
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಆವರಣದಲ್ಲಿ ಶುಕ್ರವಾರ ಅನ್ನದಾಸೋಹ ಭವನಕ್ಕೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಡಿಗಲ್ಲು ನೆರವೇರಿಸಿದರು.
–ಪ್ರಜಾವಾಣಿ ಚಿತ್ರ
ಕಲಬುರಗಿ: ‘ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಾದ ಭಾಗ್ಯವಂತಿ ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದೆ. ಅದಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ’ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅಫಜಲಪುರ ತಾಲ್ಲೂಕಿನ ಗಾಣಗಾಪುರದ ಪ್ರವಾಸಿ ಮಂದಿರದಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಹಾಗೂ ಘತ್ತರಗಾದ ಭಾಗ್ಯವಂತಿ ದೇವಸ್ಥಾನ ಅಭಿವೃದ್ಧಿಗೆ ಜಿಲ್ಲಾಡಳಿತ ರೂಪಿಸಿರುವ ಮಾಸ್ಟರ್ ಪ್ಲ್ಯಾನ್ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಘತ್ತರಗಾದಲ್ಲಿ 16 ಎಕರೆ ಪ್ರದೇಶದಲ್ಲಿ ₹40 ಕೋಟಿ ವೆಚ್ಚದಲ್ಲಿ ವಾಹನಗಳ ನಿಲುಗಡೆ, ದಾಸೋಹ ಭವನ, ಅಡುಗೆ ಮನೆ, ಕಲ್ಯಾಣ ಮಂಟಪ, ಯಾತ್ರಿ ನಿವಾಸ, ಸಾಮೂಹಿಕ ಅಡುಗೆ ತಾಣಗಳು ಹಾಗೂ ಸಾಮೂಹಿಕ ಶೌಚಾಲಯಗಳ ಸ್ಥಾಪನೆಗೆ ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅದನ್ನು ಪರಿಶೀಲಿಸಿ ಶೀಘ್ರವೇ ಅನುಮೋದನೆ ನೀಡಲಾಗುವುದು’ ಎಂದರು.
‘ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗಾಗಿ ಈಗಾಗಲೇ ಪ್ರಸಾದ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರಕ್ಕೆ ಇಂಥ ನೂರಾರು ಪ್ರಸ್ತಾವಗಳು ಹೋಗಿದ್ದರಿಂದ ಸದ್ಯ ಅದಕ್ಕೆ ಅನುಮೋದನೆ ಸಿಕ್ಕಿಲ್ಲ. ಜೊತೆಗೆ ಗಾಣಗಾಪುರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒಂದಿಷ್ಟು ಜಾಗ ಸ್ವಾಧೀನ ಪಡಿಸಿಕೊಳ್ಳುವ ಅಗತ್ಯವಿದೆ. ಮತ್ತೊಂದಿಷ್ಟು ಜಾಗವನ್ನು ಜಿಲ್ಲಾಡಳಿತ ಗುರುತಿಸಿದೆ. ಹೀಗಾಗಿ ಈ ಯೋಜನೆಯೊಂದಿಗೆ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರಿಗೆ ಬರಲು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇನೆ. ಅಲ್ಲಿಯೇ ಜಿಲ್ಲೆಯ ಸಚಿವರು, ಶಾಸಕರೊಂದಿಗೂ ಚರ್ಚಿಸಿ, ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುವುದು’ ಎಂದರು.
ಜಿಲ್ಲಾಧಿಕಾರಿ ಮಾಹಿತಿ: ಇದಕ್ಕೂ ಮುನ್ನ ದತ್ತಾತ್ರೇಯ ದೇವಸ್ಥಾನ ಹಾಗೂ ಭಾಗ್ಯವಂತಿ ದೇವಸ್ಥಾನ ಅಭಿವೃದ್ಧಿ ಯೋಜನೆಗಳ ಕುರಿತು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಸಚಿವರಿಗೆ ವಿವರಿಸಿದರು.
‘ದತ್ತಾತ್ರೇಯ ದೇವಸ್ಥಾನಕ್ಕೆ ವಾರ್ಷಿಕ 20 ಲಕ್ಷದಿಂದ 30 ಲಕ್ಷದಷ್ಟು ಭಕ್ತರು ಭೇಟಿ ನೀಡುತ್ತಾರೆ. ಅಂದಾಜು ₹3.5 ಕೋಟಿಗಳಷ್ಟು ವರಮಾನವಿದೆ. ಬರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳಿಲ್ಲ. ಕುಡಿಯುವ ನೀರು ಹಾಗೂ ಶೌಚಾಲಯದ ಸಮಸ್ಯೆ ತೀವ್ರವಾಗಿದೆ. ಸದ್ಯ ಮೂರು ಹಂತದಲ್ಲಿ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ದೇವಸ್ಥಾನದ ಬಳಿ ನಾಲ್ಕೈದು ಮನೆಗಳಿದ್ದು, ಅಭಿವೃದ್ಧಿಯ ಹಿತದೃಷ್ಟಿಯಿಂದ ಅವುಗಳನ್ನು ಸ್ವಾಧೀನಕ್ಕೆ ಪಡೆಯಬೇಕಾಗುತ್ತದೆ’ ಎಂದು ತರನ್ನುಮ್ ಸಚಿವರಿಗೆ ವಿವರಿಸಿದರು.
