ADVERTISEMENT

ತಾಯಂದಿರಿಂದ ಮಕ್ಕಳಿಗೆ ಕೈತುತ್ತಿನ ಸವಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 5:31 IST
Last Updated 30 ಜನವರಿ 2025, 5:31 IST
ಕಲಬುರಗಿ ಜಿಲ್ಲೆಯ ಸೇಡಂ ಹೊರವಲಯದ ಬೀರನಹಳ್ಳಿ ಕ್ರಾಸ್‌ ಬಳಿ ಬುಧವಾರ ಆರಂಭವಾದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಕೈತುತ್ತು ಭೋಜನ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ತಾಯಂದಿರು ಪಾಲ್ಗೊಂಡಿದ್ದರು
ಕಲಬುರಗಿ ಜಿಲ್ಲೆಯ ಸೇಡಂ ಹೊರವಲಯದ ಬೀರನಹಳ್ಳಿ ಕ್ರಾಸ್‌ ಬಳಿ ಬುಧವಾರ ಆರಂಭವಾದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಕೈತುತ್ತು ಭೋಜನ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ತಾಯಂದಿರು ಪಾಲ್ಗೊಂಡಿದ್ದರು   

ಸೇಡಂ: ಭಾರತ ವಿಕಾಸ ಸಂಗಮ ಹಾಗೂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಸೇಡಂ ಹೊರವಲಯದ ಪ್ರಕೃತಿ ನಗರದಲ್ಲಿ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವದ ಮೊದಲ ದಿನವಾದ ಬುಧವಾರ ಸಹಸ್ರಾರು ಮಾತೆಯರು ಮಕ್ಕಳಿಗೆ ಕೈತುತ್ತು ನೀಡುವ ಮೂಲಕ ತಾಯಿ–ಮಗುವಿನ ಬಾಂಧವ್ಯವನ್ನು ವ್ಯಕ್ತಪಡಿಸಿದರು.

ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್. ಅಪ್ಪಾ ಅವರು ಮಕ್ಕಳಿಗೆ ಕೈತುತ್ತು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತ ವಿಕಾಸ ಅಕಾಡೆಮಿಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ, ಅದಮ್ಯ ಚೇತನ ಪ್ರತಿಷ್ಠಾನದ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್, ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಸಂಸ್ಥಾಪಕಿ ಲೀಲಾ ಕಾರಟಗಿ ಸೇರಿದಂತೆ ಇತರರು ಜೊತೆಯಾದರು.

ತಾಯಂದಿರು ಊಟವನ್ನು ತಂದಿದ್ದರು. ಸಾಮೂಹಿಕವಾಗಿ ಮಕ್ಕಳಿಗೆ ಕೈತುತ್ತು ನೀಡಿದರು. ಮಹಿಳೆಯರು ಉತ್ಸವದ ಮುಖ್ಯ ಸಂಘಟಕ ಬಸವರಾಜ ಪಾಟೀಲ ಸೇಡಂ ಅವರಿಗೂ ಕೈತುತ್ತು ನೀಡಿದರು.

ADVERTISEMENT

ಕೈತುತ್ತು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಯಂದಿರು ತಮ್ಮ ಮಕ್ಕಳೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಬೆಳಿಗ್ಗೆಯೇ ಬಂದು ಸೇರಿದ್ದರು. ಉದ್ಘಾಟನಾ ಸಮಾರಂಭ ಮುಗಿಯುತ್ತಿದ್ದಂತೆಯೇ ವಿಶ್ರಾಂತ ಕುಲಪತಿ ದಿ.ಡಾ.ಎಸ್‌.ಎ. ಪಾಟೀಲ ಹೆಸರಿನ ಪ್ರಧಾನ ವೇದಿಕೆಯಲ್ಲಿಯೇ ಕೈತುತ್ತು ಉಣ್ಣಿಸುವ ಕಾರ್ಯಕ್ಕೆ ಚಾಲನೆ ದೊರೆಯಿತು.

ನಂತರ ನಡೆದ ಮಾತೃ ಸಮಾವೇಶದಲ್ಲಿ ಮಹಿಳಾ ಗಣ್ಯರು ತಾಯಿ, ಮಕ್ಕಳ ಭಾವನಾತ್ಮಕ ಸಂಬಂಧದ ಕುರಿತು ಉಪನ್ಯಾಸ ನೀಡಿದರು.

ಭಾಲ್ಕಿಯ ಪಟ್ಟದ್ದೇವರು ಸಂಸ್ಥಾನದ ಪೀಠಾಧಿಪತಿ ಡಾ.ಬಸವಲಿಂಗ ಪಟ್ಟದ್ದೆವರು, ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಶಿಕ್ಷಣ ತಜ್ಞೆ ಲೀಲಾ ಮಲ್ಲಿಕಾರ್ಜುನ ಕಾರಟಗಿ, ಅಧ್ಯಾತ್ಮ ಚಿಂತಕಿ ಹಾರಿಕಾ ಮಂಜುನಾಥ ಮಾತನಾಡಿದರು.

Quote - ಅಮ್ಮ ಎಂದರೆ ಒಂದು ಜೀವಿ ಅಲ್ಲ ಅಂತಃಕರಣದ ಒಟ್ಟು ಶಕ್ತಿ ಹೀಗಾಗಿ ತಾಯಿ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರು ತಾಯಿಯನ್ನು ಪೂಜಿಸುತ್ತಾರೋ ಗೌರವಿಸುತ್ತಾರೋ ಅವರು ಬದುಕಿನಲ್ಲಿ ಶ್ರೇಷ್ಠರಾಗುತ್ತಾರೆ ಗುರುರಾಜ ಕರ್ಜಗಿ ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.