ADVERTISEMENT

ಜನಸಾಮಾನ್ಯರ ಮೈಂಡ್‌ಸೆಟ್‌ ಬದಲಾಯಿಸಿದ ಮೋದಿ: ವಿಶ್ವನಾಥ್‌ ಭಟ್ಟ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 13:14 IST
Last Updated 1 ಅಕ್ಟೋಬರ್ 2018, 13:14 IST
ಕಲಬುರ್ಗಿಯಲ್ಲಿ ಸೋಮವಾರ ನಡೆದ ಬಿಜೆಪಿ ಮುಖಂಡರ ಕಾರ್ಯಾಗಾರವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು
ಕಲಬುರ್ಗಿಯಲ್ಲಿ ಸೋಮವಾರ ನಡೆದ ಬಿಜೆಪಿ ಮುಖಂಡರ ಕಾರ್ಯಾಗಾರವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು   

ಕಲಬುರ್ಗಿ: ‘ದೇಶದಲ್ಲಿ ಜಿಡ್ಡುಗಟ್ಟಿದ ಮೈಂಡ್‌ಸೆಟ್‌ ಹಾಗೂ ಐಡಿಯಾಲಜಿಯನ್ನೇ ಮೋದಿ ಸರ್ಕಾರ ಬದಲಾಯಿಸಿದೆ. ಇದರಿಂದ ಸುಸ್ಥಿರ ದೇಶ ಹೇಗಿರಬೇಕು ಎಂಬ ಕಲ್ಪನೆ ಜನಸಾಮಾನ್ಯರಿಗೂ ಅರ್ಥವಾಗಿದೆ. ಇದು ಅಚ್ಛೆ ದಿನ್‌ ಅಲ್ಲದೇ ಮತ್ತೇನು?’ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಘಟಕದ ಸಂಚಾಲಕ ವಿಶ್ವನಾಥ್‌ ಭಟ್ಟ ಪ್ರಶ್ನಿಸಿದರು.

‘ಜನಸಾಮಾನ್ಯರೇ ಭಾರತದ ಆರ್ಥಿಕ ಪರಿವರ್ತನೆಯ ಹರಿಕಾರರು ಎಂಬುದು ಪ್ರಧಾನಿ ನಿಲುವು. ಹೀಗಾಗಿ, ಆರ್ಥಿಕ ಅಭಿವೃದ್ಧಿಯಲ್ಲಿ ಜನಸಾಮಾನ್ಯರೇ ನಿರ್ಣಾಯಕ ಪಾತ್ರ ವಹಿಸುವಂಥ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದಾರೆ’ ಎಂದರು.

‘ಎನ್‌ಡಿಎ ಸರ್ಕಾರದ ಆರ್ಥಿಕ ಸುಧಾರಣೆಗಳಿಂದ ಜನ ಸಾಮಾನ್ಯರ ಮೇಲಾಗುವ ಪರಿಣಾಮಗಳು’ ಕುರಿತು ನಗರದಲ್ಲಿ ಸೋಮವಾರ ಬಿಜೆಪಿ ಮುಖಂಡರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಜಗತ್ತಿನಲ್ಲಿ ಅತಿ ಹೆಚ್ಚು ಆರ್ಥಿಕ ಅಸಮಾನತೆ ಇರುವ ದೇಶ ನಮ್ಮದು. ಆರ್ಥಿಕ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದೇ ಇದಕ್ಕೆ ಕಾರಣ. ಸಾಮಾನ್ಯರನ್ನೂ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಮಾತ್ರ ಇದು ದೂರಾಗಲಿದೆ’ ಎಂದರು.

