ADVERTISEMENT

ಕಲಬುರಗಿ ರೈಲ್ವೆ ವಿಭಾಗ ಆರಂಭಕ್ಕೆ ಡಾ.ಜಾಧವ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 14:30 IST
Last Updated 23 ಸೆಪ್ಟೆಂಬರ್ 2022, 14:30 IST
ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಷ್ ಅವರಿಗೆ ಸಂಸದ ಡಾ. ಉಮೇಶ ಜಾಧವ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ರೈಲ್ವೆ ಹೋರಾಟ ಸಮಿತಿಯ ಮುಖಂಡ ಸುನೀಲ ಕುಲಕರ್ಣಿ ಇದ್ದರು
ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಷ್ ಅವರಿಗೆ ಸಂಸದ ಡಾ. ಉಮೇಶ ಜಾಧವ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ರೈಲ್ವೆ ಹೋರಾಟ ಸಮಿತಿಯ ಮುಖಂಡ ಸುನೀಲ ಕುಲಕರ್ಣಿ ಇದ್ದರು   

ಕಲಬುರಗಿ: ಕಲಬುರಗಿ ನಗರದಲ್ಲಿ ರೈಲ್ವೆ ವಿಭಾಗೀಯ ಕಚೇರಿಯನ್ನು ಶೀಘ್ರ ಕಾರ್ಯಾರಂಭ ಮಾಡಬೇಕು ಎಂದು ಸಂಸದ ಡಾ. ಉಮೇಶ ಜಾಧವ ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಷ್ ಅವರನ್ನು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸಚಿವರು ಆಯೋಜಿಸಿದ್ದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಗೆ ಸಂಬಂಧಪಟ್ಟಂತೆ ವಿವಿಧ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಿದರು.

ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು ಎಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಜಾಗವನ್ನೂ ಮಂಜೂರು ಮಾಡಲಾಗಿತ್ತು. ಹೀಗಾಗಿ, ರೈಲ್ವೆ ಇಲಾಖೆಯು ವಿಭಾಗೀಯ ಕಚೇರಿ ಆರಂಭಿಸಲು ಅನುಮತಿ ನೀಡಿದರೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಕಲಬುರಗಿಯಿಂದಲೇ ರೈಲುಗಳ ಸಂಚಾರವನ್ನು ವಿವಿಧೆಡೆ ಆರಂಭಿಸಬಹುದಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

ADVERTISEMENT

ಕಲಬುರಗಿಯಿಂದ ಬೆಂಗಳೂರಿಗೆ ಒಂದು ಎಕ್ಸ್‌ಪ್ರೆಸ್ ರೈಲನ್ನು ಹೊಸದಾಗಿ ಆರಂಭಿಸಬೇಕು. ಕೋವಿಡ್‌ಗಿಂತ ಮುಂಚೆ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ನಿಲ್ದಾಣಗಳಲ್ಲಿ ಹಲವು ರೈಲುಗಳ ನಿಲುಗಡೆ ಇರುತ್ತಿತ್ತು. ಆದರೆ, ಕೋವಿಡ್ ನಂತರ ಬಹಳಷ್ಟು ರೈಲುಗಳ ನಿಲುಗಡೆ ಇಲ್ಲದ್ದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಅತಿ ಶೀಘ್ರದಲ್ಲಿ ಈ ರೈಲುಗಳ ನಿಲುಗಡೆ ಆರಂಭಿಸಬೇಕು ಎಂದು ಕೋರಿದರು.

ಇದಕ್ಕೆ ಉತ್ತರಿಸಿದ ಸಚಿವೆ ದರ್ಶನ ಜರ್ದೋಷ್, ‘ಈಗಾಗಲೇ ಬಹುತೇಕ ಎಲ್ಲಾ ರೈಲುಗಳ ಸೇವೆಯನ್ನು ಪುನರಾರಂಭಿಸಲಾಗಿದೆ. ಉಳಿದ ಎಲ್ಲಾ ರೈಲುಗಳನ್ನು ಪುನಃ ಆರಂಭಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.