
ಕಮಲಾಪುರ: ಸರ್ಕಾರಿ ಶಾಲೆಗಳಲ್ಲಿ ವಿವಿಧ ಯೋಜನೆಗಳಡಿ ಆರಂಭಿಸಲಾಗಿರುವ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡಿ.1ರಿಂದ ಅನ್ವಯವಾಗುವಂತೆ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಬಿಸಿಹಾಲು ಮತ್ತು ಪೂರಕ ಪೌಷ್ಟಿಕ ಆಹಾರವಾದ ಬಾಳೆಹಣ್ಣು, ಮೊಟ್ಟೆ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಆದೇಶಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಶುಭಮಂಗಳ ಆರ್.ವಿ. ಅವರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ನ.29ರಂದು ಈ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ವತಿಯಿಂದ ಆರಂಭಿಸಲಾಗಿರುವ ಪೂರ್ವ ಪ್ರಾಥಮಿಕ ಶಾಲೆಗಳು, ಪಿಎಂಶ್ರೀ ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಆರಂಭಿಸಿದ ಶಾಲೆಗಳು, ಮ್ಯಾಗ್ನೇಟ್ ಶಾಲೆಗಳು ಸೇರಿದಂತೆ ಈಗಾಗಲೇ 2018–2019ನೇ ಸಾಲಿನಿಂದ 2024–25ನೇ ಸಾಲಿನವರೆಗೆ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗಿರುವ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಹಾಗೂ 2025–26ನೇ ಸಾಲಿನ ಆಯವ್ಯಯದಂತೆ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗಿರುವ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದೆ.
ಈಗಾಗಲೇ ಕರ್ನಾಟಕ ಪಬ್ಲಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಕೊಡುತ್ತಿರುವ ಬೆಳಗ್ಗಿನ ಉಪಹಾರವನ್ನು ಡಿ.1ರಂದಲೇ ರದ್ದು ಪಡಿಸಬೇಕು. ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ, ಬಿಸಿ ಹಾಲು, ಬಾಳೆ ಹಣ್ಣು, ಮೊಟ್ಟೆ ವಿತರಿಸಬೇಕು.
ವಾರದಲ್ಲಿ 6 ದಿನ ಮಧ್ಯಾಹ್ನದ ಬಿಸಿಯೂಟ ನೀಡಬೇಕು. ಶೇ 60–40ರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವೆಚ್ಚ ಭರಿಸಲಿವೆ. ಕ್ಷೀರಬಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ ಬಿಸಿ ಹಾಲು, ಎರಡು ದಿನ ಮೊಟ್ಟೆ, ಬಾಳೆಹಣ್ಣು ವಿತರಿಸಬೇಕು. ಹಾಲು, ಬಾಳೆಹಣ್ಣು, ಮೊಟ್ಟೆಯ ಪೂರ್ತಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
ಈ ಕಾರ್ಯಕ್ರಮ ಅನುಷ್ಠಾನಕ್ಕೆ ಶಾಲಾ ಹಂತದಲ್ಲಿ ಅಗತ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮವಹಿಸಬೇಕು. ಪೂರ್ವ ಪ್ರಾಥಮಿಕ ಎಲ್ಲ ಮಕ್ಕಳ ಮಾಹಿತಿಯನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ಇಂದೀಕರಿಸಬೇಕು.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಖಾತರಿ ಪಡಿಸಕೊಳ್ಳಬೇಕು. ಇಂದೀಕರಣಗೊಳ್ಳದ ಮಕ್ಕಳ ಮಾಹಿತಿಯನ್ನು ಕೂಡಲೇ ಇಂದೀಕರಿಸಲು ಕ್ರಮವಹಿಸಬೇಕು. ಮಕ್ಕಳ ಆಧಾರ ಸಂಖ್ಯೆಯನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ಜೋಡಣೆ ಮಾಡಬೇಕು. ಎಪಿಎಎಆರ್ ಐಡಿ ಸೃಜಿಸುವ ಕಾರ್ಯವನ್ನು ಇದೆ ಡಿ.31ರೊಳಗೆ ಪೂರ್ಣಗೊಳಿಸಬೇಕು.
ಬಿಸಿಯೂಟ, ಬಿಸಿ ಹಾಲು, ಬಾಳೆ ಹಣ್ಣು, ಮೊಟ್ಟೆ ನೀಡಲು ಹೆಚ್ಚುವರಿ ಸಹಾಯಕ ಅಡುಗೆ ಸಿಬ್ಬಂದಿ ನೇಮಿಸಿಕೊಳ್ಳುವಾಗ ಶಾಲೆಯಲ್ಲಿನ ಎಲ್ಲ ತರಗತಿಗಳ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ, 2010ರ ನವೆಂಬರ್ 10ರ ಸರ್ಕಾರದ ಆದೇಶ ಇಪಿ–96 ಎಂಎಂಎಸ್ 2009ರಲ್ಲಿ ನೀಡಲಾಗಿರುವ ಮಾರ್ಗಸೂಚಿಯಂತೆ ನೇಮಕ ಮಾಡಿಕೊಳ್ಳಲು ಶಾಲಾ ಹಂತದಲ್ಲಿ ಕ್ರಮವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪೂರ್ವ ಪ್ರಾಥಮಿಕ ಮಕ್ಕಳಿಗೂ ಬಿಸಿಯೂಟ ಒದಗಿಸಲು ಸರ್ಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು ಡಿ.1ರಿಂದ ಚಾಲನೆಗೊಳ್ಳಲಿದೆಈಶ್ವರ ನೀರಡಗಿ ಅಕ್ಷರ ದಾಸೋಹ ಉಪ ನಿರ್ದೇಶಕ
ಅಜೀಂ ಪ್ರೇಮ್‌ಜಿ ಫೌಂಢೇಶನ್‌ನೊಂದಿಗೆ ಒಡಂಬಡಿಕೆ
ಈಗಾಗಲೇ ಮಾಡಿಕೊಂಡಿರುವ ಒಡಂಬಡಿಕೆಯಂತೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಂಸ್ಥೆಯವರು ವಾರದ ನಾಲ್ಕು ದಿನ ಬಾಳೆ ಹಣ್ಣು ಮೊಟ್ಟೆ ವಿತರಿಸುತ್ತಾರೆ. ಈ ಪೂರ್ವ ಪ್ರಾಥಮಿಕ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೂ ಇನ್ನುಳಿದ ನಾಲ್ಕು ದಿನ ಅಜೀಂ ಪ್ರೇಮ್‌ಜಿ ಪೌಂಢೇಶನ್ ಸಂಸ್ಥೆಯವರೆ ಬಾಳೆ ಹಣ್ಣು ಮೊಟ್ಟೆ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
4056 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ
ಸರ್ಕಾರದ ಆದೇಶದಂತೆ 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕಾರ್ನಾಟಕ ಯೋಜನೆಯಡಿ 1105 ಶಾಲೆಗಳು 126 ಪಿಎಂಶ್ರೀ ಶಾಲೆಗಳು ಕೆಕೆಆರ್‌ಡಿಬಿ ಯೋಜನೆಯಡಿ 1126 ಶಾಲೆಗಳು ಮತ್ತು 1699 ಮ್ಯಾಗ್ನೇಟ್ ಶಾಲೆಗಳು ಸೇರಿದಂತೆ ಒಟ್ಟಾರೆ 4056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಸಂಬಂಧ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಿ ಆದೇಶಿಸಲಾಗಿದೆ.