ADVERTISEMENT

ಆರೋಪ ಮುಕ್ತಗೊಳಿಸಿದ ಸಿಬಿಐ: ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:40 IST
Last Updated 25 ಜನವರಿ 2019, 13:40 IST
ರಾಜಕುಮಾರ ಪಾಟೀಲ
ರಾಜಕುಮಾರ ಪಾಟೀಲ   

ಕಲಬುರ್ಗಿ: ‘2009ರಲ್ಲಿ ನನ್ನ ಮೇಲೆ ಸಿಬಿಐನಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ನನ್ನನ್ನು ಆರೋಪ ಮುಕ್ತವಾಗಿಸಿದೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಮಾಸಿಕವಾಗಿ ನನ್ನ ತೇಜೋವಧೆ ಮಾಡಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಆದರೆ, ನ್ಯಾಯದೇವತೆ ನನ್ನ ಕೈಬಿಡಲಿಲ್ಲ. ನ್ಯಾಯದ ಮೇಲಿನ ನನ್ನ ನಂಬಿಕೆ ನಿಜವಾಗಿದೆ’ ಎಂದರು.

‘ಕೆಲವರು ಚುನಾವಣೆ ಬಂದಾಗ ಮಾತ್ರ ರೈತರ ಪರವಾಗಿ ಮಾತನಾಡುತ್ತಾರೆ, ರೈತರ ಪರ ನಿಲ್ಲುತ್ತಾರೆ. ಆದರೆ, ನಾನು ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ರೈತರ ಪರವಾಗಿ ನಿಂತಿದ್ದೇನೆ. ನನಗಾದ ಅನ್ಯಾಯ ಸೇಡಂ ಮತಕ್ಷೇತ್ರದ ಜನರಿಗೂ ಗೊತ್ತಾಗಿದ್ದರಿಂದ ಚುನಾವಣೆಯಲ್ಲಿ ನನ್ನ ಕೈ ಹಿಡಿದರು’ ಎಂದು ಪರೋಕ್ಷವಾಗಿ ಡಾ. ಶರಣಪ್ರಕಾಶ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

27ರಂದು ಬರ ಅಧ್ಯಯನ: ಜ. 27ರಂದು ಶಾಸಕ ಬಿ.ಶ್ರೀರಾಮುಲು ನೇತೃತ್ವದ ತಂಡವು ಬರ ಅಧ್ಯಯನಕ್ಕಾಗಿ ಜಿಲ್ಲೆಗೆ ಬರುತ್ತಿದೆ. ಸೇಡಂ ಮತ್ತು ಚಿತ್ತಾಪುರ ತಾಲ್ಲೂಕುಗಳ ಕೆಲವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. 7–8 ತಂಡಗಳು ರಾಜ್ಯದಾದ್ಯಂತ ಬರ ಅಧ್ಯಯನ ಕೈಗೊಳ್ಳುತ್ತಿವೆ. ಒಂದು ವಾರದಲ್ಲಿ ಸಮಗ್ರ ವರದಿಯನ್ನು ಸಿದ್ಧಪಡಿಸಿ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ಶರಣಪ್ಪ ತಳವಾರ, ಕಲ್ಯಾಣಪ್ಪ ಪಾಟೀಲ, ಮುಕುಲ್ ದೇಶಪಾಂಡೆ, ಮಾಧ್ಯಮ ಪ್ರಮುಖ ಸಂಗಣ್ಣ ಇಜೇರಿ ಇದ್ದರು.

ಏನಿದು ಪ್ರಕರಣ?: ಸೇಡಂನ ಶರಣಮ್ಮ ಎಂಬುವರು ಕೆನರಾ ಬ್ಯಾಂಕ್‌ನಿಂದ ₹15 ಕೋಟಿ ಸಾಲ ಪಡೆದು ಉಗ್ರಾಣ ನಿರ್ಮಿಸಿದ್ದರು. ರಾಜಕುಮಾರ ಪಾಟೀಲ ಅವರು 2005–06ರಲ್ಲಿ ಈ ಉಗ್ರಾಣವನ್ನು ಪಡೆದಿದ್ದರು. ಈ ಅವಧಿಯಲ್ಲಿ ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ 110 ರೈತರು ತೊಗರಿ ಶೇಖರಣೆ ಮಾಡಿದ್ದಾರೆ ಎಂದು ಕೆನರಾ ಬ್ಯಾಂಕ್‌ನಿಂದ ತಲಾ ₹10 ಲಕ್ಷದಂತೆ ₹11.10 ಕೋಟಿ ಸಾಲ ಪಡೆದು ಮರು ಪಾವತಿಸಿದೆ ವಂಚಿಸಿದ್ದಾರೆ ಎಂದು ಬ್ಯಾಂಕ್‌ನವರು ಸಿಬಿಐನಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.