ADVERTISEMENT

ಕಾಮಗಾರಿ ಪರಿಶೀಲಿಸುವವರೆಗೆ ಬಿಲ್‌ ತಡೆಯಿಸಿ

ರಾಜ್ಯ ನೀರಾವರಿ ನಿಗಮದ ಯೋಜನೆಗಳ ಗುಣಮಟ್ಟದ ಬಗ್ಗೆ ಆಕ್ಷೇಪ; ಸಚಿವ ರಮೇಶ ಜಾರಕಿಹೊಳಿ ತಾಕೀತು

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 15:57 IST
Last Updated 2 ಜುಲೈ 2020, 15:57 IST
ಕಲಬುರ್ಗಿಯಲ್ಲಿ ಗುರುವಾರ ಸಚಿವ ರಮೇಶ ಜಾರಕಿಹೊಳಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಕಲಬುರ್ಗಿಯಲ್ಲಿ ಗುರುವಾರ ಸಚಿವ ರಮೇಶ ಜಾರಕಿಹೊಳಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಕಲಬುರ್ಗಿ: ‘ರಾಜ್ಯ ನೀರಾವರಿ ನಿಗಮವು ಜಿಲ್ಲೆಯಲ್ಲಿ ಕೈಗೊಂಡಿರುವ ಕೆಲ ಕಾಮಗಾರಿಗಳಲ್ಲಿ ಅವ್ಯವಹಾರ, ಕಳಪೆ ಮುಂತಾದ ದೂರುಗಳು ಕೇಳಿ ಬಂದಿವೆ. ಇದು ಪರಿಶೀಲನೆ ಆಗುವವರೆಗೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಾಕೀತು ಮಾಡಿದರು.

ನಗರದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಬೆಣ್ಣೆತೊರಾ, ಮುಲ್ಲಾಮಾರಿ ಹಾಗೂ ಗಂಡೋರಿ ನಾಲಾ ಯೋಜನೆಗಳ ಕಾಮಗಾರಿಗಳ ಅವಸ್ಥೆ ಬಗ್ಗೆ ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಬಸವರಾಜ ಮುತ್ತಿಮೂಡ, ಡಾ.ಅವಿನಾಶ ಜಾಧವ ಅವರು ಸಚಿವರ ಗಮನ ಸೆಳೆದರು. ಕಾಮಗಾರಿಗಳ ಆರ್ಥಿಕ ಗುರಿ ಹೆಚ್ಚಿಗೆ ಇದೆ. ಆದರೆ, ಅದಕ್ಕೆ ತಕ್ಕಂತೆ ಭೌತಿಕ ಗುರಿ ಸಾಧಿಸಲಾಗಿಲ್ಲ ಎಂದು ಆಕ್ಷೇಪವೆತ್ತಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ‘ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳು ಖುದ್ದಾಗಿ ಕಾಮಗಾರಿ ಪರಿಶೀಲನೆ ನಡೆಸಬೇಕು. ಇದರ ವರದಿಯನ್ನು ಒಂದು ವಾರದಲ್ಲಿ ವರದಿ ಸಲ್ಲಿಸಬೇಕು’ ಎಂದರು.‌

‘ಕಾಮಗಾರಿಗಳ ಗುಣಮಟ್ಟ ವೀಕ್ಷಿಸುವ 3ನೇ ತಂಡದ ಬಗ್ಗೆಯೇ ಸಂಸದರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, 4ನೇ ತಂಡವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯ ಪ್ರೊ.ಶ್ರೀನಿವಾಸ್ ಅವರಿಂದ ತಪಾಸಣೆ ಮಾಡಿಸಲಾಗುವುದು. ಶೀಘ್ರದಲ್ಲಿ ಇನ್ನೊಮ್ಮೆ ಜಿಲ್ಲೆಗೆ ಬಂದು, ಎರಡು ದಿನ ಇಲ್ಲೇ ವಾಸ್ತವ್ಯ ಮಾಡಿ ನೀರಾವರಿ ಯೋಜನೆಗಳನ್ನು ಪೂರ್ಣವಾಗಿ ಪರಿಶೀಲಿಸುತ್ತೇನೆ’ ಎಂದರು.

ಕಲಬುರ್ಗಿ ನೀರಾವರಿ ಯೋಜನಾ ವಲಯದಲ್ಲಿ ಬರುವ ಬೀದರ್‌ ಜಿಲ್ಲೆಯ ಕಾರಾಂಜಾ, ಚುಳಕಿನಾಲಾ ಹಾಗೂ ಯಾದಗಿರಿ ಜಿಲ್ಲೆ ಹತ್ತಿಕುಣಿ ಮತ್ತು ಸೌದಾಗಾರ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಬೀದರ್‌ ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಸಂಸದ ಜಾಧವ ಮಾತನಾಡಿ, ಜಿಲ್ಲೆಯ ಗಡಿ ಲಿಂಗದಳ್ಳಿ ಯೋಜನೆ ಪುನರ್ವಸತಿ ಕೇಂದ್ರಗಳ ಮೂಲಭೂತ ಸೌಕರ್ಯಕ್ಕೆ ₹ 18 ಕೋಟಿ ಅನುದಾನ ನೀಡಲಾಗಿದೆ. ಇದುವರೆಗೆ ₹ 12 ಕೋಟಿ ಖರ್ಚಾಗಿದೆ. ಗಣಮಟ್ಟದ ರಸ್ತೆ, ವಿದ್ಯುತ್, ಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಿಸಿಲ್ಲ ಎಂದರು. ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನೂ ಸಭೆಯ ಗಮನಕ್ಕೆ ತಂದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಜೆ, ಸಚಿವರ ಅನ್ಯ ಕರ್ತವ್ಯ ಅಧಿಕಾರಿ (ಒಎಸ್‍ಡಿ) ರುದ್ರಯ್ಯ, ಅಧೀಕ್ಷಕ ಎಂಜಿನಿಯರ್‌ ಜಗನ್ನಾಥ ಹಲಿಂಗೆ, ಕಾರ್ಯಕಾರಿ ಎಂಜಿನಿಯರ್‌ ವಿಲಾಸಕುಮಾರ ಮಾಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.