ಆಳಂದ: ‘ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಕಾರ ನೀಡಿದರೆ ಮಾತ್ರ ಮಕ್ಕಳು ಸನ್ಮಾರ್ಗದ ಜೀವನ ರೂಪಿಸಿಕೊಳ್ಳಲು ಸಾಧ್ಯ’ ಎಂದು ಅಬ್ಬೆ ತುಮಕೂರಿನ ಪ್ರವಚನಕಾರ ತೋಟಯ್ಯ ಶಾಸ್ತ್ರಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮುನ್ನೋಳ್ಳಿ ಗ್ರಾಮದಲ್ಲಿ ಭಾನುವಾರ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡ ಸೊನ್ನಲಗಿ ಸಿದ್ಧರಾಮೇಶ್ವರ ಪುರಾಣ ಮಹಾಮಂಗಲ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿದರು.
‘12ನೇ ಶತಮಾನದ ಬಸವಾದಿ ಶರಣರಲ್ಲಿ ಸಿದ್ಧರಾಮರು ಕಾಯಕಯೋಗಿ ಶರಣರಾಗಿದ್ದರು. ಅವರ ನಡೆ, ನುಡಿ, ದಾಸೋಹ ಹಾಗೂ ಸಮಾಜ ಸೇವಾ ಕಾರ್ಯಗಳು ಮಾದರಿಯಾಗಿವೆ. ಪುರಾಣ, ಪ್ರವಚನಗಳಿಂದ ಮನುಷ್ಯನ ವ್ಯಕ್ತಿತ್ವದಲ್ಲಿ ಪರಿವರ್ತನೆಯಾಗಬೇಕಿದೆ’ ಎಂದರು.
ಉಪನ್ಯಾಸಕ ಸಂಜಯ ಪಾಟೀಲ ಮಾತನಾಡಿ, ‘ಮಾನವೀಯ ಮೌಲ್ಯಗಳೇ ಎಲ್ಲ ಧರ್ಮಗಳ ತಳಹದಿಯಾಗಿದ್ದು, ಶರಣರು ಸಾರಿದ ವಚನಗಳು ಹಾಗೂ ಅವರ ಆದರ್ಶ ಜೀವನವು ಯುವಕರಿಗೆ ಸ್ಫೂರ್ತಿಯಾಗಬೇಕಿದೆ, ಈ ಹಿನ್ನೆಲೆಯಲ್ಲಿ ಪುರಾಣ, ಪ್ರವಚನಗಳು ಅವಶ್ಯಕವಾಗಿವೆ’ ಎಂದರು.
ಮುಖಂಡ ಶಿವಪುತ್ರಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದಯಾನಂದ ವಾಲಿ, ಪ್ರಮುಖರಾದ ಶಂಭುಲಿಂಗಯ್ಯ ಸ್ವಾಮಿ, ರೇವಪ್ಪ ಬಿರಾದಾರ, ಶಾಂತಕುಮಾರ ವೇದಶೆಟ್ಟಿ, ಶಿವಶರಣಪ್ಪ ಬುಜರ್ಕೆ, ಗುಂಡಪ್ಪ ಬಿರಾದಾರ, ರಾಜಕುಮಾರ ಬುಜರ್ಕೆ, ಸಿದ್ದು ವೇದಶೇಟ್ಟಿ, ಎಂ.ಎಸ್.ವಾಲಿ, ಮಹಾಂತಪ್ಪ ಬಿರಾದಾರ, ಶ್ರೀಶೈಲ ಶೇಗಜಿ, ಶರಣಬಸಪ್ಪ ಗೂಂಡೂರೆ, ಸೂರ್ಯಕಾಂತ ಪರೀಟ ಉಪಸ್ಥಿತರಿದ್ದರು. ಮಹಾದೇವ ಗುಂಡೂರೆ ನಿರೂಪಿಸಿದರು. ಶಿವಕುಮಾರ ಬುಜರ್ಕೆ ವಂದಿಸಿದರು. ಸಂಗೀತ ಕಲಾವಿದರಾದ ಚನ್ನಯ್ಯ ಹಿರೇಮಠ, ಸೋಮಯ್ಯ ಹಿರೇಮಠ, ಮೌನೇಶ ಪಂಚಾಳ ಅವರಿಂದ ವಿವಿಧ ಭಕ್ತಿಗೀತೆ, ಜಾನಪದ ಗೀತೆಗಳ ಗಾಯನ ಮನಸೆಳೆದವು.
ಈ ಮೊದಲು ಗ್ರಾಮದ ಮುಖ್ಯಬೀದಿಗಳಲ್ಲಿ ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ ಸಂಭ್ರಮದೊಂದಿಗೆ ಜರುಗಿತು. ಪುರವಂತರ ಕುಣಿತ, ನೂರಾರು ಮಹಿಳೆಯರು ಕುಂಭಕಳಸದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆ ಅಂಗವಾಗಿ ಕಳೆದ 11 ದಿನಗಳಿಂದ ಹಮ್ಮಿಕೊಂಡ ಸಿದ್ದರಾಮೇಶ್ವರರ ಪುರಾಣದ ಮಹಾಮಂಗಲವು ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.