‘ಎ.ಬಿ.ವಾಜಪೇಯಿ ಅವರು ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಟ್ಟಾಗ ದೇಶವು ₹ 17 ಲಕ್ಷ ಕೋಟಿ ಸಾಲದಲ್ಲಿತ್ತು. ಮುಂದೆ, ಕಾಂಗ್ರೆಸ್‌ ₹ 54 ಲಕ್ಷ ಕೋಟಿ ಸಾಲ ಮಾಡಿತು. ಮೋದಿ ಸರ್ಕಾರ ಬಂದ ಮೇಲೆ ವೈವಿಧ್ಯಮಯವಾದ ಆರ್ಥಿಕ ಯೋಜನೆ ಜಾರಿ ಮಾಡಿ, ಸಾಲ ತೀರಿಸುತ್ತಿದೆ’ ಎಂದು ವಿವರಿಸಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿವಿಧ ಕಾರ್ಪೊರೇಟ್‌ ಕಂಪನಿಗಳಿಗೆ ₹ 34 ಲಕ್ಷ ಕೋಟಿ ಸಾಲ ನೀಡಿದೆ. ಇದರಲ್ಲಿ ಶೇ 70ರಷ್ಟು ಕಂಪನಿಗಳು ದ್ರೋಹ ಮಾಡಿದವು. ನಮ್ಮ ಸರ್ಕಾರ ಬಂದ ಮೇಲೆ ಮೊದಲು ‘ದಿವಾಳಿತನ ಕಾಯ್ದೆ’ ಜಾರಿ ಮಾಡಿತು. ಇದರಿಂದ ಸಾಲ ಪಡೆದ ಯಾವುದೇ ಕಂಪನಿ ಬ್ಯಾಂಕಿಗೆ ಮೋಸ ಮಾಡದಂತೆ ಮೂಗುದಾರ ಹಾಕಿತು. ಪರಿಣಾಮ ಆರೇ ತಿಂಗಳಲ್ಲಿ ₹ 47 ಸಾವಿರ ಕೋಟಿ ಸಾಲ ವಸೂಲಾತಿ ಆಯಿತು. ಮೋದಿ ಅವರ ಆಡಳಿತದಲ್ಲಿ ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆ ಸುರಕ್ಷಿತವಾಗಿದೆ’ ಎಂದು ವಿವರಿಸಿದರು.

‘65 ವರ್ಷ ಆಡಳಿತ ನಡೆಸಿದ ಮೇಲೂ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದೇ ಇದ್ದುದು ಕಾಂಗ್ರೆಸ್‌ನ ಸೋಲು. ಈಗ ತೈಲ ಬೆಲೆಯ ಬಗ್ಗೆ ಬೊಬ್ಬೆ ಹೊಡೆಯುವವರಿಗೆ ಈ ಪ್ರಶ್ನೆ ಏಕೆ ಕಾಡುವುದಿಲ್ಲ? ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಒಂದೇ ಸುಳ್ಳನ್ನು ಪದೇಪದೇ ಹೇಳುತ್ತಿದ್ದಾರೆ. ಇದರಿಂದ ಜನರಿಗೆ ಅದು ಸತ್ಯ ಅನ್ನಿಸಿದರೂ ಅಚ್ಚರಿ ಇಲ್ಲ’ ಎಂದು ಆರೋಪಿಸಿದರು.

‘ನಾಲ್ಕು ವರ್ಷಗಳಲ್ಲಿ ಶೇ 92ರಷ್ಟು ಶೌಚಾಲಯ ನಿರ್ಮಿಸಿದ್ದು ನಮ್ಮ ಸಾಧನೆ. 2014ಕ್ಕೂ ಮುಂಚೆ ಶೇ 70ರಷ್ಟು ಮಹಿಳೆಯರಿಗೆ ಶೌಚಾಲಯಗಳ ಕೊರತೆ ಇತ್ತು. ಮಹಿಳೆಯರ ರಕ್ಷಣೆ, ಗೌರವ ಕಾಪಾಡುವಲ್ಲಿ ನಾವು ಗಟ್ಟಿ ಹೆಜ್ಜೆ ಇಟ್ಟಿದ್ದೇವೆ. 2019ರ ಅಂತ್ಯಕ್ಕೆ ಇಡೀ ದೇಶ ಬಯಲುಶೌಚಮುಕ್ತ ಆಗುವುದು ಖಚಿತ’ ಎಂದರು.

*ಯಾವುದೇ ದೇಶಕ್ಕೆ ಸೈನಿಕ ಶಕ್ತಿಗಿಂತ ಆರ್ಥಿಕ ಶಕ್ತಿ ಮುಖ್ಯ. ಶೇ 8.2ರಷ್ಟು ಜಿಡಿಪಿ ಹೊಂದಿರುವ ಭಾರತ ಇಂದು ಜಗತ್ತಿನ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ

–ಸುಭಾಸ ರಾಠೋಡ,ಬಿಜೆಪಿ ಮುಖಂಡ

* ಪ್ರಧಾನಿ ಮೋದಿ ಅವರು ಚುನಾವಣೆ ಮುಂದಿಟ್ಟುಕೊಂಡು ಯಾವುದೇ ಯೋಜನೆ ರೂಪಿಸಲಿಲ್ಲ. ತಡವಾದರೂ ಚಿಂತೆಯಿಲ್ಲ; ಸುಸ್ಥಿರ, ಸಮಗ್ರ ಅಭಿವೃದ್ಧಿಯೊಂದೇ ಅವರ ಕನಸು

–ಭಗವಂತ ಖೂಬಾ,ಸಂಸದ, ಬೀದರ್‌

ವಿಪುಲ ಉದ್ಯೋಗ ಅವಕಾಶ

‘ಜವಳಿ ಹಾಗೂ ಚರ್ಮ ಉದ್ಯಮಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ದೇಶದಲ್ಲಿ ಅತಿಹೆಚ್ಚು ಉದ್ಯೋಗಗಳು ಇದೇ ವಲಯದಲ್ಲಿ ಸೃಷ್ಟಿಯಾಗುತ್ತವೆ. ಇದನ್ನು ಮನಗಂಡಿದ್ದು ಮೋದಿ ಅವರ ದೂರದೃಷ್ಟಿ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ’ ಎಂದು ವಿಶ್ವನಾಥ್‌ ತಿಳಿಸಿದರು.

