ADVERTISEMENT

ಗ್ರಾ.ಪಂ. ಸದಸ್ಯರ ಮಧ್ಯಸ್ಥಿಕೆಯಲ್ಲಿ ಒಂದಾದ ಜೋಡಿ!

ಬೆಂಗಳೂರಿಂದ ಕರೆ ತಂದು ಮಾದನ ಹಿಪ್ಪರಗಿಯಲ್ಲಿ ಸರಳ ಮದುವೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 16:37 IST
Last Updated 13 ಸೆಪ್ಟೆಂಬರ್ 2022, 16:37 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಪ್ರೇಮಿಗಳಿಬ್ಬರ ಮದುವೆ ಜರುಗಿತು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಪ್ರೇಮಿಗಳಿಬ್ಬರ ಮದುವೆ ಜರುಗಿತು   

ಆಳಂದ (ಕಲಬುರಗಿ ಜಿಲ್ಲೆ): ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ಸೋಮವಾರ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಸರಳ ವಿವಾಹವಾದರು.

ಮಾದನ ಹಿಪ್ಪರಗಿ ಗ್ರಾಮದ ಅಶ್ವಿನಿ ಬಸವರಾಜ ಸಾಲಿ (20) ಹಾಗೂ ಭಾಗಣ್ಣಾ ಮಲ್ಲಪ್ಪ ಗಿದಣಿ (24) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಬೇರೆ ಜಾತಿಗೆ ಸೇರಿದವರು.

ಯುವಕ ಭಾಗಣ್ಣ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಯುವತಿಯು ಬೆಂಗಳೂರಿಗೆ ತೆರಳಿದ್ದಳು. ಯುವತಿ ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ADVERTISEMENT

ಗ್ರಾಮದ ಹಿರಿಯರು ಹಾಗೂ ಪೊಲೀಸರು ಗ್ರಾಮಕ್ಕೆ ವಾಪಸಾದರೆ ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಮಾದನ ಹಿಪ್ಪರಗಿ ಗ್ರಾಮಕ್ಕೆ ಬಂದರು. ಎರಡೂ ಕುಟುಂಬದ ಸದಸ್ಯರು, ಸಮುದಾಯದ ಹಿರಿಯರು ಮಾತುಕತೆ ನಡೆಸಿ ಅಂತಿಮವಾಗಿ ಮದುವೆಗೆ ಒಪ್ಪಿಗೆ ಸೂಚಿಸಿದ ನಂತರ ಪೊಲೀಸ್ ಠಾಣಾ ಆವರಣದಲ್ಲಿನ ಹನುಮಾನ ಮಂದಿರದಲ್ಲಿಯೇ ಪ್ರೇಮಿಗಳಿಬ್ಬರ ಸರಳ ವಿವಾಹವಾದರು.

ನವ ಜೋಡಿಗಳಿಗೆ ನೆರೆದ ಹಿರಿಯರು, ಪಾಲಕರು ಶುಭ ಕೋರಿದರು. ಗ್ರಾಮ ಪಂಚಾಯಿತಿಯಿಂದ ಅಧಿಕೃತವಾಗಿ ವಿವಾಹ ಪ್ರಮಾಣ ಪತ್ರವು ವಿತರಣೆ ಮಾಡಲಾಯಿತು.

ತಾ.ಪಂ ಮಾಜಿ ಅಧ್ಯಕ್ಷ ಶಿವಪ್ಪ ಕೊಳಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ ಜಮಾದಾರ, ಶ್ರೀಶೈಲ ಸಾಲಿ, ಮಲ್ಲಿನಾಥ ದುದಗಿ, ಧರ್ಮಣ್ಣಾ ಕೌಲಗಿ, ಪರಮೇಶ್ವರ ಭೂಸನೂರು, ಪಿಡಿಒ ಓದುಲಿಂಗ ಹಾಗೂ ಸಮುದಾಯದ ಹಿರಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.