ADVERTISEMENT

ಚಿಂಚೋಳಿ: ಪುರಸಭೆಯಲ್ಲಿ ಮುನ್ಸಿಪಲ್ ಪೊಲೀಸಿಂಗ್

ಪೌರಕಾರ್ಮಿಕರು, ಸಿಬ್ಬಂದಿಯ ರಕ್ಷಣೆಗೆ ವಿಶೇಷ ಯೋಜನೆ

ಜಗನ್ನಾಥ ಡಿ.ಶೇರಿಕಾರ
Published 8 ಸೆಪ್ಟೆಂಬರ್ 2020, 8:13 IST
Last Updated 8 ಸೆಪ್ಟೆಂಬರ್ 2020, 8:13 IST
ಚಿಂಚೋಳಿ ಪುರಸಭೆಯ ನೌಕರರಿಗೆ ತಮ್ಮ ಕರ್ತವ್ಯಗಳ ಬಗ್ಗೆ ಮುಖ್ಯಾಧಿಕಾರಿ ಅಭಯಕುಮಾರ ಸೂಚನೆ ನೀಡಿದರು
ಚಿಂಚೋಳಿ ಪುರಸಭೆಯ ನೌಕರರಿಗೆ ತಮ್ಮ ಕರ್ತವ್ಯಗಳ ಬಗ್ಗೆ ಮುಖ್ಯಾಧಿಕಾರಿ ಅಭಯಕುಮಾರ ಸೂಚನೆ ನೀಡಿದರು   

ಚಿಂಚೋಳಿ: ದಿನ ಬೆಳಗಾದರೆ ಒಂದಿಲ್ಲೊಂದು ಕಿರಿಕಿರಿ, ಯಾವ ಕೆಲಸ ಮಾಡಬೇಕಾದರೂ ಅಡೆತಡೆಗಳು ಎದುರಾಗಿ ನೌಕರರಲ್ಲಿ ಮನೋಬಲ ಕ್ಷೀಣಿಸುತ್ತಿತ್ತು. ಪರಿಹಾರ ಕಂಡುಕೊಳ್ಳಲು ಪೊಲೀಸ್ ಠಾಣೆಗೆ ಹೋದರೆ ಅಲ್ಲಿಯೂ ಸಿಬ್ಬಂದಿ ಕೊರತೆ ಕಾಡುತ್ತಿತ್ತು.

ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ತಮ್ಮ ನೌಕರರಿಗೆ ತಮ್ಮವರಿಂದಲೇ ರಕ್ಷಣೆ ನೀಡಲು ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಅವರು ಮುನ್ಸಿಪಲ್ ಪೊಲೀಸಿಂಗ್ ಎಂಬ ವಿನೂತನ ಯೋಜನೆ ಜಾರಿಗೆ ತಂದಿದ್ದಾರೆ.

ಪುರಸಭೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯ ಮೇಲೆ ಹಲ್ಲೆ, ಕಾಯ್ದೆ ಉಲ್ಲಂಘಿಸಿ ರಸ್ತೆಯಲ್ಲಿ ಬೇಕಾಬಿಟ್ಟಿ ವ್ಯವಹಾರ ಹಾಗೂ ಕಚೇರಿಗಳಲ್ಲಿ ಆಗದ ಕೆಲಸ ಮಾಡಿಕೊಡುವಂತೆ ಅನಗತ್ಯ ಕಿರಿಕಿರಿ ತಪ್ಪಿಸಿ ಸಿಬ್ಬಂದಿಗೆ ರಕ್ಷಣೆ ನೀಡುವುದೇ ಈ ಮುನ್ಸಿಪಲ್ ಪೊಲೀಸಿಂಗ್ ಯೋಜನೆ.

ADVERTISEMENT

ಮುನ್ಸಿಪಲ್ ಪೊಲೀಸಿಂಗ್ ಎಂದರೆ ಪುರಸಭೆಯ ನೌಕರರರಾದ ಆಡಳಿತ ಶಾಖೆ, ಕರ ವಸೂಲಿಗಾರ, ಪೌರ ಕಾರ್ಮಿಕರು ಹಾಗೂ ಪಂಪ್ ಆಪರೇಟರ್ ಒಳಗೊಂಡ 10 ಜನರನ್ನು ಗುರುತಿಸಿ ಅವರಿಗೆ ವಿಶೇಷವಾದ ಸಮವಸ್ತ್ರ, ಶೂ ಹಾಗೂ ಬೆಲ್ಟ್ ಕೊಡಿಸಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಇವರು ತಮ್ಮ ದೈನಂದಿನ ಕೆಲಸ ಮಾಡಿ ಹೆಚ್ಚುವರಿಯಾಗಿ ಮುನ್ಸಿಪಲ್ ಪೊಲೀಸಿಂಗ್ ಕೆಲಸ ಮಾಡುತ್ತಾರೆ. ಪರಿಸ್ಥಿತಿಯ ನಿರ್ವಹಣೆ, ಸಿಬ್ಬಂದಿಯ ರಕ್ಷಣೆ, ಜನರೊಂದಿಗೆ ಬೆರೆಯುವಿಕೆ ಹಾಗೂ ಸಮಸ್ಯೆ ನಿವಾರಣೆ ಕುರಿತು ತರಬೇತಿ ನೀಡಲಾಗಿದೆ. ಜತೆಗೆ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ.

