
ವಾಡಿ: ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠವು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಅಭಿವೃದ್ಧಿಗೆ ತನ್ನದೇ ಆದ ಮಹೋನ್ನತ ಕೊಡುಗೆ ನೀಡುತ್ತಾ ಬರುತ್ತಿದೆ. ಮಠದ ಆವರಣದಲ್ಲಿ ವರ್ಷದಲ್ಲಿ ಮೂರು ಬಾರಿ ನಡೆಯುವ ಜ್ಯೋತಿ ಉತ್ಸವ ದೀಪ ಮೇಳವೆಂದೇ ಖ್ಯಾತಿ ಪಡೆದಿದೆ.
ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅನನ್ಯ ಸೇವೆ ಸಲ್ಲಿಸುತ್ತಾ ಬರುತ್ತಿರುವ ಮಠಕ್ಕೆ ಸಿದ್ದತೋಟೇಂದ್ರ ಶಿವಾಚಾರ್ಯರು ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಶ ನೀಡುತ್ತಿದ್ದಾರೆ. ಮಠವೆಂದರೆ ಕೇವಲ ಕಟ್ಟಡವಲ್ಲ. ಅದೊಂದು ಜೀವಸೆಲೆ ಎನ್ನುವುದನ್ನು ತಮ್ಮ ಕಾರ್ಯಶೈಲಿ ಮೂಲಕ ಸಾಕ್ಷಾತ್ಕಾರ ಮಾಡಿಸುತ್ತಿದ್ದಾರೆ.
ಅನ್ನ, ಅರಿವು ಮತ್ತು ಆಶ್ರಯದ ಮೂಲಕ ತ್ರಿವಿಧ ದಾಸೋಹ ಪರಂಪರೆಯನ್ನು ಅಚ್ಚುಕಟ್ಟಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಮನೆ ಮಾತಾಗಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯದ ತವರೂರು ಎಂಬ ಖ್ಯಾತಿ ಪಡೆದುಕೊಂಡಿದೆ.
300 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಮಠವನ್ನು ಪ್ರಸ್ತುತ ಪೀಠಾಧಿಪತಿ ಸಿದ್ದ ತೋಟೇಂದ್ರ ಶಿವಾಚಾರ್ಯರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಜಾತ್ರೆಯನ್ನು ಜನೋತ್ಸವವಾಗಿ ರೂಪುಗೊಳಿಸುತ್ತಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎನ್ನುತ್ತಾರೆ ವಕ್ತಾರ ಮಹಾದೇವ ಗಂವ್ವಾರ
ಕಲೆ, ಸಾಹಿತ್ಯ, ವಿಜ್ಞಾನ, ಸಿನಿಮಾರಂಗ, ಧರ್ಮ, ಕ್ರೀಡಾಲೋಕ, ಬಾಹ್ಯಕಾಶ, ರಾಜಕೀಯ ರಂಗ ಹೀಗೆ ಸಮಾಜದ ಪ್ರತಿ ಕ್ಷೇತ್ರದ ಮಹಾನೀಯ ವ್ಯಕ್ತಿಗಳನ್ನು ತಮ್ಮ ಮಠದ ಆವರಣದಲ್ಲಿ ಜರುಗುವ ಪ್ರತಿ ಕಾರ್ಯಕ್ರಮಕ್ಕೂ ಆಹ್ವಾನಿಸುತ್ತಿರುವುದು ಹೆಮ್ಮೆಯಾಗಿದೆ ಎನ್ನುತ್ತಾರೆ ಭಕ್ತ ಆನಂದಗೌಡ ಸಂಕನೂರು ಮತ್ತು ಸಾಹೇಬರೆಡ್ಡಿ ಬಂಗಾರಿ.
ಜಾತ್ರೆಗೆ ಹನ್ನೊಂದು ದಿನಗಳ ಮುಂಚಿತವಾಗಿ ಮಠದಲ್ಲಿ ಪುರಾಣ–ಪ್ರವಚನ–ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಬೃಹತ್ ಜಾನುವಾರುಗಳ ಜಾತ್ರೆ, ಗ್ರಾಮೀಣ ಕ್ರೀಡೆಗಳಾದ ಕೈಕುಸ್ತಿ ಹಾಗೂ ಜಾನಪದ ಪಂದ್ಯಾಟಗಳು ನಡೆದು ರಥೋತ್ಸವದ ಐದು ದಿನಗಳ ನಂತರ ನಡೆಯುವ ಕಳಸಾರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳುವುದು ವಾಡಿಕೆ.
