ADVERTISEMENT

ನಲಿ–ಕಲಿ ಅನುಷ್ಠಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸ್ತಾವ

₹7 ಕೋಟಿ ಅನುದಾನಕ್ಕೆ ಒತ್ತಾಯ

ಗಣೇಶ ಚಂದನಶಿವ
Published 13 ಡಿಸೆಂಬರ್ 2018, 15:30 IST
Last Updated 13 ಡಿಸೆಂಬರ್ 2018, 15:30 IST
ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ನ ಆಸೀಫ್‌ಗಂಜ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿ–ಕಲಿ ಪಾಠ ಹೇಳುತ್ತಿರುವ ಶಿಕ್ಷಕಿ ವೈಜಯಂತಿ. ಮುಖ್ಯಶಿಕ್ಷಕಿ ನೀಲಮ್ಮ ಇದ್ದರುಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.
ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ನ ಆಸೀಫ್‌ಗಂಜ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿ–ಕಲಿ ಪಾಠ ಹೇಳುತ್ತಿರುವ ಶಿಕ್ಷಕಿ ವೈಜಯಂತಿ. ಮುಖ್ಯಶಿಕ್ಷಕಿ ನೀಲಮ್ಮ ಇದ್ದರುಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ: ಮಕ್ಕಳು ನಲಿಯುತ್ತ ಕಲಿಯಲಿ ಎಂಬ ಕಾರಣಕ್ಕೆ ಸರ್ಕಾರ ಜಾರಿಗೊಳಿಸಿರುವ ‘ನಲಿ–ಕಲಿ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಚ್‌ಕೆಆರ್‌ಡಿಬಿ) ಸಹಯೋಗ ಕೋರಿದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಮೂರನೇ ತರಗತಿಯಲ್ಲಿ ‘ನಲಿ–ಕಲಿ’ ಜಾರಿಯಲ್ಲಿದೆ. ಸರ್ಕಾರ ಇದಕ್ಕೆ ನಿರ್ದಿಷ್ಟ ಪಠ್ಯಪುಸ್ತಕ ಹೊರತಂದಿಲ್ಲ. ಇದು ಚಟುವಟಿಕೆ ಆಧಾರಿತ ಬೋಧನೆ ಮತ್ತು ಕಲಿಕಾ ಪದ್ಧತಿ.

ಶಿಕ್ಷಕರು ತಾವೇ ಪಠ್ಯಕ್ರಮ ರಚಿಸಿಕೊಳ್ಳುತ್ತಾರೆ. ಚಟುವಟಿಕೆಗಳ ಮೂಲಕ ಮಕ್ಕಳು ಆಡುತ್ತಾ ಹಾಡುತ್ತಾ ಕಲಿಯುತ್ತಾರೆ. ಮಕ್ಕಳು ಶಿಕ್ಷಕರ ನೆರವು, ಸಹಪಾಠಿಗಳ ಸಹಾಯದಿಂದ ಮತ್ತು ಸ್ವ ಅಧ್ಯಯನದಿಂದ ಕಲಿಯುವುದು ಇದರ ಮೂಲಧ್ಯೇಯ.

ADVERTISEMENT

1995ರಲ್ಲಿ ರಾಜ್ಯ ಸರ್ಕಾರವು ಈ ಪ್ರಯೋಗವನ್ನು ಚಾಮರಾಜನಗರ ಜಿಲ್ಲೆಯ ಹೆಗ್ಗಡದೇವನ ಕೋಟೆಯಲ್ಲಿ ಅಳವಡಿಸಿಕೊಂಡಿತು. 2008ರಿಂದ ರಾಜ್ಯದಾದ್ಯಂತ ಜಾರಿಗೊಳಿಸಿತು.

ಗುಣಮಟ್ಟ ಖಾತ್ರಿಯ ಭಾಗವಾಗಿ ಪ್ರಸಕ್ತ ವರ್ಷದ ಮಾರ್ಚ್‌ ತಿಂಗಳಲ್ಲಿ ರಾಜ್ಯ ಸರ್ಕಾರ ಈ ಯೋಜನೆಯ ಸಾಫಲ್ಯ ಮತ್ತು ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದೆ. ರಾಜ್ಯದ 43,418 ಶಾಲೆಗಳ 53,221 ಘಟಕಗಳಲ್ಲಿ ಅಧ್ಯಯನ ನಡೆದಿದ್ದು, ಸಾಧನೆ–ಸಮಸ್ಯೆಗಳನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಲಿ–ಕಲಿ ಮೂಲ ಅಂಶಗಳಾದ ಒಂದರಿಂದ ಮೂರನೇ ತರಗತಿಯುಳ್ಳ ಸಂಯೋಜಿತ ನಲಿಕಲಿ ಘಟಕದ ಶಿಕ್ಷಕರು ಮತ್ತು ಮಕ್ಕಳ ಅನುಪಾತ 1:30 ಇರಬೇಕು. ತರಬೇತಿ ಪಡೆದ ಶಿಕ್ಷಕರು ಹಾಗೂ ಕಲಿಕಾ ಸಾಮಗ್ರಿಗಳ ಲಭ್ಯತೆ ಮೇಲೆಯೂ ವರದಿ ಬೆಳಕು ಚೆಲ್ಲಿದೆ. ಶೇ 50ರಷ್ಟು ನಲಿಕಲಿ ಘಟಕಗಳಲ್ಲಿ ಶಿಕ್ಷಕರ ಕೊರತೆ ಇದೆ ಎಂದು ವರದಿ ಹೇಳಿದೆ. ರಾಜ್ಯದ ಇತರೆ ನಾಲ್ಕು ಕಂದಾಯ ವಿಭಾಗಗಳಿಗೆ ಹೋಲಿಸಿದರೆ ಕಲಬುರ್ಗಿ ವಿಭಾಗದಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚು ಇದೆ. ಕೊಠಡಿಗಳ ಕೊರತೆ ಈ ಭಾಗದ ಇನ್ನೊಂದು ಸಮಸ್ಯೆ ಎಂಬುದು ವರದಿಯ ಸಾರ.

