ಪ್ರಜಾವಾಣಿ ವಾರ್ತೆ
ಚಿಂಚೋಳಿ: ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸುವ ಚಟುವಟಿಕೆಗಳ ಪ್ರಗತಿಯನ್ನು ಶಾಸಕ ಡಾ. ಅವಿನಾಶ ಜಾಧವ ಮತ್ತು ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಗೊಟ್ಟಂಗೊಟ್ಟದಲ್ಲಿ ಭಾನುವಾರು ಪರಿಶೀಲಿಸಿದರು.
ಗೊಟ್ಟಂಗೊಟ್ಟದ ದೈವಿವನವನ್ನು ವೀಕ್ಷಿಸಿದ ಅವರು, ಪಕ್ಕದ ಕಳ್ಳಬೇಟೆ ತಡೆ ಶಿಬಿರದ ಆವರಣದಲ್ಲಿ ಸಭೆ ನಡೆಸಿ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ ಹಾಗೂ ಉಪ ವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ ಅವರಿಂದ ಅಗತ್ಯ ಮಾಹಿತಿ ಪಡೆದರು.
2024-25ನೇ ಸಾಲಿನಲ್ಲಿ ಡಿಎಂಎಫ್ ಯೋಜನೆ ಅಡಿಯಲ್ಲಿ ₹ 35 ಲಕ್ಷ ಮಂಜೂರಾಗಿದ್ದು, ಶೌಚಾಲಯ, ಆರ್ಚ್ ಕಮಾನ್ (ನೈಸರ್ಗಿಕ ಮಹಾದ್ವಾರ), ಜಾಗೃತಿ ಫಲಕಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಸಕ್ತ ವರ್ಷ ಕೆಕೆಆರ್‌ಡಿಬಿ ಮ್ಯಾಕ್ರೊ ಯೋಜನೆಯಡಿ ₹ 2 ಕೋಟಿ ಮಂಜೂರಾಗಿ ಟೆಂಡರ್ ಕರೆಯಲಾಗಿದ್ದು ಕಾಮಗಾರಿ ಆರಂಭಿಸಬೇಕಿದೆ. ಸಫಾರಿಗಾಗಿ ರಸ್ತೆ ನಿರ್ಮಾಣ, ದೋಣಿಗಳ ಖರೀದಿ, ಸಫಾರಿ ವಾಹನ ಖರೀದಿ, ಟೆಂಟ್‌ಗಳ ಖರೀದಿ ಮತ್ತು ಗೊಟ್ಟಂಗೊಟ್ಟದಲ್ಲಿ ಆರ್ಚ ಮಹಾದ್ವಾರ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ವನ್ಯಜೀವಿಗಳು ಹಾಗೂ ಕಾಡಿನ ವಿಶಿಷ್ಟ ಸಸ್ಯಗಳ ಮಾಹಿತಿ ಪಡೆದ ಶಾಸಕದ್ವಯರು, ‘ಇಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಹಣ ನಾವು ನೀಡುತ್ತೇವೆ, ಅರಣ್ಯ ಇಲಾಖೆಯಿಂದಲೇ ಕಾಮಗಾರಿ ನಡೆಸಲು ಅನುಮತಿ ನೀಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಚರ್ಚಿಸುವ ಭರವಸೆ ನೀಡಿದರು. ಕೊನೆಗೆ ಶಾಸಕರು ಇಲ್ಲಿನ ದೈವಿ ವನದಲ್ಲಿ ಸಸಿಗಳನ್ನು ನೆಟ್ಟರು.
ಇಲ್ಲಿಂದ ಗೊಟ್ಟಂಗೊಟ್ಟದ ಮಹಾತಪಸ್ವಿ ಬಕ್ಕಪ್ರಭುಗಳ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಭೀಮಶೆಟ್ಟಿ ಮುರುಡಾ. ಕೆ.ಎಂ.ಬಾರಿ, ಸತೀಶರೆಡ್ಡಿ, ಚಂದ್ರಶೆಟ್ಟಿ ಜಾಧವ, ಶಿವಯೋಗಿ ರುಸ್ತಂಪುರ, ರಾಕೇಶ ಗೋಸುಲ್, ಗಿರಿರಾಜ ನಾಟಿಕಾರ, ಕನಕಪುರದ ಅಲ್ಲಮಪ್ರಭು ಸ್ವಾಮಿ, ಮಲ್ಲು ಕೂಡಾಂಬಲ್, ಹಣಮಂತ ಭೋವಿ, ಶಶಿಧರ ಅಲ್ಲಾಪುರ, ಸಿದ್ದಪ್ಪ ಪಾಟೀಲ ಮುದ್ದಾ, ಶ್ರೀನಿವಾಸ ಚಿಂಚೋಳಿಕರ್ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.