ADVERTISEMENT

‘ದುಡಿದು ಹಣವಂತರಾಗುವುದು ಅಪರಾಧವೇ?’

ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ವಿರುದ್ಧದ ಆರೋಪಕ್ಕೆ ಶಾಸಕ ತೆಲ್ಕೂರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 11:19 IST
Last Updated 6 ಡಿಸೆಂಬರ್ 2021, 11:19 IST
ರಾಜಕುಮಾರ ‍ಪಾಟೀಲ ತೆಲ್ಕೂರ
ರಾಜಕುಮಾರ ‍ಪಾಟೀಲ ತೆಲ್ಕೂರ   

ಕಲಬುರಗಿ: ‘ಕಲಬುರಗಿ– ಯಾದಗಿರಿ ವಿಧಾನ ಪರಿಷತ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರು ಹಣವಂತ ಮಾತ್ರವಲ್ಲ; ಗುಣವಂತರೂ ಆಗಿದ್ದಾರೆ. ಈ ಚುನಾವಣೆಯು ಹಣವಂತ– ಗುಣವಂತರ ನಡುವಿನ ಸ್ಪರ್ಧೆ ಎಂದು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್‌ ಮುಖಂಡರೇ, ನಮ್ಮ ಅಭ್ಯರ್ಥಿ ಯಾವ ಗುಣದಲ್ಲಿ ಕಡಿಮೆ ಇದ್ದಾರೆ ಎಂದು ತೋರಿಸಿ ನೋಡೋಣ. ಈ ಬಗ್ಗೆ ಬಹಿರಂಗ ಚರ್ಚೆಗೆ ಬಂದು ನನಗೆ ಉತ್ತರ ಕೊಡಿ’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸವಾಲು ಹಾಕಿದರು.

‘ಬಿ.ಜಿ. ಪಾಟೀಲ ಅವರೇನು ಇನ್ನೊಬ್ಬರನ್ನು ಕೊಳ್ಳೆಹೊಡೆದು ದುಡ್ಡು ಮಾಡಿದವರಲ್ಲ. ಕಷ್ಟ‍ಪಟ್ಟು, ಬೆವರು ಸುರಿಸಿ ಕೈಗಾರಿಕೋದ್ಯಮಿ ಆಗಿದ್ದಾರೆ. ಅವರು ತ‍ಪ್ಪು ಮಾಡಿದ ಒಂದು ಉದಾಹರಣೆ ಇಲ್ಲ. ಒಂದು ಕೇಸ್‌ ಕೂಡ ಇಲ್ಲ. ಹಾಗಿದ್ದ ಮೇಲೆ ಅವರು ಗುಣವಂತ ಅಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ? ದುಡಿದು ಶ್ರೀಮಂತರಾಗುವುದು ದೊಡ್ಡ ಅಪರಾಧವೇ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತರಾಟೆ ತೆಗೆದುಕೊಂಡರು.

‘ಮೃದು ವ್ಯಕ್ತಿತ್ವದ ಬಿ.ಜಿ. ಪಾಟೀಲ ಅವರು ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಹಲವು ಬಡವರಿಗೆ ಆಸರೆಯಾಗಿದ್ದಾರೆ. ಯಾನಾಗುಂದಿಯಲ್ಲಿ ನಿರಂತರ ದಾಸೋಹ ನಡೆಸುತ್ತಾರೆ. ಯಾವುದೇ ಹಳ್ಳಿಯಲ್ಲಿ ಜಾತ್ರೆ, ಉತ್ಸವ ನಡೆದರೆ ಅನ್ನಸಂತರ್ಪಣೆ– ಆರ್ಥಿಕ ನೆರವು ನೀಡುತ್ತಾರೆ. ಸಹಾಯ ಮಾಡುವ ಗುಣಗಳು ಅವರಿಗೆ ಇವೆ. ಆದರೆ, ಕಾಂಗ್ರೆಸ್‌ ಹಿರಿಯ ಮುಖಂಡರು ಕೂಡ ಮಾತು ತಿರುಚಿ ಮತ ಕೇಳುವ ಮಟ್ಟಕ್ಕೆ ಇಳಿಯಬಾರದು’ ಎಂದರು.

