ ರಾಠೋಡಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿ ಮಣಿಕಂಠ ರಾಠೋಡ ಅಭಿಮಾನಿಗಳ ಬಳಗದಿಂದ ಕಲಬುರಗಿಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಯಿತು                    –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ಬೆಂಬಲಿಗ ರಾಜು ಕಪನೂರ್ ಅವರ ಜತೆಗೂಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಕೊಲೆಗೆ ಸಂಚು ನಡೆಸಿದ್ದಾರೆ’ ಎಂದು ಆರೋಪಿಸಿ ಮಣಿಕಂಠ ಅವರ ಬೆಂಬಲಿಗರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಣಿಕಂಠ ರಾಠೋಡ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡಿಸಿದ ಪ್ರತಿಭಟನಾಕಾರರು, ‘ಕೊಲೆ ಸಂಚು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಯಡ್ರಾಮಿ ಪೊಲೀಸರ ವಿಚಾರಣೆ ವೇಳೆ ಶಿವಲಿಂಗಪ್ಪ ಎಂಬಾತ ರಾಜು ಕಪನೂರ್ ಅವರು ಎರಡು ಪಿಸ್ತೂಲ್ ಮತ್ತು 30 ಜೀವಂತ ಗುಂಡು ಖರೀದಿಸಿದ್ದಾಗಿ ಹೇಳಿಕೆ ನೀಡಿದ್ದ. ರಾಜುವಿನಿಂದ ಪೊಲೀಸರು ₹10 ಲಕ್ಷ ಪಡೆದು ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದರು. ಮಣಿಕಂಠ ರಾಠೋಡ ಅವರು ವಿಡಿಯೊ ಬಿಡುಗಡೆ ಮಾಡಿದ ತಕ್ಷಣ, ರಾಜು ಕಪನೂರ್ ಬಂಧನವಾಯಿತು’ ಎಂದರು.

ADVERTISEMENT

‘ಪ್ರಿಯಾಂಕ್ ಅವರು ರಾಜು ಕಪನೂರ್ ಅವರ ಮೇಲಿದ್ದ ರೌಡಿಶೀಟರ್ ಮತ್ತು ಗಡಿಪಾರು ಆದೇಶ ತಡೆಹಿಡಿಯಲು ಪೊಲೀಸರಿಗೆ ಒತ್ತಡ ಹಾಕಿದ್ದರು. ಈ ಬಗ್ಗೆ ಸಾಕಷ್ಟು ದೂರು ಸಲ್ಲಿಸಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಮಣಿಕಂಠ ಅವರಿಗೆ ಪೊಲೀಸ್ ಭದ್ರತೆ ಕಲ್ಪಿಸಬೇಕು’ ಎಂದರು.

ಅಶ್ವಥ ರಾಠೋಡ, ರಾಜು ಮುಕ್ಕಣ್ಣ, ಶಿವಕುಮಾರ ಸುಣಗಾರ, ವಿಜಯಕುಮಾರ ಗುಂಡಗುರ್ತಿ, ಶ್ರೀಕಾಂತ ಸುಲೆಗಾಂವ, ಮಹೇಶ ಬಾಳಿ, ಮನೋಹರ ಪವಾರ್, ರವಿಕುಮಾರ ಡಿ.ಚವ್ಹಾಣ, ಬಸವರಾಜ ಖೇಣಿ, ರವಿ ಕೆ.ಮುದ್ನಾಳ, ಶ್ರೀಧರ ಚವ್ಹಾಣ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.