ಕಲಬುರಗಿ: ನಾಗನಹಳ್ಳಿ ನಿವಾಸಿ ಸುಮೀತ್ ಮಲ್ಲಾಬಾದಿ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ನಗರದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಪತ್ತೆ ಹಚ್ಚಿ ಬಂಧಿಸಿದ್ದಾರೆ. ತಲೆಮರೆಸಿಕೊಂಡ ಇನ್ನಿಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
‘ಕೊಲೆ ಪ್ರಕರಣದಲ್ಲಿ ಜಯಮ್ಮ, ರಾಜಕುಮಾರ, ರಾಜಕುಮಾರ ಪುತ್ರಿ ವೈಷ್ಣವಿ, ಸಿದ್ದರಾಮ, ವರುಣಕುಮಾರ ಮತ್ತು ಪ್ರಜ್ವಲ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು.
‘ಕೊಲೆಯಾದ ಸುಮೀತ್ ಮಲ್ಲಬಾದಿ ಅವರ ಅಣ್ಣ ಸಚಿನ್ ಮಲ್ಲಬಾದಿ ಅವರು ರಾಜಕುಮಾರ ಅವರ ಪುತ್ರಿಯನ್ನು ಪ್ರೀತಿಸುತ್ತಿದ್ದರು. ಈಚೆಗೆ ರಾಜಕುಮಾರ ಅವರ ಮನೆಗೆ ಸುಮಿತ್ ಕುಟುಂಬಸ್ಥರು ಹೆಣ್ಣು ಕೇಳಲು ಹೋಗಿದ್ದರು. ಈ ವೇಳೆ ಎರಡೂ ಕುಟುಂಬಸ್ಥರ ನಡುವಿನ ಮಾತುಕತೆ ವೇಳೆ ಗಲಾಟೆಯಾಗಿ, ಅದು ವಿಕೋಪಕ್ಕೆ ತಿರುಗಿತು’ ಎಂದರು.
‘ಸೆಪ್ಟೆಂಬರ್ 20ರ ರಾತ್ರಿ ವರುಣಕುಮಾರ, ಆತನ ಸ್ನೇಹಿತರಾದ ಸಿದ್ದು, ಪ್ರಜ್ವಲ್ ಮತ್ತು ದೀಪಕ್ ಅವರೊಂದಿಗೆ ಆಟೊದಲ್ಲಿ ಸುಮೀತ್ ಅವರ ಮನೆಗೆ ಬಂದರು. ಸುಮೀತ್ ಕುಟುಂಬಸ್ಥರೊಂದಿಗೆ ಜಗಳ ಮಾಡಿಕೊಂಡರು. ಈ ವೇಳೆ ರಾಜಕುಮಾರ, ಜಯಮ್ಮ ಮತ್ತು ವೈಷ್ಣವಿ ಸಹ ಇದ್ದರು. ಹೊಡೆದಾಟ ನಡೆಯುತ್ತಿದ್ದಾಗ ಆರೋಪಿ ವರುಣಕುಮಾರ ಅವರು ಚಾಕುವಿನಿಂದ ಸಮೀತ್ ಅವರ ಎಡಗಡೆಯ ಹೊಟ್ಟೆಗೆ ಚುಚ್ಚಿ, ತೀವ್ರ ಗಾಯಗೊಳಿಸಿದರು. ಚಿಕಿತ್ಸೆ ಫಲಕಾರಿಯಾಗಿದೆ ಸುಮೀತ್ ಅವರು ಮೃತಪಟ್ಟರು’ ಎಂದು ಮಾಹಿತಿ ನೀಡಿದರು.
‘ಬಂಧಿತರಾದ ಆರೋಪಿಗಳು ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನಿಬ್ಬರ ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ’ ಎಂದರು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಎಚ್.ನಾಯಕ್, ಸಬ್‌ಅರ್ಬನ್ ಉಪ ವಿಭಾಗದ ಎಸಿಪಿ ಡಿ.ಜಿ.ರಾಜಣ್ಣ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಠಾಣೆಯ ಪಿಐ ಸುಶೀಲಕುಮಾರ ನೇತೃತ್ವದಲ್ಲಿ ಪಿಎಸ್‍ಐ ಅನಿಲ್ ಜೈನ, ಸಿಬ್ಬಂದಿ ಸಂಜುಕುಮಾರ, ಸುಲ್ತಾನ್, ಪ್ರಕಾಶ, ರಾಜಕುಮಾರ, ಕಿಶೋರ, ಈರಣ್ಣ ಮತ್ತು ರೇಣುಕಾ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
‘ನಗರದ ಪ್ರಮುಖ ವೃತ್ತ ಜನನಿಬಿಡ ಪ್ರದೇಶ ಮತ್ತು ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಅನಧಿಕೃತ ಆಟೊಗಳನ್ನು ಪತ್ತೆಹಚ್ಚಲಾಗುವುದು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು. ‘ನಗರದಲ್ಲಿ ಸಾಕಷ್ಟು ಕಡೆ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಶೀಘ್ರವೇ ಅದಕ್ಕೆ ಕಡಿವಾಣ ಹಾಕಲಾಗುವುದು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಕೇಂದ್ರ ಬಸ್ ನಿಲ್ದಾಣ ಕಣ್ಣಿ ಮಾರ್ಕೆಟ್ ಸೂಪರ್ ಮಾರ್ಕೆಟ್ ರೈಲ್ವೆ ನಿಲ್ದಾಣಗಳ ಸಮೀಪ ನಿಲ್ಲುವ ಅನಧಿಕೃತ ಆಟೊಗಳನ್ನು ಪತ್ತೆ ಮಾಡುತ್ತೇವೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.