‘ಆರ್ಥಿಕ ಸುಸ್ಥಿತಿ ಹಾಗೂ ನಿರುದ್ಯೋಗ ನಿವಾರಣೆ ಕಾರ್ಪೊರೇಟ್‌ ಕಂಪನಿಗಳಿಂದ ಸಾಧ್ಯವಿಲ್ಲ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಂದ ಮಾತ್ರ ಸಾಧ್ಯ. ನಮ್ಮ ಜಿಡಿಪಿ ಬೆಳವಣಿಗೆಯಲ್ಲಿ ಇವುಗಳ ಪಾಲೇ ಹೆಚ್ಚಾಗಿದೆ. ಉದ್ಯಮ ಪರವಾದ ವಾತಾವರಣ ನಿರ್ಮಾಣ ಮಾಡಿದ್ದೇ ಇದಕ್ಕೆ ಕಾರಣ’ ಎಂದರು.

‘ದೇಶದಲ್ಲಿ ಮೊಬೈಲ್‌ ಉತ್ಪಾದನೆಗೆ ಕೇವಲ 2 ಘಟಕಗಳಿದ್ದವು. ಇಂದು 121 ಘಟಗಳು ಬೆಳೆದುನಿಂತಿವೆ. ಇದರಿಂದ 4.5 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಿವೆ. ಸದ್ಯ ನಾವು– ನೀವು ಬಳಸುತ್ತಿರುವ ಮೊಬೈಲ್‌ಗಳ ದರ ಕಡಿಮೆ ಆಗಲು ಇದೇ ಕಾರಣ. ಇಲ್ಲದಿದ್ದರೆ ಮೂರು ಪಟ್ಟು ದರ ಕೊಟ್ಟು ಕೊಳ್ಳಬೇಕಾಗುತ್ತಿತ್ತು’ ಎಂದರು.

‘₹ 1.32 ಲಕ್ಷ ಕೋಟಿ ವಿಮೆ ಪರಿಹಾರ’

‘ದೇಶದ 24 ವಿವಿಧ ಬೆಳೆಗಳಿಗೆ ಏಕಕಾಲಕ್ಕೆ ಬೆಂಬಲ ಬೆಲೆ ನೀಡಿದ್ದರಿಂದ ರೈತರಿಗೆ ಸಾಕಷ್ಟು ನೆಮ್ಮದಿ ಸಿಕ್ಕಿದೆ. ಈ ವರ್ಷ 379.6 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯನ್ನು ವಿಮೆ ವ್ಯಾಪ್ತಿಗೆ ತರಲಾಗಿದೆ. ₹ 1.32 ಲಕ್ಷ ಕೋಟಿ ವಿಮೆ ಪರಿಹಾರ ಹಣ ನೀಡಲಾಗಿದೆ’ ಎಂದು ವಿಶ್ವನಾಥ್‌ ಹೇಳಿದರು.

‘ಬೀಜ ಬಿತ್ತುವುದರಿಂದ ಹಿಡಿದು ಮಾರುಕಟ್ಟೆಗೆ ಫಸಲು ತಂದು ಹಾಕುವವರೆಗೂ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ಕೇಂದ್ರದ ಯೋಜನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ರೈತರೇ ನೇರವಾಗಿ ಮಾರುಕಟ್ಟೆ ಒಡೆಯರಾಗುತ್ತಾರೆ’ ಎಂದು ವಿಶ್ಲೇಷಿಸಿದರು.

ಅಂಕಿ ಅಂಶ

* 8 ಕಿ.ಮೀ ಯುಪಿಎ ಸರ್ಕಾರ ದಿನಕ್ಕೆ ನಿರ್ಮಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ

* 38 ಕಿ.ಮೀ ಮೋದಿ ಸರ್ಕಾರ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ

* 69 ಕಿ.ಮೀಹಿಂದಿನ ಸರ್ಕಾರ ದಿನಕ್ಕೆ ನಿರ್ಮಿಸುತ್ತಿದ್ದ ಗ್ರಾಮೀಣ ರಸ್ತೆ

* 130 ಕಿ.ಮೀ ಮೋದಿ ಸರ್ಕಾರ ನಿರ್ಮಿಸುತ್ತಿರುವ ಗ್ರಾಮೀಣ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.