ADVERTISEMENT

ಮಾರಕಾಸ್ತ್ರಗಳಿಂದ ಕೊಚ್ಚಿ ಚಿನ್ನದ ವ್ಯಾಪಾರಿ ಕೊಲೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಭೇಟಿ; ಕೊಲೆಗೆ ಕಾರಣ ಇನ್ನೂ ನಿಗೂಢ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:39 IST
Last Updated 12 ಜನವರಿ 2022, 5:39 IST
ಮಂಜುನಾಥ
ಮಂಜುನಾಥ   

ವಾಡಿ: ಸಮೀಪದ ರಾವೂರ– ಚಿತ್ತಾಪುರ ಮಾರ್ಗ ಮಧ್ಯೆ ಯರಗಲ್ ಕ್ರಾಸ್ ಬಳಿ ಸೋಮವಾರ ರಾತ್ರಿ ಚಿನ್ನದ ಅಂಗಡಿಯ ಮಾಲೀಕರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಕಲಬುರಗಿಯ ಗಾಜಿಪುರದ ನಿವಾಸಿ ಮಂಜುನಾಥ ಶಾಂತಪ್ಪ ತೆಗನೂರು (40) ಕೊಲೆಯಾದವರು. ಹಲವು ವರ್ಷಗಳಿಂದ ನಗರದಲ್ಲಿ ಅವರು ಚಿನ್ನದ ಅಂಗಡಿ ಇಟ್ಟುಕೊಂಡಿದ್ದರು. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ದುಷ್ಕರ್ಮಿಗಳು ವ್ಯಕ್ತಿಯ ತಲೆಗೆ ಮಾರಕಾಸ್ತ್ರಗಳಿಂದ ಪದೇಪದೇ ಕೊಚ್ಚಿದ್ದಾರೆ. ನಂತರ ತಲೆ ಮತ್ತು ಮುಖದ ಮೇಲೆ ಕಲ್ಲು ಹಾಕಿ ಶವ ಗುರುತು ಸಿಗದ ರೀತಿ
ಮಾಡಿದ್ದಾರೆ.

ADVERTISEMENT

ಚಿತ್ತಾಪುರ ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಡಾ.ಪ್ರಶಾಂತ್ ಸರಕಾರ ಎನ್ನುವ ವೈದ್ಯರ
ಹತ್ತಿರ ಕಳೆದ ನವೆಂಬರ್ 2ರಂದು ಚಿಕಿತ್ಸೆ ಪಡೆದ ಚೀಟಿ ಅವರ ಜೇಬಿನಲ್ಲಿತ್ತು. ಇದರ ಆಧಾರದ ಮೇಲೆ ಪೊಲೀಸರು ಶವ ಗುರುತಿಸಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬದವರು ಶವದ ಗುರುತು ಹಿಡಿದಿದ್ದಾರೆ.

‘ಅರ್ಧ ಗಂಟೆಯಲ್ಲಿ ಮನೆಗೆ ಬರುತ್ತೇನೆ ಎಂದು ಹೇಳಿದ್ದ. ರಾತ್ರಿ ಕಳೆದು ಬೆಳಗಾದರೂ ಮನೆಗೆ ಬರಲಿಲ್ಲ. ನನ್ನ ಮಗ ಈ ರೀತಿ ಶವವಾಗಿ ಬಿದ್ದಿರುತ್ತಾನೆ ಎಂದು ಅಂದುಕೊಂಡಿರಲಿಲ್ಲ. ನನ್ನ ಮಗನಿಗೆ ಯಾವ ಶತ್ರುಗಳೂ ಇರಲಿಲ್ಲ. ಕೊಲೆಗೆ ಕಾರಣರಾದ ಆರೋಪಿಗಳನ್ನು ಪತ್ತೆಹಚ್ಚಿ ಮಗನ ಸಾವಿಗೆ ನ್ಯಾಯ ಕೊಡಬೇಕು’ ಎಂದು ಮಂಜುನಾಥ ಅವರ ತಂದೆ ಶಾಂತಪ್ಪ ತೆಗನೂರು ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್, ಡಿವೈಎಸ್ಪಿ ಉಮೇಶ ಚಿಕ್ಕಮಠ, ಸಿಪಿಐ ಕೃಷ್ಣಪ್ಪ ಕಲ್ಲದೇವರು, ವಾಡಿ ಪಿಎಸ್ಐ ವಿಜಯಕುಮಾರ ಭಾವಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಡಿ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.