‘ಇದರೊಂದಿಗೆ ಸಂಗಮ ಪ್ರದೇಶಕ್ಕೂ ಅಸಂಖ್ಯ ಭಕ್ತರು ಭೇಟಿ ನೀಡುತ್ತಾರೆ. ಭೀಮಾ ನದಿ ತಡದಲ್ಲಿ ಅಷ್ಟ ತೀರ್ಥಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಹುಣ್ಣಿಮೆ ಹೊತ್ತಲ್ಲಿ ಸರಾಸರಿ ಏಳು ಸಾವಿರದಷ್ಟು ಕಾರುಗಳು ಬರುತ್ತವೆ. ಹೀಗಾಗಿ ಬಹುಮಹಡಿ ಪಾರ್ಕಿಂಗ್, ಹೆಲಿಪ್ಯಾಡ್‌ಗೂ ಯೋಜನೆ ರೂಪಿಸಿದ್ದೇವೆ. ಇದೆಲ್ಲಕ್ಕೂ 16 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಎಲ್ಲವನ್ನೂ ಆಲಿಸಿದ ಸಚಿವರು, ‘ಇದೆಲ್ಲವನ್ನೂ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರಿಗೆ ತನ್ನಿ. ಅಲ್ಲಿಯೇ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಕ್ರಮವಹಿಸೋಣ’ ಎಂದರು.
ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕೆಕೆಆರ್‌ಟಿಸಿ ಎಂಡಿ ಬಿ.ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಎಸಿ ಸಾಹಿತ್ಯ ಆಲದಕಟ್ಟಿ ಹಾಗೂ ಇತರ ಅಧಿಕಾರಿಗಳು ಇದ್ದರು.
ಬಹುದಿನಗಳ ಬೇಡಿಕೆಯಾದ ಗಾಣಗಾಪುರ ಅಭಿವೃದ್ಧಿ ಇನ್ನೂ ಆಗಿಲ್ಲ. ವರ್ಷಕ್ಕೆ ಕೋಟಿಯಷ್ಟು ಭಕ್ತರು ಬರುತ್ತಾರೆ. ಅವರೆಲ್ಲ ಶಾಪ ಹಾಕುತ್ತಿದ್ದಾರೆ– ಎಂ.ವೈ.ಪಾಟೀಲ ಶಾಸಕ
ದಾಸೋಹ ಭವನಕ್ಕೆ ಸಚಿವರಿಂದ ಚಾಲನೆ
ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅಧೀನದಲ್ಲಿ ಬರುವ ತುಂತುಕೇಶ್ವರ ದೇವಸ್ಥಾನದ ಅನ್ನದಾಸೋಹ ಭವನ ನಿರ್ಮಾಣಕ್ಕೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ‘ನಾನು ಮುಜರಾಯಿ ಸಚಿವನಾದ ಬಳಿಕ ಯಾವುದೇ ದೇವಸ್ಥಾನವನ್ನು ಯದ್ವಾತದ್ವಾ ಅಭಿವೃದ್ಧಿಪಡಿಸಲು ಅವಕಾಶ ನೀಡಿಲ್ಲ. ಅದಕ್ಕೆ ವ್ಯವಸ್ಥಿತವಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಅಭಿವೃದ್ಧಿ ಮಾಡಲು ಒತ್ತು ನೀಡಿದ್ದೇನೆ. ಈ ದೇವಸ್ಥಾನದ ಅಭಿವೃದ್ಧಿಗೂ ಮಾಸ್ಟರ್ ಪ್ಲಾನ್ ಸಿದ್ಧವಿದೆ. ದತ್ತನ ಸುಕ್ಷೇತ್ರ ಅಭಿವೃದ್ಧಿಯಾಗಬೇಕು ಎಂಬುದು ಎಲ್ಲರ ಹೆಬ್ಬಯಕೆ. ಅದಕ್ಕೆ ಇಲಾಖೆಯಿಂದ ಅನುದಾನ ಸೇರಿದಂತೆ ಅಭಿವೃದ್ಧಿಗೆ ಸಕಲ ನೆರವು ನೀಡಲಾಗುವುದು’ ಎಂದರು.
ದಾಸೋಹ ಭವನಕ್ಕೆ ಆರ್ಥಿಕ ನೆರವು ನೀಡಿರುವ ಆಂಧ್ರಪ್ರದೇಶದ ವಿಜಯವಾಡದ ಭಕ್ತರಾದ ಶ್ರೀನಿವಾಸ ಕೊನೇರು ಹಾಗೂ ಸುಕುಮಾರಿ ಕೊನೇರು ದಂಪತಿಯನ್ನು ಸತ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.