ADVERTISEMENT

ನಾಗೂರನಿಂದ ದೆಹಲಿಗೆ ಪಾದಯಾತ್ರೆ: ಮೋದಿ ಭೇಟಿಗೆ ತೆರಳುತ್ತಿರುವ ಗುರುಸಿದ್ಧಪ್ಪ

ಹಳ್ಳಿಗಳ ಸಮಸ್ಯೆ ಮನವರಿಕೆ ಉದ್ದೇಶ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 6:55 IST
Last Updated 10 ಸೆಪ್ಟೆಂಬರ್ 2025, 6:55 IST
ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದಿಂದ ದೇಹಲಿಗೆ ಪಾದಯಾತ್ರೆ ಆರಂಭಿಸಿದ ಗುರುಸಿದ್ಧಪ್ಪ ಡಬರಬಾದಿ ಅವರು ಮಹಾಗಾಂವ ಕ್ರಾಸ ತಲುಪುತಿದ್ದಂತೆ ಮುಖಂಡರಾದ ಶ್ರೀಕಾಂತ ಪಾಟೀಲ, ಗಿರೀಶ ಪಾಟೀಲ ಮತ್ತಿತರರು ಸನ್ಮಾನಿಸಿ ಬೀಳಕೊಟ್ಟರು
ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದಿಂದ ದೇಹಲಿಗೆ ಪಾದಯಾತ್ರೆ ಆರಂಭಿಸಿದ ಗುರುಸಿದ್ಧಪ್ಪ ಡಬರಬಾದಿ ಅವರು ಮಹಾಗಾಂವ ಕ್ರಾಸ ತಲುಪುತಿದ್ದಂತೆ ಮುಖಂಡರಾದ ಶ್ರೀಕಾಂತ ಪಾಟೀಲ, ಗಿರೀಶ ಪಾಟೀಲ ಮತ್ತಿತರರು ಸನ್ಮಾನಿಸಿ ಬೀಳಕೊಟ್ಟರು   

ಕಮಲಾಪುರ: ಪ್ರಧಾನಿಯವರು ಕೇವಲ ವಿದೇಶ ಪ್ರಯಾಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು ಗ್ರಾಮಗಳ ಏಳಿಗೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಹಳ್ಳಿಗಳ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಸಲು ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದ ನಿವಾಸಿ, ಅಂಚೆ ಇಲಾಖೆ ನಿವೃತ್ತ ನೌಕರ ಗುರುಸಿದ್ಧಪ್ಪ ಡಬರಾಬಾದಿ 'ಹಳ್ಳಿಯಿಂದ ದಿಲ್ಲಿವರೆಗೆ ಪಾದಾಯಾತ್ರೆ' ಘೋಷವಾಕ್ಯದಡಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ದೇಹಲಿಗೆ ಪಾದಯಾತ್ರೆ ಆರಂಭಿಸಿದ್ದಾರೆ.

ನಾಗೂರ ಗ್ರಾಮದ ಹಾಲಬಸವೇಶ್ವರ ದೇವಸ್ಥಾನದಿಂದ ಮಂಗಳವಾರ ಪಾದಯಾತ್ರೆ ಆರಂಭಿಸಿದ್ದಾರೆ. ಮಹಾಗಾಂವ ಕ್ರಾಸ್ ತಲುಪಿದ ಅವರನ್ನು, ಬಿಜೆಪಿ ಮುಖಂಡರಾದ ಶ್ರೀಕಾಂತ ಪಾಟೀಲ, ಗಿರೀಶ ಪಾಟೀಲ, ಪ್ರಭುಲಿಂಗ ಡಿಗ್ಗಾಂವ, ನಿರಂಜನ ಸ್ವಾಮಿ, ಸಂಗಮೇಶ, ತುಳಜಪ್ಪ, ಗುರುಲಿಂಗಪ್ಪ ಮತ್ತಿತರರು ಸನ್ಮಾನಿಸಿ ಶುಭ ಹಾರೈಸಿದರು.

