ADVERTISEMENT

ಕಲಬುರಗಿ: ಕೊಲೆ ಶಂಕೆ; ಶವ ಹೊರತೆಗೆದು ಪಂಚನಾಮೆ

ಎರಡು ತಿಂಗಳ ಬಳಿಕ ಗ್ರಾಮಸ್ಥರಿಂದಲೇ ಹೊರಬಿದ್ದ ಪ್ರಕರಣ, ಪತ್ನಿ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 8:00 IST
Last Updated 23 ಅಕ್ಟೋಬರ್ 2021, 8:00 IST
ಸೇಡಂ ತಾಲ್ಲೂಕಿನ ಇರನ್‌ಪಲ್ಲಿ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಕೊಲೆಯಾಗಿದ್ದಾರೆ ಎನ್ನಲಾದ ರಾಜಪ್ಪ (38) ಎನ್ನುವವರ ಶವ ಹೊರತೆಗೆಯುವ ಮುನ್ನ ಉಪವಿಭಾಗಾಧಿಕಾರಿ ಬಿ.ಅಶ್ವಿಜಾ ಪರಿಶೀಲಿಸಿದರು
ಸೇಡಂ ತಾಲ್ಲೂಕಿನ ಇರನ್‌ಪಲ್ಲಿ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಕೊಲೆಯಾಗಿದ್ದಾರೆ ಎನ್ನಲಾದ ರಾಜಪ್ಪ (38) ಎನ್ನುವವರ ಶವ ಹೊರತೆಗೆಯುವ ಮುನ್ನ ಉಪವಿಭಾಗಾಧಿಕಾರಿ ಬಿ.ಅಶ್ವಿಜಾ ಪರಿಶೀಲಿಸಿದರು   

ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಇರನ್‌ಪಲ್ಲಿ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಕೊಲೆಯಾಗಿದ್ದಾರೆ ಎನ್ನಲಾದ ರಾಜಪ್ಪ (38) ಎಂಬುವರ ಶವವನ್ನು ಶುಕ್ರವಾರ ಹೊರತೆಗೆದು ಮರು ಪಂಚನಾಮೆ ಮಾಡಲಾಯಿತು.

ಉಪವಿಭಾಗಾಧಿಕಾರಿ ಬಿ.ಅಶ್ವಿಜಾ ಅವರ ನೇತೃತ್ವದಲ್ಲಿ ಸಿಪಿಐ ರಾಜಶೇಖರ ಹಳಗೋದಿ, ಚಿಂಚೋಳಿ ಡಿವೈಎಸ್‌ಪಿ ಬಸವೇಶ್ವರ ಹೀರಾ, ಎಎಸ್‌ಐ ದೇವಿಂದ್ರಪ್ಪ, ಉಪತಹಶೀಲ್ದಾರ್‌ ಅರುಣಕುಮಾರ್‌ ಮುಂದಾಳತ್ವದಲ್ಲಿ ಶವವನ್ನು ಹೊರತೆಗೆದು ಮಹಜರು ಮಾಡಿ ಮತ್ತೆ ಹೂಳಲಾಯಿತು.

‘ಕೊಲೆ ಆರೋಪಿಗಳಾದ ರಾಜಪ್ಪ ಅವರ ಪತ್ನಿ ಅನಸೂಯಾ, ಆಕೆಯ ಪ್ರಿಯಕರ ಶ್ರೀಶೈಲಂನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಅಶೋಕ್‌ ಕುರುವಾ ತಲೆಮರೆಸಿಕೊಂಡಿದ್ದಾನೆ. ಈ ಮೂವರೂ ಸೇರಿ ರಾಜಪ್ಪ ಅವರ ಕೊಲೆ ಮಾಡಿದ್ದಾರೆ ಎಂಬ ಶಂಕೆ ಕಾರಣ ಮರು ಮಹಜರು ನಡೆಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಘಟನೆ ವಿವರ: ಇರನ್‌ಪಲ್ಲಿ ನಿವಾಸಿ ರಾಜಪ್ಪ ಎರಡು ತಿಂಗಳ ಹಿಂದೆ ಮೃತಪಟ್ಟರು. ಸೇಂದಿ ಕುಡಿದಿದ್ದ ಅವರು ಕುಡಿದ ಮತ್ತಿನಲ್ಲೇ ಪ್ರಾಣ ಬಿಟ್ಟಿದ್ದಾಗಿ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.‌ ಆಗ ಅಸಹಜ ಸಾವು ಎಂದು ಪರಿಗಣಿಸಿ, ಶವಸಂಸ್ಕಾರವನ್ನೂ ನಡೆಸಲಾಗಿತ್ತು.

