ADVERTISEMENT

‘ಸಮಾಜದ ಅಭಿವೃದ್ಧಿಗೆ ಸಾಂಘಿಕವಾಗಿ ದುಡಿಯೋಣ’: ಬಸವರಾಜ ಮತ್ತಿಮೂಡ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 15:34 IST
Last Updated 28 ನವೆಂಬರ್ 2021, 15:34 IST
ಶಿವಶರಣ ಹರಳಯ್ಯ ಸಮಗಾರ (ಮಚಗಾರ) ಜಿಲ್ಲಾ‌ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿದರು
ಶಿವಶರಣ ಹರಳಯ್ಯ ಸಮಗಾರ (ಮಚಗಾರ) ಜಿಲ್ಲಾ‌ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿದರು   

ಕಲಬುರಗಿ: ಸಮಾಜದ ಸಮಗ್ರ ಅಭಿವೃದ್ಧಿ ಮತ್ತು ಒಳಿತಿಗಾಗಿ ಎಲ್ಲರೂ ಸಾಂಘಿಕವಾಗಿ ದುಡಿಯೋಣ‌ ಎಂದು ಶಿವಶರಣ ಹರಳಯ್ಯ ಸಮಗಾರ (ಮಚಗಾರ) ಸಮಾಜದ‌ ಗೌರವಾಧ್ಯಕ್ಷ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಸಮಾಜ ಬಾಂಧವರಲ್ಲಿ ಕರೆ‌ ನೀಡಿದರು.

ಭಾನುವಾರ ನಗರದ ರಾಮ‌ ಮಂದಿರ ಹಿಂಭಾಗದಲ್ಲಿರುವ ಸಮಾಜದ ಸಮುದಾಯ‌ ಭವನದಲ್ಲಿ ಆಯೋಜಿಸಿದ್ದ ಶಿವಶರಣ ಹರಳಯ್ಯ ಸಮಗಾರ (ಮಚಗಾರ) ಜಿಲ್ಲಾ‌ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಸಮಾಜ ಚಿಕ್ಕ ಮತ್ತು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಇದರ ಅಭಿವೃದ್ಧಿಗೆ ನಾವೆಲ್ಲರು ಕೈಜೋಡಿಸೋಣ. ಸಮಾಜದ ಕುಂದುಕೊರತೆಗಳನ್ನು ಅರಿಯಲು ಜಿಲ್ಲಾ ಘಟಕವು ಇನ್ನು ಮುಂದೆ ಪ್ರತಿ ತಿಂಗಳು ಸಭೆ ಕರೆದಲ್ಲಿ ನಾನೇ ಖುದ್ದು ಬಂದು ಸಮಾಜ ಬಾಂಧವರ ಸಮಸ್ಯೆ ಆಲಿಸುವೆ’ ಎಂದರು.

ADVERTISEMENT

‘ಸಮಾಜದ ಸಮುದಾಯ ಭವನದ ಉಳಿದ ಕಾಮಗಾರಿಗೆ ಸರ್ಕಾರದಿಂದ ₹ 2.5 ಕೋಟಿ ಅನುದಾನ ಬಿಡುಗಡೆ ಕಾರ್ಯ ಪ್ರಗತಿಯಲ್ಲಿದೆ. ಸಮಾಜದ ಒಳಿತಿಗಾಗಿ ಹಗಲಿರುಳು ಕೆಲಸ‌ ಮಾಡಲು ನಾನು ಸಿದ್ಧನಿದ್ದು, ಸಮಾಜವನ್ನು ಹಿನ್ನಡೆಯಾಗಲು ಬಿಡುವುದಿಲ್ಲ. ಅವಶ್ಯಬಿದ್ದರೆ ಸ್ವಂತ ಆಸ್ತಿ ಮಾರಿಯಾದರೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ‌ ಕಾಶಿರಾಯ ನಂದೂರಕರ್ ಮಾತನಾಡಿ‌, ‘ಸಮಾಜದ ಸದಸ್ಯರ ಮತ್ತು ಹಿರಿಯರ ಮಾರ್ಗದರ್ಶನದಂತೆ ಕಳೆದ 9 ವರ್ಷಗಳಿಂದ ಸಮಾಜದ‌ ಜಿಲ್ಲಾಧ್ಯಕ್ಷನಾಗಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ ತೃಪ್ತಿಯಿದೆ. ಶಾಸಕರ‌ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷಭೇದ ಮರೆತು ಸಮಾಜದ ಪ್ರಗತಿಗೆ ಎಲ್ಲರು ಒಟ್ಟಾಗಿ ದುಡಿಯೋಣ ಎಂದರು.

ಸಮಾಜದ ಹಿರಿಯರಾದ ಭೀಮಸೇನ ಕಮಲಾಪುರಕರ್, ಚಂದ್ರಕಾಂತ‌ ಮಂಡೋಳಿಕರ, ಸಮಾಜದ ಉಪಾಧ್ಯಕ್ಷರು ಮತ್ತು ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜೇರಟಗಿ, ಚಂದ್ರಕಾಂತ ಗೊಬ್ಬೂರಕರ್, ಹಣಮಂತ‌ಪ್ಪ ಭಾವಿಮನಿ, ಶಿವಶರಣಪ್ಪ ದೊಡ್ಡಮನಿ, ಖಜಾಂಚಿ ರಾಮಚಂದ್ರ ಗೋಳಾ, ಜಿಲ್ಲಾ ಸರ್ಜನ್ ಡಾ. ಅಂಬಾರಾಯ ಎಸ್. ರುದ್ರವಾಡಿ, ಕಾರ್ಯಕಾರಿಣಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಹೆಬ್ಬಾಳಕರ್ ವಾರ್ಷಿಕ ವರದಿ‌ ಮತ್ತು ಬಜೆಟ್ ಮಂಡಿಸಿದರು. ಸಹ ಕಾರ್ಯದರ್ಶಿ ಶ್ರೀಮಂತ ಜೇವರ್ಗಿ ನಿರೂಪಿಸಿದರು. ಸಲಹೆಗಾರ ಸಿದ್ದಣ್ಣ ವಿ. ಭಾವಿಮನಿ‌‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.