'ಮಹಾತ್ಮ ಗಾಂಧೀಜಿಯವರು ಗ್ರಾಮಗಳ ಅಭಿವೃದ್ಧಿಗೆ ಒತ್ತುಕೊಟ್ಟಿದ್ದರು. ದೇಶದ ಅಭಿವೃದ್ಧಿಗಾಗಿ 'ಆದರ್ಶ ಗ್ರಾಮ' ಪರಿಕಲ್ಪನೆ ಕೊಟ್ಟಿದ್ದರು. ಆದರೆ ನರೇಂದ್ರ ಮೋದಿಯವರು ಸಹ ಈ ಕಡೆ ಗಮನ ಹರಿಸುವ ಅವಶ್ಯಕತೆ ಇದೆ. ಹಳ್ಳಿಗಳಲ್ಲಿ ಶೌಚಾಲವಿಲ್ಲ, ಶುದ್ಧ ಕುಡಿಯುವ ನೀರಿಲ್ಲ. ಸಂಪರ್ಕ ರಸ್ತೆಗಳಿಲ್ಲ. ಜನರಿಗೆ ಸೂಕ್ತ ಆರೋಗ್ಯ ಸೇವೆ ಸಿಗುತ್ತಿಲ್ಲ, ಸರ್ಕಾರಿ ಶಾಲೆಗಳು ಅವಸಾನದ ಅಂಚಿನಲ್ಲಿವೆ. ದೆಹಲಿಯಲ್ಲಿ ಕುಳಿತು ರೂಪಿಸಿದ ಸ್ವಚ್ಚ ಭಾರತ ಯೋಜನೆ, ಜಲಜೀವನ ಮಿಷನ್ ಯೋಜನೆಗಳು ಗ್ರಾಮ ಪಂಚಾಯಿತಿಗಳ ಭ್ರಷ್ಟಾಚಾರದಿಂದಾಗಿ ಸಂಪೂರ್ಣ ವಿಫಲವಾಗಿವೆ. ನೇಪಥ್ಯಕ್ಕೆ ಶೌಚಾಲಯಗಳನ್ನು ನಿರ್ಮಿಸಿ ಅನುದಾನ ನುಂಗಿಹಾಕಿದ್ದಾರೆ. ಎಂಜಿನಿಯರ ಹಾಗೂ ಗ್ರಾಮ ಪಂಚಾಯಿತಿ ಭ್ರಷ್ಟಾಚಾರದಿಂದ ಜಲಜೀವನ ಮಿಷನ್ ಹಳ್ಳ ಹಿಡಿದಿದೆ. ಇದೆಲ್ಲವನ್ನೂ ಪ್ರಧಾನಿ ಮೋದಿಯವರಿಗೆ ಮನವರಿಕೆ ಮಾಡಿಸಲಾಗುವುದು’ ಎಂದು ಹೇಳಿದರು.

ADVERTISEMENT

ಗ್ರಾಮಗಳ ಉದ್ಧಾರಕ್ಕೆ ಮೂಲ ಸೌಕರ್ಯ ಒದಗಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳು ಸಾಕಾರಗೊಳಸಲು ಅನುದಾನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಭ್ರಷ್ಟಾಚಾರ ಅಥವಾ ಸರ್ಕಾರದ ಯೋಜನೆ ವಿಫಲವಾದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನು ರೂಪಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು.

ಪಾದಯಾತ್ರೆಗೆ ಜಿಲ್ಲಾಧಿಕಾರಿಯಿಂದ ಪರವಾನಗಿ ಪಡೆದಿದ್ದೇನೆ.

ಶಾಸಕ ಬಸವರಾಜ ಮತ್ತಿಮಡು ಪಾದಯಾತ್ರೆಗೆ ನೆರವು ನೀಡುತ್ತಿದ್ದಾರೆ. ನನ್ನ ಜೊತೆಗೆ ಒಂದು ಆಟೊ ಕೊಂಡುಯ್ಯತ್ತಿದ್ದೇನೆ. ಅಟೊ ಚಾಲಕ ಹಾಗೂ ಒಬ್ಬ ಸಹಾಯಕ ನನ್ನ ಜೊತೆಗಿರಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.