‘ಆದರೆ, ಎರಡು ತಿಂಗಳ ಒಳಗೆ ರಾಜಪ್ಪ ಅವರ ಪತ್ನಿ ಅನಸೂಯಾ ವರ್ತನೆಯಲ್ಲಿ ಬದಲಾವಣೆ ಕಂಡಿತು. ತೆಲಂಗಾಣ ರಾಜ್ಯದ ಕೊಡಂಗಲ ತಾಲ್ಲೂಕಿನ ಅಂತಾವರಂ ಗ್ರಾಮದ ನಿವಾಸಿ ಶ್ರೀಶೈಲಂ ಮಲ್ಲಪ್ಪ ಕುರುವಾ ಎಂಬಾತನೊಂದಿಗೆ ಆಕೆಯ ಸ್ನೇಹ ಬೆಳೆದಿತ್ತು. ಆರೋಪಿ ಶ್ರೀಶೈಲಂ ಅನಸೂಯಾಳ ಮನೆಯಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಿದ್ದ. ಇದರಿಂದ ರಾಜಪ್ಪನ ಸಂಬಂಧಿಕರು ಹಾಗೂ ಗ್ರಾಮಸ್ಥರಲ್ಲಿ ಅನುಮಾನ ಹುಟ್ಟಿತು. ಈಚೆಗೆ ಶ್ರೀಶೈಲಂಗೆ ಹಿಡಿದು ವಿಚಾರಿಸಿದ ಗ್ರಾಮಸ್ಥರು ಆತನ ಬಾಯಿ ಬಿಡಿಸಿ, ಠಾಣೆಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಅನಸೂಯಾ, ಆಕೆಯ ಪ್ರಿಯಕರ ಶ್ರೀಶೈಲಂ ಹಾಗೂ ಅಶೋಕ್‌ ಕುರುವಾ ಸೇರಿಕೊಂಡು ಸೇಂದಿಯಲ್ಲಿ ವಿಷ ಬೆರೆಸಿ ರಾಜಪ್ಪನಿಗೆ ಕುಡಿಸಿದ್ದರು. ಬಳಿಕ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಆದರೆ, ಆತ ಕುಡಿದ ಅಮಲಿನಲ್ಲಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸುವ ಸಲುವಾಗಿ ಮೃತದೇಹವನ್ನು ಮನೆಯ ಮುಂಭಾಗದಲ್ಲಿ ಇಟ್ಟುಹೋಗಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

*

ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

ಕಲಬುರಗಿ: ಅಫಜಲಪುರ ತಾಲ್ಲೂಕಿನ ತೆಲ್ಲೂರ ಗ್ರಾಮದಲ್ಲಿ ಶುಕ್ರವಾರ ಹಾವು ಕಚ್ಚಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

‘11 ವರ್ಷದ ಜ್ಯೋತಿ ಬೀರಪ್ಪ ಮಾಯಗೊಂಡ ಮೃತ ಬಾಲಕಿ. 5ನೇ ತರಗತಿಯಲ್ಲಿ ಓದುತ್ತಿದ್ದ ಈಕೆ, ಶುಕ್ರವಾರ ಪೋಷಕರೊಂದಿಗೆ ಹೊಲಕ್ಕೆ ಹೋದಾಗ ಹಾವು ಕಚ್ಚಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಕೆ ಕೊನೆಯುಸಿರೆಳೆದಳು ಎಂದು ದೇವಲಗಾಣಗಾಪುರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.