ಕಮಲಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಹಾಗಾಂವ ಕ್ರಾಸ್‌ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬುಧವಾರ ವಿದ್ಯಾರ್ಥಿಗಳು ನಡೆದುಹೋಗುತ್ತಿರುವುದ ಕಂಡ ಶಾಸಕ ಬಸವರಾಜ ಮತ್ತಿಮಡು, ಬಸ್ ನಿಲ್ಲಿಸಿ ವಿದ್ಯಾರ್ಥಿಗಳ ಜೊತೆಗೆ ಪ್ರಯಾಣಿಸಿದರು.
ಮಹಾಗಾಂವ ಕ್ರಾಸ್ ಬಳಿ ಬಸ್ ನಿಲ್ಲಿಸದಿರುವ ಕುರಿತು ‘ಪ್ರಜಾವಾಣಿ’ ವರದಿ ಮಾಡಿತ್ತು. ಶಾಸಕರು ಬಸ್ ನಿಲುಗಡೆಗೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಲ ದಿನ ಇಲ್ಲಿ ಕಂಟ್ರೋಲರ್ ನೇಮಿಸಿ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಹತ್ತಿಸಿಕೊಂಡು ಹೋಗಲಾಗುತ್ತಿತ್ತು.
ಈ ಮಾರ್ಗದಲ್ಲಿ ಬುಧವಾರ ಶಾಸಕರು ಸಾಗುತ್ತಿದ್ದಾಗ ವಿದ್ಯಾರ್ಥಿಗಳು ನಡೆದು ಹೋಗುತ್ತಿರುವುದು ಕಂಡು ಕಾರಿನಿಂದಿಳಿದು ವಿಚಾರಿಸಿದರು.
‘ಕಂಟ್ರೋಲರ್ ಇರುವಾಗ ಬಸ್ ನಿಲ್ಲಿಸುತ್ತಿದ್ದರು. ಈಗ ಬಸ್ ನಿಲ್ಲಿಸದೇ ಇರುವುದರಿಂದ ನಡೆದೇ ಹೋಗುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಶಾಸಕರು, ಬಸ್ ನಿಲ್ಲಿಸಿ, ಅದರಲ್ಲಿ ವಿದ್ಯಾರ್ಥಿಗಳ ಜೊತೆಗೆ ಮಹಾಗಾಂವ ಕ್ರಾಸ್‌ವರೆಗೂ ಪ್ರಯಾಣಿಸಿದರು.
ಚಾಲಕ ನಿರ್ವಾಹಕರ ಮೇಲೆ ದರ್ಪ ತೋರಲು ನನಗಿಷ್ಟವಿಲ್ಲ. ಹೀಗಾಗಿ ಸನ್ಮಾನಿಸಿ ಮನವಿ ಮಾಡಿದ್ದೇನೆ. ಇದಕ್ಕೂ ಮೀರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.–ಬಸವರಾಜ ಮತ್ತಿಮಡು, ಶಾಸಕ
‘ಚಾಲಕ, ನಿರ್ವಾಹಕರ ವಿರುದ್ಧ ಕ್ರಮಕೈಗೊಂಡರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗುತ್ತದೆ. ಕುಟುಂಬಕ್ಕೆ ನಿರ್ವಹಣೆಗೆ ಸಮಸ್ಯೆಯಾಗುತ್ತದೆ. ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೆಂದೇ ಭಾವಿಸಿ ಕರೆದುಕೊಂಡು ಹೋಗಿ’ ಎಂದು ಶಾಸಕರು ಚಾಲಕ ಹಾಗೂ ನಿರ್ವಾಹಕರಿಗೆ ಶಾಲು, ಹೂವಿನ ಹಾರ ಹಾಕಿ ಸನ್ಮಾನಿಸಿ ಮನವಿಮಾಡಿದರು.
ಪ್ರಾಚಾರ್ಯ ಜಯಶ್ರೀ ಪಾಟೀಲ, ಉಪನ್ಯಾಸಕಿ ಕಾಶಮ್ಮ, ಮುಖಂಡರಾದ ಗಿರೀಶ ಪಾಟೀಲ, ಶ್ರೀಕಾಂತ ಪಾಟೀಲ, ಮಲ್ಲಿಕಾರ್ಜುನ ಮರತೂತ, ಉದಯ ಪಾಟೀಲ, ಸತೀಶ ಸಾಹು, ಸುರೇಶ ರಾಠೋಡ, ಸಿದ್ದು ದಿಗ್ಗಾಂವ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.