ADVERTISEMENT

ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ಅ.13 ರಂದು

ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆ, ಭಕ್ತರಿಗೆ ಸೌಲಭ್ಯ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 10:53 IST
Last Updated 10 ಅಕ್ಟೋಬರ್ 2019, 10:53 IST
ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನವನ್ನು ಜಾತ್ರೆ ಪ್ರಯುಕ್ತ ಅಲಂಕರಿಸಲಾಗಿದೆ
ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನವನ್ನು ಜಾತ್ರೆ ಪ್ರಯುಕ್ತ ಅಲಂಕರಿಸಲಾಗಿದೆ   

ಚಿತ್ತಾಪುರ: ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿ ಯಲ್ಲಮ್ಮ ದೇವಿಯ ಜಾತ್ರೆ, ಪಲ್ಲಕ್ಕಿ ಉತ್ಸವ ಶೀಗಿ ಹುಣ್ಣಿಮೆ ದಿನ ಅ.13 ರಂದು ಜರುಗಲಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ ಭರದ ಸಿದ್ಧತೆ ನಡೆಯುತ್ತಿದೆ.

ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ಅಂದು ಮಧ್ಯಾಹ್ನ 2 ಗಂಟೆಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹಾಗೂ ಪಟ್ಟಣದ ಮುಖಂಡರ ಉಪಸ್ಥಿತಿಯಲ್ಲಿ ವಿಘ್ನೇಶ್ವರ ಪೂಜೆ, ಶ್ರೀಗುರು ಪೂಜೆ, ದೇವಿಯ ಪೂಜೆ, ಪಲಕ್ಕಿ ಪೂಜೆ ನೆರವೇರಿಸಿ ಪಲ್ಲಕ್ಕಿ ಹೊತ್ತುಕೊಂಡು ಹೆಜ್ಜೆ ಹಾಕುವ ಮೂಲಕ ಜಾತ್ರೆ ಮತ್ತು ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡುವರು.

ಮೆರವಣಿಗೆಯು ಪಟ್ಟಣದ ಮುಖ್ಯ ಬೀದಿಗಳಾದ ಚಿತಾವಲಿ ಚೌಕ್, ಜನತಾ ಚೌಕ್, ನಾಗಾವಿ ಚೌಕ್, ಒಂಟಿ ಕಮಾನ್ ಹಾಗೂ ದಿಗ್ಗಾಂವ್ ಕ್ರಾಸ್ ಮೂಲಕ ದೇವಸ್ಥಾನದವರೆಗೆ ಸಂಜೆ 7 ಗಂಟೆಯವರೆಗೂ ನಡೆಯುವುದು.

ADVERTISEMENT

ಜಾತ್ರೆಗೆ ರಾಜ್ಯದ ವಿಜಯಪುರ, ಜಮಖಂಡಿ, ಸಿಂಧಗಿ, ಬಾಗಲಕೋಟೆ, ಹುಬ್ಬಳಿ, ಧಾರವಾಡ, ಯಾದಗಿರಿ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ, ಮುಂಬೈ, ಅಕ್ಕಲಕೋಟ, ತೆಲಂಗಾಣದ ತಾಂಡೂರ, ಕೊಡಂಗಲ್, ಜಹೀರಾಬಾದ್, ವಿಕಾರಾಬಾದ್ ಮುಂತಾದೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಭರದ ಸಿದ್ಧತೆ: ದೇವಸ್ಥಾನದ ಆಡಳಿತ ಮಂಡಳಿಯಿಂದ ಜಾತ್ರೆಗೆ ಅಗತ್ಯ ಸಿದ್ಧತೆ ಭರದಿಂದ ನಡೆಯುತ್ತಿದೆ. ಉಮಾಕಾಂತ ಹಳ್ಳೆ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ದಶರಥ ಮಂತಟ್ಟಿ ಅವರು ದೇವಸ್ಥಾನದಲ್ಲಿ ಬೀಡು ಬಿಟ್ಟು ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ವಾಹನಗಳ ನಿಲುಗಡೆಗೆ ಅಗತ್ಯ ಸ್ಥಳದ ಅನುಕೂಲ ಮಾಡಿಕೊಡುವ ಕೆಲಸ ನಡೆಯುತ್ತಿದೆ.

ಈಗಾಗಲೇ ದೇವಸ್ಥಾನಕ್ಕೆ ಸುಣ್ಣ ಬಣ್ಣ ಹಚ್ಚಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗರ್ಭಗುಡಿಯ ಸುತ್ತ ಜನರು ಕಸಕಡ್ಡಿ ಬಿಸಾಡದಂತೆ ಅನೇಕ ಕಡೆ ಪ್ಲಾಸ್ಟಿಕ್ ಬುಟ್ಟಿಗಳನ್ನು ಇಡಲಾಗಿದೆ.

ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಪರಿಸರದಲ್ಲಿ ಬೆಳೆದ ಮುಳ್ಳಿನ ಗಿಡಗಂಟಿಗಳನ್ನು ತೆರವುಗಳಿಸಲಾಗಿದೆ. ಭಕ್ತರು ಅಡುಗೆ ಮಾಡುವ ಸ್ಥಳದ ಸ್ವಚ್ಛತೆ ಗಮನ ಸೆಳೆಯುತ್ತಿದೆ. ಮಹಿಳೆಯರ ಶೌಚಾಲಯದ ಸುತ್ತ ಹಾಗೂ 60 ಕಂಬದ ದೇಗುಲದ ಮಾರ್ಗವಾಗಿ ನಂದಿ ಬಾವಿಗೆ ಹೋಗುವ ರಸ್ತೆ ಪಕ್ಕ ಜಾಲಿಕಂಟಿಗಳನ್ನು ಕಡಿಸಲಾಗಿದೆ. ಭಕ್ತರ ವಾಹನಗಳ ನಿಲುಗಡೆಗೆ ನೂತನ ಬಸ್ ನಿಲ್ದಾಣ ಪಕ್ಕದ ಖುಲ್ಲಾ ಸ್ಥಳವನ್ನು ಸ್ವಚ್ಛಗೊಳಿಸಿ ಅನುಕೂಲ ಮಾಡಿಕೊಡಲಾಗಿದೆ.

ದರ್ಶನಕ್ಕೆ ಸೂಕ್ತ ವ್ಯವಸ್ಥೆ: ‘ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರಿಗೆ ಕುಡಿಯುವ ನೀರು, ವಿದ್ಯುತ್ ಬೆಳಕಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಗದ್ದಲ, ಗಲಾಟೆ ಉಂಟಾಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು’ ಎಂದು ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.