ಇಲಾಖೆಯಿಂದ ಒದಗಿಸುವ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಒದಗಿಸಲು ಹಾಗೂ ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಅತಿಥಿ ಶಿಕ್ಷಕರೇ ನಲಿಕಲಿ ತರಗತಿ ನಿರ್ವಹಿಸುತ್ತಿದ್ದರೆ ಅವರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಚ್‌ಕೆಆರ್‌ಡಿಬಿ ಅನುದಾನ ಕೋರಲಾಗಿದೆ.

‘ರಾಜ್ಯದ ಇತರೆಡೆಗಿಂತ ಕಲಬುರ್ಗಿ ವಿಭಾಗದಲ್ಲಿ ಬೋಧನಾ ಸಾಮಗ್ರಿಗಳ ಕೊರತೆಯೂ ಹೆಚ್ಚಾಗಿದೆ. ನಲಿಕಲಿ ಘಟಕಗಳಿಗೆ ಹಲಗೆ (ವಾಲ್‌ಸ್ಲೇಟ್‌), ಕೊಠಡಿ ಸಜ್ಜುಗೊಳಿಸುವುದು, ಸಾಮಗ್ರಿಗಳ ಜೋಡಣೆ, ಉಪಕರಣ ಪೂರೈಸುವುದು. 658 ಮುಖ್ಯ ಶಿಕ್ಷಕರಿಗೆ ತರಬೇತಿ ಹಾಗೂ ನಲಿಕಲಿ ಶಿಕ್ಷಕರಿಗೆ ತಿಂಗಳ ಸಮಾಲೋಚನಾ ಸಭೆ ನಡೆಸಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಈ ಉದ್ದೇಶಕ್ಕೆ ಒಟ್ಟಾರೆ ₹7.08 ಕೋಟಿ ಅನುದಾನ ಕೋರಿ ನಮಗೆ ಪ್ರಸ್ತಾವ ಸಲ್ಲಿಸಿದೆ’ ಎನ್ನುವುದು ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಶೈಕ್ಷಣಿಕ ಸಲಹೆಗಾರ ಎನ್‌.ಬಿ. ಪಾಟೀಲ ಅವರ ವಿವರಣೆ.

ಅಚ್ಚುಮೆಚ್ಚು

ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ನ ಆಸೀಫ್‌ಗಂಜ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಮಕ್ಕಳು ಉತ್ಸಾಹದಿಂದ ನಲಿಕಲಿ ತರಗತಿಯಲ್ಲಿ ಪಾಲ್ಗೊಂಡಿದ್ದರು.

ಈ ಶಾಲೆಯಲ್ಲಿ 1ರಿಂದ 3ನೇ ತರಗತಿಯಲ್ಲಿ 26 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆಲ್ಲ ಒಬ್ಬ ಶಿಕ್ಷಕಿ ನಲಿಕಲಿ ಪಾಠ ಹೇಳಿಕೊಡುತ್ತಿದ್ದಾರೆ.

‘ಬರೀ ಓದು ಅಷ್ಟೇ ಅಲ್ಲ, ಪ್ರತಿ ಅಕ್ಷರವನ್ನು ಗುರುತಿಸುವಂತೆ ನಮಗೆ ಕಲಿಸಲಾಗುತ್ತದೆ. ನಾವು ಒಂದೆರಡು ದಿನ ಶಾಲೆ ಬಿಟ್ಟಿದ್ದರೆ, ಆ ದಿನಗಳ ಪಾಠವನ್ನೂಕಲಿಸುತ್ತಾರೆ. ಹೀಗಾಗಿ ಇದು ನಮಗೆ ಅಚ್ಚುಮೆಚ್ಚು’ ಎಂದು ವಿದ್ಯಾರ್ಥಿಗಳಾದ ಭರತ್‌, ವರ್ಷಿಣಿ, ಅಕ್ಷತಾ ಹೇಳಿದರು.

ಅಂಕಿ–ಅಂಶ

ಕಲಬುರ್ಗಿ ವಿಭಾಗದಲ್ಲಿ ‘ನಲಿ–ಕಲಿ’
*10,191 ನಲಿಕಲಿ ಘಟಕಗಳು
*4.14 ಲಕ್ಷ 1–3 ತರಗತಿಗಳಲ್ಲಿಯ ಮಕ್ಕಳು

ಅನುದಾನ ಬೇಡಿಕೆ

₹58.62 ಲಕ್ಷ ಶಿಕ್ಷಕರಿಗೆ ತರಬೇತಿ, ಸಾಮರ್ಥ್ಯ ವೃದ್ಧಿಗೆ
₹1.52 ಕೋಟಿ ನಲಿಕಲಿ ಘಟಕಗಳಿಗೆ ಉಪಕರಣ ಪೂರೈಸಲು
₹4.97 ಕೋಟಿ ಮಕ್ಕಳಿಗೆ ನೋಟ್‌ಬುಕ್‌ ವಿತರಿಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.