ADVERTISEMENT

ಕಲಬುರಗಿ: ಸಚಿವ ಸೋಮಣ್ಣಗೆ ಮನವಿಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 16:24 IST
Last Updated 1 ಜೂನ್ 2025, 16:24 IST
ಕಲಬುರಗಿ ರೈಲು ನಿಲ್ದಾಣದಲ್ಲಿ ಭಾನುವಾರ ರೈಲ್ವೆ ಖಾತೆಯ ರಾಜ್ಯ ಸಚಿವ‌ ವಿ.ಸೋಮಣ್ಣ ಅವರು ಮನವಿ ಪತ್ರ ಸ್ವೀಕರಿಸಿದರು   ಪ್ರಜಾವಾಣಿ ಚಿತ್ರ
ಕಲಬುರಗಿ ರೈಲು ನಿಲ್ದಾಣದಲ್ಲಿ ಭಾನುವಾರ ರೈಲ್ವೆ ಖಾತೆಯ ರಾಜ್ಯ ಸಚಿವ‌ ವಿ.ಸೋಮಣ್ಣ ಅವರು ಮನವಿ ಪತ್ರ ಸ್ವೀಕರಿಸಿದರು   ಪ್ರಜಾವಾಣಿ ಚಿತ್ರ   

ಕಲಬುರಗಿ: ವಿವಿಧ ಸಂಘ– ಸಂಸ್ಥೆಗಳ ಪ್ರತಿನಿಧಿಗಳು, ಸಂಘಟನೆಗಳ ಮುಖ್ಯಸ್ಥರು, ರೈಲ್ವೆ ಪ್ರಯಾಣಿಕರ ಒಕ್ಕೂಟಗಳ ಪ್ರತಿನಿಧಿಗಳು ಭಾನುವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿಗಳನ್ನು ಸಲ್ಲಿಕೆ ಮಾಡಿದರು. ಅವುಗಳಲ್ಲಿ ಹೆಚ್ಚಿನವು ಕಲಬುರಗಿ ರೈಲ್ವೆ ವಿಭಾಗ ಕಚೇರಿ ಸ್ಥಾಪನೆ, ಹೊಸ ರೈಲು ಸೇವೆ ಆರಂಭಕ್ಕೆ ಸಂಬಂಧಿಸಿದ್ದವು.

ಬೀದರ್‌ನಿಂದ ವಿಶೇಷ ರೈಲಿನಲ್ಲಿ ಹೊರಟ ಸಚಿವರು ಬೆಳಿಗ್ಗೆ 11ಕ್ಕೆ ಕಲಬುರಗಿ ತಲುಪಬೇಕಿತ್ತು. ಆದರೆ, ಮಧ್ಯಾಹ್ನ 2.20ಕ್ಕೆ ಕಲಬುರಗಿ ನಿಲ್ದಾಣದಲ್ಲಿ ಇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಇದಕ್ಕೂ ಮುನ್ನ ಹುಮನಬಾದ್, ಕಮಲಾಪುರ, ಮಹಾಗಾಂವ್, ತಾಜಸುಲ್ತಾನಪುರ್ ನಿಲ್ದಾಣಗಳಲ್ಲಿ ಇಳಿದು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.

ಕಲಬುರಿಗೆ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸಮಸ್ಯೆಗಳ ಪಟ್ಟಿಯನ್ನು ಹೊತ್ತು ನಿಂತಿದ್ದ ಮುಖಂಡರು ನೇರವಾಗಿ ಮನವಿ ಪತ್ರಗಳು ಸಲ್ಲಿಸಲು ಮುಂದಾದರು. ಪೊಲೀಸರು ಅವರನ್ನು ತಡೆದು ನಿಲ್ಲಿಸಿದರು. ತಮ್ಮ ಜತೆಗೆ ಬಂದಿದ್ದ ಬಿಜೆಪಿಯ ಮುಖಂಡರನ್ನು ಸಭೆಯ ನಡೆಯಬೇಕಿದ್ದ ಕೋಣೆಗೆ ಕಳುಹಿಸಿದ ಸಚಿವರು, ಹೊರ ಬಂದು ಅಹವಾಲುಗಳನ್ನು ಪಡೆದರು.

ADVERTISEMENT

ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿಯು ಕಲಬುರಗಿ ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸಿ, ಬೆಂಗಳೂರು– ಕಲಬುರಗಿ ನಡುವೆ ವೇಗದ ಪ್ಯಾಸೆಂಜರ್ ರೈಲು ಓಡಿಸುವಂತೆ ಕೋರಿತು. ಪ್ರಯಾಣಿಕರ ಒಕ್ಕೂಟ ಸಂಘಟನೆಯು ಕಲಬುರಗಿ– ಬೀದರ್ ಡೆಮೊ ರೈಲು ಸಮಯಕ್ಕೆ ಸರಿಯಾಗಿ ಓಡಿಸಬೇಕು ಮತ್ತು ಕಲಬುರಗಿಯಿಂದ ನಿತ್ಯ ಬೆಂಗಳೂರು, ಹುಬ್ಬಳಿ ಹಾಗೂ ಮುಂಬೈ ರೈಲುಗಳನ್ನು ಓಡಿಸಬೇಕು ಎಂದರು.

ಅಫಜಲಪುರ ತಾಲ್ಲೂಕಿನ ನೀಲೂರ ಗ್ರಾಮಕ್ಕೆ ಹೊಸ ರೈಲು ನಿಲ್ದಾಣ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಮನವಿ ಕೊಟ್ಟರು. ಜಿಲ್ಲೆಯ ರೈಲು ನಿಲ್ದಾಣಗಳು ಮೂರು ವಿಭಾಗಗಳಿಗೆ ಹಂಚಿಕೆಯಾಗಿವೆ. ಅವೆಲ್ಲವೂಗಳನ್ನು ಸಿಕಂದರಾಬಾದ್ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡುವಂತೆ ಕಲ್ಯಾಣ ನಾಡು ವಿಕಾಸ ವೇದಿಕೆ ಕೋರಿತು.

ಮನವಿ ಪತ್ರಗಳನ್ನು ಸ್ವೀಕರಿಸಿದ ಬಳಿಕ ಅಮೃತ ಭಾರತ ಯೋಜನೆಯಡಿ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.