ಕಲಬುರಗಿ: ‘ಮಹಿಳಾ ಪ್ರಧಾನ ‘ಮರ್ದಿನಿ’ ಚಲನಚಿತ್ರದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಿಂದ ಪ್ರೊಮೊಷನ್ ಆರಂಭಿಸಿದ್ದು ಖುಷಿ ತಂದಿದೆ’ ಎಂದು ಚಿತ್ರದ ನಾಯಕಿ ರಿತನ್ಯಾ ಹೂವಣ್ಣ ಹೇಳಿದರು.
‘ಈ ಚಿತ್ರಕ್ಕಾಗಿ 6 ತಿಂಗಳು ತಯಾರಿ ಮಾಡಿಕೊಂಡಿದ್ದೇನೆ. ಪೊಲೀಸ್ ಅಧಿಕಾರಿ ಪಾತ್ರವಾಗಿದ್ದರಿಂದ ಅವರ ಜತೆ ಮಾತನಾಡಿ ಸಿದ್ಧತೆ ಮಾಡಿಕೊಂಡಿದ್ದೇನೆ. ಮೂರು ಫೈಟ್ ದೃಶ್ಯಗಳಿದ್ದು ಇದಕ್ಕಾಗಿ ತಿಂಗಳಿಗೂ ಹೆಚ್ಚುಕಾಲ ತರಬೇತಿ ಪಡೆದಿದ್ದೇನೆ. ಮಹಿಳೆಯರ ಮೇಲಿನ, ಶೋಷಣೆ, ದೌರ್ಜನ್ಯಕ್ಕೆ ಮರ್ದಿನಿ ಚಿತ್ರ ಕನ್ನಡಿ ಹಿಡಿಯುತ್ತದೆ. ಇದನ್ನೂ ತಡೆಯುವ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಖುಷಿಯಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರ ನಿರ್ದೇಶಕ ಕಿರಣಕುಮಾರ.ವಿ ಮಾತನಾಡಿ, ‘ನಮ್ಮ ಚಿತ್ರದಲ್ಲಿ ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ. ಚಿಕ್ಕಮಗಳೂರು, ಬೆಂಗಳೂರಿನಲ್ಲಿ 35 ರಿಂದ 40 ದಿನಗಳ ಚಿತ್ರೀಕರಣ ಮಾಡಿದ್ದು ಕಲ್ಯಾಣ ಕರ್ನಾಟಕದ ಅನೇಕ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಶ್ವಾನವೊಂದು ಪ್ರಮುಖ ಪಾತ್ರ ನಿರ್ವಹಿಸಿದೆ’ ಎಂದರು.
‘ಕನ್ನಡ ಚಿತ್ರಗಳ ಸ್ಟ್ಯಾಂಡಿ ಮೇಕರ್ ಜಗದೀಶ ಜಗ್ಗಿ, ಚಿತ್ರಕ್ಕೆ ಅರುಣ್ ಸುರೇಶ ಛಾಯಾಗ್ರಹಣ, ವಿಶ್ವ ಅವರ ಸಂಕಲನವಿದೆ. ಹಿತನ್ ಹಾಸನ್ ಅವರ ಸಂಗೀತ ನಿರ್ದೇಶನವಿದೆ. ಕಿರಣಕುಮಾರ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರ ಇನ್ನೂ ಸೆನ್ಸಾರ್ ಆಗಬೇಕಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ’ ಎಂದು ಅವರು ತಿಳಿಸಿದರು.
ಚಿತ್ರನಿರ್ಮಾಪಕಿ ಭಾಗಿರಥಿ ಜಗದೀಶ ಜಗ್ಗಿ, ಅಮೃತ, ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.