ADVERTISEMENT

ಬಿಎಸ್‌ವೈ ಮುಂದುವರಿಯಲಿ ಎಂಬುದು ನಮ್ಮ ಆಸೆ: ತೆಲ್ಕೂರ

ಇಂದು ಶಾಸಕರ ಅಭಿಪ್ರಾಯ ಸಂಗ್ರಹಿಸಲಿರುವ ಅರುಣ್ ಸಿಂಗ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 4:28 IST
Last Updated 17 ಜೂನ್ 2021, 4:28 IST
ರಾಜಕುಮಾರ ಪಾಟೀಲ
ರಾಜಕುಮಾರ ಪಾಟೀಲ   

ಕಲಬುರ್ಗಿ: ಕೋವಿಡ್, ಅತಿವೃಷ್ಟಿ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬುದು ನಮ್ಮ ಆಸೆ. ಆದರೆ, ಅಂತಿಮವಾಗಿ ಹೈಕಮಾಂಡ್‌ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ಧರಾಗಿದ್ದೇವೆ ಎಂದು ಬಿಜೆಪಿ ರಾಜ್ಯ ವಕ್ತಾರ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‌ ಮುಂದೆ ಇಲ್ಲ. ಆದರೂ ಕೆಲ ಭಿನ್ನಮತೀಯರು ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಖುದ್ದಾಗಿ ಸಚಿವರು ಹಾಗೂ ಭಿನ್ನಮತೀಯರೊಂದಿಗೆ ಚರ್ಚೆ ನಡೆಸುವ ಸಲುವಾಗಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದಾರೆ. ಗುರುವಾರ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲಿ ವಿವಿಧ ವಿಚಾರಗಳ ಬಗ್ಗೆ ನಮ್ಮಿಂದ ಮಾಹಿತಿ ಪಡೆಯಲಿದ್ದಾರೆ’ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕೊಟ್ಟಿಲ್ಲ ಎಂಬುದು ಇಲ್ಲಿನ ಶಾಸಕರ ಭಾವನೆಯಾಗಿದೆ. ಅದಕ್ಕಾಗಿ ಈ ಭಾಗದ ಶಾಸಕರು ಗುಂಪಾಗಿ ಹೋದರೆ ಮಾಧ್ಯಮದವರು ಪಕ್ಷದಲ್ಲಿ ಗುಂಪುಗಾರಿಕೆ ನಡೆದಿದೆ ಎಂದು ಸುದ್ದಿ ಮಾಡುತ್ತೀರಿ. ಹೀಗಾಗಿ, ಎಲ್ಲ ಶಾಸಕರು ಇದ್ದಾಗಲೇ ಈ ಬಗ್ಗೆ ಪ್ರಸ್ತಾಪಿಸಲಿದ್ದೇವೆ ಎಂದು ಅವರು ಹೇಳಿದರು.

ADVERTISEMENT

‘ಭಿನ್ನಮತ ಶಮನಕ್ಕೆ ಅರುಣ್ ಸಿಂಗ್ ಅವರು ಬಂದಿದ್ದಾರೆ ಎನ್ನಲಾಗದು. ಆ ವಿಚಾರ ಹೊರತುಪಡಿಸಿಯೂ ಪಕ್ಷದ ಹಲವು ಮಾಹಿತಿಗಳನ್ನು ತಿಳಿಸಲು ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ಬಂದಿದ್ದಾರೆ’ ಎಂದರು.

‘ಬುದ್ಧಿಜೀವಿಗಳಿಂದ ಗೊಂದಲ ಸೃಷ್ಟಿ’

ಲಸಿಕೆ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಬುದ್ಧಿಜೀವಿಗಳು, ಕಮ್ಯುನಿಸ್ಟರು, ಕಾಂಗ್ರೆಸ್ ಪಕ್ಷದವರು ಜನರೊಂದಿಗೆ ಹಂಚಿಕೊಂಡಿದ್ದರಿಂದ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ರಾಜಕುಮಾರ ಪಾಟೀಲ ತೆಲ್ಕೂರ ಆರೋಪಿಸಿದರು.

ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಮುಸ್ಲಿಂ ಸಮುದಾಯದವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೈಕಾಲು ಸೊಟ್ಟಗಾಗುತ್ತವೆ ಎಂದೂ ಹೆದರಿಸಲಾಗಿದೆ. ಹೀಗಾಗಿ, ಲಸಿಕೆ ವಿತರಣೆ ವೇಗ ಪಡೆದುಕೊಂಡಿಲ್ಲ. ಆದರೆ, ಅದನ್ನು ಮೀರಿಯೂ ನಾವು ಪ್ರಯತ್ನ ನಡೆಸಿದ್ದೇವೆ. ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಲಸಿಕೆಯೊಂದೇ ರಾಮಬಾಣ. ಹೀಗಾಗಿ, ಭಯಬಿಟ್ಟು ಎಲ್ಲರೂ ಲಸಿಕೆ ಪಡೆಯಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.