ADVERTISEMENT

ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಸುಲಭವಲ್ಲ:ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ

ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 7:21 IST
Last Updated 28 ಡಿಸೆಂಬರ್ 2025, 7:21 IST
ಕಲಬುರಗಿಯ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಿಲೇನಿಯಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು
ಕಲಬುರಗಿಯ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಿಲೇನಿಯಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು   

ಕಲಬುರಗಿ: ‘ಕಡಿಮೆ ಶುಲ್ಕ ಪಡೆದು ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಿಲೇನಿಯಂ ಶಾಲಾ-ಕಾಲೇಜುಗಳ ಕಾರ್ಯ ಮಾದರಿಯಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಎಸ್.ಬಿ.ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಮಿಲೇನಿಯಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದರು.

‘ಸಮಾನ ಮನಸ್ಕರೆಲ್ಲರೂ ಕೂಡಿ ಶಿಕ್ಷಣ ಸಂಸ್ಥೆ ಕಟ್ಟಿ ಮುನ್ನಡೆಸಿಕೊಂಡು ಬರುತ್ತಿರುವುದು ಸಣ್ಣ ಕೆಲಸವಲ್ಲ. ಅದರಲ್ಲೂ ಸರ್ಕಾರಕ್ಕಿಂತ ಕಡಿಮೆ ಶುಲ್ಕ ಪಡೆದು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಮಿಲೇನಿಯಂ ಶಾಲೆಯ ಕೊಡುಗೆ ನಿಜಕ್ಕೂ ಶ್ಲಾಘನೀಯ. ಕೌಶಲ ತರಬೇತಿ ಸೇರಿ ಇತರ ನೆರವು ಬೇಕಾಗಿದ್ದಲ್ಲಿ ನೀಡಲು ಸರ್ಕಾರ ಬದ್ಧ’ ಎಂದರು. 

ADVERTISEMENT

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ನೌಕರಿಗಾಗಿ ಮಕ್ಕಳಿಗೆ ಕಲಿಸಬೇಡಿ. ಜ್ಞಾನಾರ್ಜನೆ ಮೊದಲ ಆದ್ಯತೆಯಾಗಿರಲಿ. ಪ್ರಮುಖವಾಗಿ ನೌಕರಿ ಬೇಡುವವರಿಗಿಂತ ಕೊಡುವವರಾಗಿ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಮಾತನಾಡಿ, ‘ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ ಎಂಬುದು ಎಲ್ಲರಿಗೂ ಈಗ ಅರಿವಿಗೆ ಬರುತ್ತಿದೆ. ಸಂಸ್ಕಾರ ಹಾಗೂ ಮೌಲ್ಯಗಳೊಂದಿಗೆ ಶಿಕ್ಷಣ ಪಡೆದಲ್ಲಿ ಖಂಡಿತವಾಗಿ ಬದುಕು ರೂಪಿಸಿಕೊಳ್ಳಬಹುದು’ ಎಂದರು.

ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿ, ‘ಜೀವನದ ಮೌಲ್ಯ, ಶಿಸ್ತು ಕಲಿಸಿ ಕೊಡುವುದೇ ಶಿಕ್ಷಣದ ಧ್ಯೇಯವಾಗಿದೆ’ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿ ಹಾಗೂ ಸದಸ್ಯರಾದ ಅರುಣಕುಮಾರ ಪಾಟೀಲ ಮೇಳಕುಂದಾ, ಶ್ರೀಶೈಲ ಘೂಳಿ, ಸೂರ್ಯಕಾಂತ ಪಾಟೀಲ ಸರಸಂಬಾ, ಶರಣಗೌಡ ಎಂ.ಪಾಟೀಲ, ವಿಜ್ಞೇಶ ಕೆ.ಮಾಲಿಪಾಟೀಲ, ಶರಣಬಸಪ್ಪ ಬೆಣ್ಣೂರ, ಬಸವರಾಜ ಎಸ್.ವಾಲಿ, ಶಿವಲಿಂಗಪ್ಪ ಕಲಶೆಟ್ಟಿ, ಭೀಮಣ್ಣಗೌಡ ದರ್ಶನಾಪುರ, ಸುಭಾಶ್ಚಂದ್ರ ಕೆ.ಗಾದಾ, ಎಚ್.ಎಸ್.ದೇಶಮುಖ, ಸುರೇಶ ಕುಮಸಗಿ ಸೇರಿ ಹಲವರು ಹಾಜರಿದ್ದರು.

ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.