ಜೇವರ್ಗಿ: ಪಟ್ಟಣದ ದತ್ತನಗರ ಬಡಾವಣೆಯಲ್ಲಿರುವ ಮೂರು ವಸತಿ ನಿಲಯಗಳಿಗೆ ತೆರಳುವ ರಸ್ತೆ ಸತತ ಮಳೆಯಿಂದ ಕೆಸರು ಗದ್ದೆಯಂತಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ವಿಜಯಪುರ ರಸ್ತೆಯ ದತ್ತನಗರ ಬಡಾವಣೆಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿದೆ.
ಇಲ್ಲಿನ ವಸತಿ ನಿಲಯಗಳಲ್ಲಿ ಸರಿ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮಳೆನೀರು ರಸ್ತೆ ಮೇಲೆಯೇ ನಿಲ್ಲುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.
ವಸತಿ ನಿಲಯಗಳಿಗೆ ಹೋಗಲು ಯಾವುದೇ ರೀತಿಯ ಸೌಕರ್ಯವಿಲ್ಲ. ಅಟೋಗಳು ಕೂಡಾ ಓಡಾಡುತ್ತಿಲ್ಲ. ಈ ರಸ್ತೆಯಲ್ಲಿ ದ್ವಿಚಕ್ರವಾಹನ ಕೂಡ ಹೋಗಲು ಸಾಧ್ಯವಿಲ್ಲದಂತಾಗಿದೆ. ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕು. ಮಳೆಗಾಲ ಮುಗಿಯುವವರೆಗೆ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.
ವಸತಿನಿಲಯಗಳಿಗೆ ಅಗತ್ಯವಾದ ವಸ್ತುಗಳು, ದಿನಸಿ, ಗ್ಯಾಸ್ ಸಿಲಿಂಡರ್ ಸಾಗಿಸಲು ಹರಸಾಹಸ ಪಡುವಂತಾಗಿದೆ. ಹೆದ್ದಾರಿಯಿಂದ ವಸತಿ ನಿಲಯದವರೆಗೆ ಹೊತ್ತುಕೊಂಡು ಹೋಗುವಂತಾಗಿದೆ.
ಹಲವು ವರ್ಷಗಳಿಂದ ಇದೇ ದುಸ್ಥಿತಿ ಇದೆ. ಈ ಬಗ್ಗೆ ಕಳೆದ ನಾಲ್ಕಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಮಾಡುತ್ತಾ ಬಂದಿದ್ದಾರೆ. ಆದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಪುರಸಭೆ ರಸ್ತೆ ನಿರ್ಮಾಣದ ಗೋಜಿಗೆ ಹೋಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಸಂಬಂಧಿಸಿದ ಇಲಾಖೆ ಶೀಘ್ರ ರಸ್ತೆಗೆ ತಾತ್ಕಾಲಿಕ ಮುರುಮ್ ಹಾಕಿಸಿ ಅನುಕೂಲ ಮಾಡಬೇಕು ಎಂದು ಪೋಷಕರು
ಒತ್ತಾಯಿಸಿದ್ದಾರೆ.
ಮೂರು ವಸತಿನಿಲಯ ವಿದ್ಯಾರ್ಥಿಗಳಿಗೆ ತೊಂದರೆ | ಕಾಲೇಜಿಗೆ ತೆರಳಲು ನರಕಯಾತನೆ | ರಸ್ತೆ ದುರಸ್ತಿಗೆ ಪೋಷಕರ ಒತ್ತಾಯ
ವಸತಿ ಶಾಲೆಯಲ್ಲಿ ಬಡ ಮಕ್ಕಳಿದ್ದಾರೆ. ಇಲ್ಲಿನ ಮಕ್ಕಳ ಕಷ್ಟ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಕೂಡಲೇ ರಸ್ತೆ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಬೇಕುಸಿದ್ದು ಕಲ್ಲೂರ ಸ್ಥಳೀಯ ನಿವಾಸಿ
ರಸ್ತೆಗೆ ಮುರುಮ್ ಹಾಕಿಸಿ ಸಂಚಾರ ಮಾಡಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದುಶಂಭುಲಿಂಗ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.