ಜನಮಾನಸದಲ್ಲಿ ಆಧ್ಯಾತ್ಮಿಕ ಸಂಸ್ಕಾರ ಬಿತ್ತುತ್ತಿರುವ ಸಿದ್ದತೋಟೇಂದ್ರರು ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಭಕ್ತರ ಮನತಣಿಸುವ ಕಾರ್ಯ ಸಿದ್ದತೋಟೇಂದ್ರರು ಮಾಡುತ್ತಿರುವುದು ಈ ಭಾಗದ ಭಕ್ತರ ಪುಣ್ಯಕೋರಿಸಿದ್ದ ಎಸ್. ಗಂಜಿ ಹಣ್ಣಿಕೇರಾ
ಸರ್ವರನ್ನು ಸಮಾನರಾಗಿ ಕಾಣುತ್ತಾ ಜಾತಿ–ಧರ್ಮಗಳ ಎಲ್ಲೆ ಮೀರಿದ ಸಮೃದ್ಧಿಯ ತಾಣ ಕೋರಿಸಿದ್ದೇಶ್ವರ ಸಂಸ್ಥಾನ ಮಠವು ಈ ಭಾಗದ ಹೆಮ್ಮೆ. ಅನ್ನ ಅರಿವು ಅಕ್ಷರದ ತ್ರಿವಿಧ ದಾಸೋಹಕ್ಕೆ ನಾಲವಾರ ಮಠ ಹೆಸರುವಾಸಿಯಾಗಿದೆಗುರುಗೌಡ ಇಟಗಿ ನಾಲವಾರ
ರಥೋತ್ಸವ ಇಂದು
ಮಹಾತ್ಮ ಕೋರಿಸಿದ್ಧೇಶ್ವರ ಶಿವಯೋಗಿಗಳ ಜಾತ್ರಾ ಉತ್ಸವ ಪ್ರಯುಕ್ತ ರಥೋತ್ಸವ ಜ.19ರಂದು ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ರಾಜ್ಯ ಹಾಗೂ ಹೊರರಾಜ್ಯದ ಭಕ್ತರು ಭಾಗವಹಿಸಿ ರಥೋತ್ಸವದ ಮೆರಗು ಹೆಚ್ಚಿಸಲಿದ್ದಾರೆ. ಜ.18ರ ಮಧ್ಯರಾತ್ರಿ ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ಭಕ್ತರ ಹರಕೆಯ ‘ತನಾರತಿ’ ಮಹೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಅಸಂಖ್ಯಾತ ಭಕ್ತಗಣ ಭಾಗವಹಿಸಿ ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ಕೃತಜ್ಞತೆಯ ರೂಪದಲ್ಲಿ ಸಲ್ಲಿಸುವ ಹರಕೆಯಾಗಿದೆ. ಗೋದಿ ಹಿಟ್ಟಿನಿಂದ ತಯಾರಿಸಿದ ಜ್ಯೋತಿಗಳನ್ನು ಅಮಾವಾಸ್ಯೆಯ ಮಧ್ಯರಾತ್ರಿ ಸಿದ್ಧತೋಟೇಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ಮಠದ ಕರ್ತೃ ಗದ್ದುಗೆಯ ಸುತ್ತಲೂ ಪ್ರದಕ್ಷಿಣೆ ಹಾಕುವುದು ರೂಢಿಯಾಗಿದೆ.
ನಟ ಶ್ರೀನಾಥಗೆ ‘ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ’
ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯ ಸಾಧಕರಿಗೆ ಶ್ರೀಮಠದ ವತಿಯಿಂದ ಪ್ರತಿಷ್ಠಿತ ‘ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದ್ದು. ಈ ವರ್ಷ ಹಿರಿಯ ಚಿತ್ರನಟ ಶ್ರೀನಾಥ್ ಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.