ADVERTISEMENT

‘ಬಿ.ಜಿ. ಪಾಟೀಲ ಅವರನ್ನು ಹಣವಂತ ಎಂದು ಮೂದಲಿಸುವುದಾದರೆ; ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಅವರನ್ನು ಏನೆನ್ನುತ್ತೀರಿ? ಕೆಜಿಎಫ್‌ ಬಾಬು ತಮ್ಮ– ಪತ್ನಿ ಮಕ್ಕಳಿಂದಲೇ ಕೇಸ್‌ ಎದುರಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿ ಅಂಥದ್ದೇನೂ ಮಾಡಿಲ್ಲವಲ್ಲ’ ಎಂದೂ ಮೂದಲಿಸಿದರು.

‘ಕ್ಷೇತ್ರದ 7000 ಮತದಾರರಲ್ಲಿ 4,500 ಮತದಾರರು ಬಿಜೆಪಿ ಬೆಂಬಲಿತರೇ ಇದ್ದಾರೆ. ಮೂವರು ಸಂಸದರು, ಏಳು ಶಾಸಕರು, ಮೂವರು ವಿಧಾನ ಪರಿಷತ್‌ ಸದಸ್ಯರು ಇದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಮಾಡಿದ ಸಾಧನೆಗಳು ನಮ್ಮ ಕಣ್ಣು ಮುಂದಿವೆ. ಹೀಗಾಗಿ, ನಮ್ಮ ಗೆಲುವು ಈಗಾಗಲೇ ನಿರ್ಧಾರವಾಗಿದೆ’ ಎಂದೂ ಭರವಸೆ ವ್ಯಕ್ತಪಡಿಸಿದರು.

‘ಮುಚ್ಚಿಹೋಗಿದ್ದ ಡಿಸಿಸಿ ಬ್ಯಾಂಕ್‌ ಮತ್ತೆ ಚೈತನ್ಯಗೊಳ್ಳುವಂತೆ ಮಾಡಿದ್ದು ಬಿ.ಜಿ. ಪಾಟೀಲರು. ಕ್ಷೇತ್ರಕ್ಕೆ ಈವರೆಗೆ ಬಂದ ₹ 12 ಕೋಟಿ ಅನುದಾನದಲ್ಲಿ ಈಗಾಗಲೇ ₹ 10 ಕೋಟಿ ವಿನಿಯೋಗಿಸಿದ್ದಾರೆ. ಅರ್ಧದಷ್ಟು ಕೆಲಸಗಳು ಮುಗಿದಿದ್ದು, ಇನ್ನಷ್ಟು ಪ‍್ರಗತಿಯಲ್ಲಿವೆ. ಉಳಿದ ₹ 2 ಕೋಟಿಗೂ ಕ್ರಿಯಾಯೋಜನೆ ಸಿದ್ಧವಾಗಿದೆ. ಒಂದು ರೂಪಾಯಿ ಕೂಡ ಇದರಲ್ಲಿ ಭ್ರಷ್ಟಾಚಾರವಾಗಿಲ್ಲ. ಬೇಕಿದ್ದರೆ ಜಿಲ್ಲಾಧಿಕಾರಿ ಬಳಿ ದಾಖಲೆಗಳನ್ನು ತೆಗೆದು ನೋಡಿ, ನಂತರ ಮಾತಾಡಿ’ ಎಂದೂ ತಿರುಗೇಟು ನೀಡಿದರು.

ಶಾಸಕ ಡಾ.ಅವಿನಾಶ ನಾಧವ, ವಿಧಾನ ಪ‍ರಿಷತ್‌ ಸದಸ್ಯ ಶಶೀಲ್‌ ನಮೋಶಿ, ಮುಖಂಡರಾದ ಶಿವಾನಂದ ಪಾಟೀಲ ರದ್ದೇವಾಡಗಿ, ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.