ADVERTISEMENT

ಜಿಮ್ಸ್‌ಗೆ ಸಿಬ್ಬಂದಿ ನೇಮಕಕ್ಕೆ ನಿರ್ದೇಶನ

ಸಂಸದರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಗುತ್ತಿಗೆ ಆಧರಿತ ನೇಮಕಾತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 3:34 IST
Last Updated 19 ಏಪ್ರಿಲ್ 2021, 3:34 IST

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕೂಡಲೇ ಗುತ್ತಿಗೆ ಆಧಾರಿತ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ಜಿಲ್ಲಾಧಿಕಾರಿ ಹಾಗೂ ಜಿಮ್ಸ್‌ ನಿರ್ದೇಕರಿಗೆ ನಿರ್ದೇಶನ ನೀಡಿದೆ.

‘ಜಿಮ್ಸ್‌ಗೆ ತುರ್ತಾಗಿ ಅಗತ್ಯವಿರುವ 10 ಲ್ಯಾಬ್ ಟೆಕ್ನಿಷಿಯನ್, 20 ಡಾಟಾ ಎಂಟ್ರಿ ಆಪರೇಟರ್, 10 ವೈದ್ಯರು, 40 ಜನ ಗ್ರೂಪ್ ‘ಡಿ’ ಸಿಬ್ಬಂದಿ ಹಾಗೂ 100 ಸ್ಟಾಫ್‌ ನರ್ಸ್‌ಗಳನ್ನು ಪೂರೈಸಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಅವರು ಶುಕ್ರವಾರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಸಿಬ್ಬಂದಿ ನೇಮಕಾತಿಗೆ ಅಸ್ತು ಎಂದಿದೆ.

‘ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣ ರೋಗಿಗಳ ಆರೈಕೆಗೆ ಬೇಕಾಗಿರುವ 50 ನರ್ಸ್ ಸಿಬ್ಬಂದಿ ಸೇರಿದಂತೆ ಇನ್ನಿತರ ಅಗತ್ಯ ಸಿಬ್ಬಂದಿಯನ್ನು ಹಣಕಾಸು ಇಲಾಖೆ ಅನುಮತಿ ಮೇರೆಗೆ, ಕೂಡಲೇ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಬೇಕು’ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅನಿಲಕುಮಾರ ಅವರು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹಾಗೂ ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರಿಗೆ ಪತ್ರ ಕಳಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಡಾ.ಉಮೇಶ ಜಾಧವ, ‘ಜಿಲ್ಲೆಯ ಆಸ್ಪತ್ರೆಗಳಿಗೆ ಇನ್ನಷ್ಟು ಆಕ್ಸಿಜನ್, ಹೆಚ್ಚುವರಿ ಬೆಡ್, ರೆಮ್‌ಡಿಸಿವಿರ್‌ ಇಂಜಕ್ಷನ್‌ ಪೂರೈಕೆ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆಯೂ ಕೋರಿದ್ದೇನೆ. ವಿಶೇಷವಾಗಿ ಜಿಮ್ಸ್‌ನಲ್ಲಿ 500 ಬೆಡ್‌ಗಳ ವ್ಯವಸ್ಥೆಗೂ ಕೋರಿದ್ದೇನೆ. ಇದಕ್ಕೆ ಸರ್ಕಾರ ಸ್ಪಂದಿಸಿದೆ’ ಎಂದರು.

‘ವೈರಾಣು ಓವರ್‌ಲೋಡ್‌ ಆದ ಸಂದರ್ಭದಲ್ಲಿ ಪ್ರಕರಣಗಳು ಹೆಚ್ಚಾಗುವುದು, ಲಕ್ಷಣಗಳು ಕಾಣಿಸುವುದು ಸಾಮಾನ್ಯ. ಸೋಂಕಿತರು ಇದಕ್ಕೆ ಆತಂಕಪಡಬೇಕಿಲ್ಲ. ಅಗತ್ಯವಿದ್ದವರಿಗೆ ಮಾತ್ರ ರೆಮ್‌ಡಿಸಿವಿರ್‌ ಇಂಜಕ್ಷನ್‌ ನೀಡಲಾಗುತ್ತದೆ. ಎಲ್ಲರೂ ಇದೇ ಇಂಜಕ್ಷನ್‌ ತೆಗೆದುಕೊಳ್ಳಬೇಕು ಎಂದು ಭಾವಿಸಿದ್ದರಿಂದ ಕೊರತೆ ಉಂಟಾಗುತ್ತದೆ. ಬಹಳಷ್ಟು ಸೋಂಕಿತರು ಯಾವುದೇ ಔಷಧಿ ಇಲ್ಲದೇ, ಮನೆಯಲ್ಲಿಯೇ ಗುಣಮುಖರಾಗುತ್ತಾರೆ. ಭಯ ಪಡಬಾರದು’ ಎಂದರು.