ಪುರಸಭೆಯ ಅಧಿಕಾರಿಯಿಂದ ಹಿಡಿದು ಪೌರಕಾರ್ಮಿಕರವರೆಗೂ ಎಲ್ಲಿಯಾದರೆ ಕರ್ತವ್ಯಕ್ಕೆ ಅಡಚಣೆ ಎದುರಾದರೆ, ಆಗ ಈ ಮುನ್ಸಿಪಲ್ ಪೊಲೀಸಿಂಗ್ ಸಿಬ್ಬಂದಿ ತಕ್ಷಣ ಅಲ್ಲಿ ಹಾಜರಾಗುತ್ತಾರೆ. ಕೆಲವರು ಪರಿಸ್ಥಿತಿ ಅವಲೋಕನ ಮಾಡಿದರೆ, ಇನ್ನೂ ಕೆಲವರು ತಮ್ಮ ಸಿಬ್ಬಂದಿಯ ರಕ್ಷಣೆಗೆ ಬೆಂಗಾವಲಾಗುತ್ತಾರೆ. ಮತ್ತೆ ಕೆಲವರು ಉದ್ದೇಶಿತ ಕಾರ್ಯ ಸಾಧನೆಯಲ್ಲಿ ತೊಡಗುತ್ತಾರೆ.

ಇದರಿಂದ ಸಿಬ್ಬಂದಿಯಲ್ಲಿಯೂ ಮನೋಬಲ ಹೆಚ್ಚುತ್ತದೆ. ಇದರಿಂದ ನಮ್ಮ ಸಮಸ್ಯೆಗೆ ನಾವು ಪರಿಹಾರ ಕಂಡುಕೊಳ್ಳಲು ಸುಲಭವಾಗಿದೆ ಎಂದು ಮುಖ್ಯಾಧಿಕಾರಿ ಅಭಯಕುಮಾರ ಹೇಳಿದರು.

ನಮ್ಮನ್ನು ವಿಶೇಷ ಸಮವಸ್ತ್ರಗಳಲ್ಲಿ ನೋಡಿದ ಮೇಲೆ ಸಾರ್ವಜನಿಕರ ಸಹಕಾರವೂ ಉತ್ತಮವಾಗಿದೆ ಎನ್ನುತ್ತಾರೆ ಅಯ್ಯುಬ ಮತ್ತು ವಿನೋದ್.

ಸದ್ಯ ಪುರಸಭೆಯಲ್ಲಿ ಈಗ ಹೊಸ ಗಾಳಿ ಬೀಸಲಾರಂಬಿಸಿದೆ. ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ಮೇಲೆ ಸಿಬ್ಬಂದಿಯ ಮುಖದಲ್ಲಿ ಹೊಸ ಕಳೆ ಗೋಚರಿಸುತ್ತಿದೆ.
ಪುರಸಭೆಯ ಆಡಳಿತ ಸಿಬ್ಬಂದಿ ಹೊರತುಪಡಿಸಿ ಪೌರ ಕಾರ್ಮಿಕರಿಗೆ, ವಾಟರ್ ಮೆನ್, ವಾಹನ ಚಾಲಕರಿಗೆ ಸಮವಸ್ತ್ರ ನೀಡಲಾಗಿದೆ.

ಇದರ ಜತೆಗೆ ಎಲ್ಲಾ ಪೌರ ಕಾರ್ಮಿಕರಿಗೆ ಸ್ವಚ್ಛತಾ ಸೇನಾನಿ ಎಂದು ಅವರಿಗೆ ಗುರುತಿನ ಚೀಟಿ ನೀಡುವುದು ಹಾಗೂ ಪ್ರತಿ ತಿಂಗಳು ನಾಲ್ಕನೇ ಶನಿವಾರ ಎಲ್ಲಾ ಸಿಬ್ಬಂದಿ ಒಟ್ಟಿಗೆ ಕುಳಿತು ಸಹಭೋಜನ ಮಾಡುವ ಯೋಜನೆ ರೂಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.