ADVERTISEMENT

ಸಿಗದ ನರೇಗಾ ಕೂಲಿ ಹಣ; ಕೂಲಿಕಾರ್ಮಿಕರ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 15:34 IST
Last Updated 20 ಮಾರ್ಚ್ 2023, 15:34 IST
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ನರೇಗಾ ಕೂಲಿ ಹಣ ಪಾವತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ನರೇಗಾ ಕೂಲಿ ಹಣ ಪಾವತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು   

ಕಲಬುರಗಿ: ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡ ನಾಲ್ಕು ವಾರಗಳ ಹಣ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ(ಕೆಪಿಆರ್‌ಎಸ್‌) ಸದಸ್ಯರು, ನೂರಾರು ಕೂಲಿಕಾರ್ಮಿಕರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದರು.

‘ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ 4 ವಾರ ಕೆಲಸ ಮಾಡಿದ್ದರೂ ಕೂಲಿ ಹಣ ಪಾವತಿ ಆಗಿಲ್ಲ. ಎಂಎಂಎಸ್‌ ಆ್ಯಪ್ ಸರ್ವರ್ ಸಮಸ್ಯೆ ಕಾರಣ ಹಾಜರಾತಿ ಕಡಿತವಾಗುತ್ತಿದೆ. ಎನ್‌ಪಿಸಿಐ ಆಧಾರ್ ಸೀಡಿಂಗ್ ಮತ್ತು ಇ–ಕೆವೈಸಿ ಮ್ಯಾಪಿಂಗ್‌ಗಾಗಿ ಬ್ಯಾಂಕ್‌ಗೆ ದಾಖಲೆಗಳು ನೀಡಿದ್ದರೂ ಮ್ಯಾಪಿಂಗ್ ಆಗುತ್ತಿಲ್ಲ. ಎನ್‌ಎಂಆರ್‌ಗಳು ಶೂನ್ಯ ಮಾಡಲಾಗುತ್ತಿದೆ’ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

‘ಚಿತ್ತಾಪುರ, ಸೇಡಂ, ಜೇವರ್ಗಿ, ಚಿಂಚೋಳಿ, ಕಾಳಗಿ, ಆಳಂದ, ಶಹಾಬಾದ್ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ನಮೂನೆ–6 ನೀಡಿದರೂ ಕೆಲಸ ಕೊಡುತ್ತಿಲ್ಲ. ಕೂಲಿ ಕಾರ್ಮಿಕರು ಕೆಲಸಕ್ಕಾಗಿ ನಗರಗಳಿಗೆ ಗುಳೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಗ್ರಾಮಗಳಲ್ಲಿ ಕೆಲಸ ನೀಡಿದ್ದರೂ ಎಂಎಂಎಸ್‌ ಆ್ಯಪ್ ಸರ್ವರ್ ಸಮಸ್ಯೆಯಿಂದ ಹಾಜರಿ ಕಡಿತವಾಗಿದೆ. ಪರಿಣಾಮ ಕಾರ್ಮಿಕರು ದುಡಿದ ವೇತನಕ್ಕಾಗಿ ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮ ಪಂಚಾಯಿತಿಯಲ್ಲಿ ನರೇಗಾದಲ್ಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಕಳೆದ ವರ್ಷದ ಐದು ವಾರಗಳ ಕೂಲಿಯ ದಿನಗಳ ಕೆಲಸವೂ ನೀಡಿಲ್ಲ. ಇ–ಕೆವೈಸಿ ಆಗದ ಪಟ್ಟಿ ನೀಡುವಂತೆ ಕೋರಿದ್ದರೂ ಕೊಡುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರು ಅಲೆದಾಡುವಂತೆ ಆಗಿದೆ ಎಂದು ಆರೋಪಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ರೇವನೂರ, ವರ್ಚನಳ್ಳಿ, ಮುತ್ತುಕೋಡ್, ಮುದವಾಳ(ಬಿ) ಗ್ರಾಮಗಳಲ್ಲಿ ಸರ್ವರ್ ಸಮಸ್ಯೆಯಿಂದ ಹಾಜರಿ ಕಡಿತವಾಗಿದೆ. ಕಾಳಗಿ ತಾಲ್ಲೂಕಿನ ರಾಜಾಪುರ ಗ್ರಾಮ ಪಂಚಾಯಿತಿಯವರು ಇಲ್ಲಿಯವರೆಗೂ ಕೆಲಸ ಕೊಟ್ಟಿಲ್ಲ. ಶಹಾಬಾದ್ ತಾಲ್ಲೂಕಿನ ಹೊನಗುಂಟಾ ಗ್ರಾಮ ಪಂಚಾಯಿತಿ 472 ಉದ್ಯೋಗ ಕಾರ್ಡ್ ತೆಗೆದು ಹಾಕಲಾಗಿದ್ದು, ಹೊಸ ಜಾಬ್ ಕಾರ್ಡ್ ಸಹ ಕೊಡುತ್ತಿಲ್ಲ. ಹೊನಗುಂಟಾ ಗ್ರಾಮದಲ್ಲಿ ನರೇಗಾ ಕೆಲಸದ ವೇಳೆ ಮೃತಪಟ್ಟ ಶಂಕರ ಸಾಯಬಣ್ಣ ಅವರ ಕುಟುಂಬದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸೇಡಂ ತಾಲ್ಲೂಕಿನ ಆಡಕಿ ಗ್ರಾ.ಪಂ.ನ ಹುಡಾ ಮತ್ತು ಮದ್ರಿ ಗ್ರಾಮದ ಕಾರ್ಮಿಕರು ನಮೂನೆ–6 ನೀಡಿದ್ದರೂ ಕೆಲಸ ಕೊಡುತ್ತಿಲ್ಲ. ಹೀಗೆ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಒಂದಲ್ಲಾ ಒಂದು ಸಮಸ್ಯೆ ತಲೆದೋರಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದರು.

‘ಕೂಡಲೇ ಅಧಿಕಾರಿಗಳು ಜಿಲ್ಲಾ ಮಟ್ಟದ ನರೇಗಾ ಕುಂದುಕೊರತೆಗಳ ಸಭೆ ಕರೆಯಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವರ್, ತಾಂತ್ರಿಕ, ಇತರೆ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಬಾಕಿ ಕೂಲಿ ಹಣ ನೀಡಬೇಕು’ ಎಂದು ಅವರು ಕೋರಿದರು.

ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಸಾಯಬಣ್ಣ ಗುಡುಬಾ, ಸುಭಾಷ ಹೊಸಮನಿ, ರಾಯಪ್ಪ ಹುರುಮುಂಜಿ, ದಿಲೀಪ್ ನಾಗೊರೆ, ಗಿಡ್ಡಮ್ಮ ಪವಾರ್, ಜಾಫರ್ ಖಾನ್, ಪ್ರಭುರಾಜ ಕಾಂತಾ, ಶಂಕರಲಿಂಗ, ಶರಣಪ್ಪ ಬೆಟಗೇರಿ, ಸಿದ್ದಮ್ಮ ಮುತ್ತಿಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.