ನೋಡಲ್‌ ಅಧಿಕಾರಿಗಳ ನೇಮಕ: ‌ಕೊರೊನಾ ನಿಯಂತ್ರಣ ಕ್ರಮವನ್ನು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಔಷಧ ಸಂಗ್ರಹ ಹಾಗೂ ಕೊರತೆ ನೀಗಿಸಲು ರಾಜ್ಯ ಸರ್ಕಾರ ವಿಭಾಗವಾರು ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಿದೆ. ‌ ಬೆಂಗಳೂರಿನ ಕೇಂದ್ರ ಕಚೇರಿಯ ಉಪ ಔಷಧ ನಿಯಂತ್ರಕ ಶಂಕರಜ್ಯೋತಿ ಅವರನ್ನು ಗುಲಬರ್ಗಾ– ಬಳ್ಳಾರಿ ವಿಭಾಗದ ಮೇಲ್ವಿಚಾರಕರಾಗಿ ನೇಮಿಸಲಾಗಿದೆ.

ರೆಮ್‌ಡಿಸಿವಿರ್‌ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ ಬೇಕಾದ ಔಷಧಗಳ ಕೊರತೆ ಆಗದಂತೆ ನೋಡಿಕೊಳ್ಳುವುದು ಹಾಗೂ ಕೊರತೆ ಕಂಡುಬಂದಲ್ಲಿ ತಕ್ಷಣ ಪೂರೈಸುವುದು, ಪ್ರತಿ ದಿನ ಸಂಜೆ 6 ಗಂಟೆಯೊಳಗೆ ತಮ್ಮ ವಿಭಾಗ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯತೆ ಕುರಿತು ಮಾಹಿತಿ ನೀಡುವ ಹೊಣೆಯನ್ನು ಇವರಿಗೆ ಹೊರಿಸಿದೆ.

10 ಮಂದಿಯ ಸಮಿತಿ ರಚನೆಗೆ ನಿರ್ದೇಶನ: ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ 10 ತಜ್ಞ ವೈದ್ಯರನ್ನು ಸೇರಿಸಿ ಒಂದು ಸಮಿತಿ ರಚಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಈ ವೈದ್ಯರು ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಯಾರಿಗಾದರೂ ಬೆಡ್‌ ಸಿಗುತ್ತಿಲ್ಲ ಎಂದಾದರೆ ತಕ್ಷಣ ಈ ಸಮಿತಿ ಅಲ್ಲಿನ ವಸ್ತುಸ್ಥಿತಿ ಅರಿತು ಸೋಂಕಿತರ ನೆರವಿಗೆ ಧಾವಿಸಬೇಕು ಎಂದು ಸಲಹೆ ನೀಡಿದ್ದಾಗಿ’ ಸಂಸದರು ಹೇಳಿದರು.

‘ನಗರದ ಜಿಮ್ಸ್‌ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಎಲ್ಲ ಬೆಡ್‌ಗಳು ಭರ್ತಿಯಾಗಿವೆ. ಆಕ್ಸಿಜನ್‌ ಬೆಡ್‌ ಸಿಗದೇ ಹಲವಾರು ಸೋಂಕಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಅಧಿಕಾರಿಗಳು ಬೆಡ್‌ಗಳ ಕೊರತೆ ಇಲ್ಲ ಎಂದು ಸುಳ್ಳು ಹೇಳುತ್ತಲೇ ಇದ್ದಾರೆ. ಇದಕ್ಕೆ ಕಾರಣವೇನು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಡಾ.ಉಮೇಶ ಜಾಧವ, ‘ಈಗಾಗಲೇ ಅಫಜಲಪುರ ಹಾಗೂ ಸೇಡಂ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿ ಎಲ್ಲ ಆಸ್ಪತ್ರೆಗಳನ್ನೂ ಅಣಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಮಾತ್ರವಲ್ಲ; ತುರ್ತು ಅವಶ್ಯಕತೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ವ್ಯವಸ್ಥೆ ಮಾಡಬೇಕಿದೆ. ಕೂಡಲೇ ಸಿದ್ಧತೆ ಮಾಡಿಕೊಳ್ಳುವಂತೆ ಮತ್ತೊಮ್ಮೆ ತಾಕೀತು ಮಾಡುತ್ತೇನೆ’ ಎಂದರು.

ಸ್ವಯಂ ಸೇವಕರಿಗೆ ಆಹ್ವಾನ
ಜಿಲ್ಲೆಯ ಸ್ವಯಂ ಸೇವಾ ಸಂಘಟನೆಗಳು ಹಾಗೂ ಸ್ವಯಂ ಸೇವಕರು ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಲು ಮುಂದೆ ಬರಬೇಕು. ಕಳೆದ ಬಾರಿ ಸ್ವಯಂ ಸೇವಕರು ಸಲ್ಲಿಸಿದ ಸೇವೆ ಗಣನೀಯವಾದದ್ದು. ನಮ್ಮಲ್ಲಿ ಸಿಬ್ಬಂದಿ ಕೊರತೆಯ ಕಾರಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟು ಅರಿವು ಮೂಡಿಸುವ ಉದ್ದೇಶದಿಂದ ಸ್ವಯಂ ಸೇವಕರು ಮುಂದೆ ಬರಬೇಕು’ ಎಂದೂ ಸಂಸದ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.