ADVERTISEMENT

ಕಲಬುರಗಿ: ನಂದಿನಿ ಮಳಿಗೆಗಳಲ್ಲಿ ಶೇಂಗಾ ಹೋಳಿಗೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 6:54 IST
Last Updated 25 ನವೆಂಬರ್ 2025, 6:54 IST
ಶೇಂಗಾ ಹೋಳಿಗೆ
ಶೇಂಗಾ ಹೋಳಿಗೆ   

ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ಹಬ್ಬದಲ್ಲಿ ತಯಾರಿಸುವ ಜನಪ್ರಿಯ ಸಿಹಿ ತಿನಿಸು ಶೇಂಗಾ ಹೋಳಿಗೆ ಹಾಗೂ ಶೇಂಗಾ ಚಟ್ನಿಯನ್ನು ರಾಜ್ಯದಾದ್ಯಂತ ಇರುವ ನಂದಿನಿ ಮಳಿಗೆಗಳ ಮೂಲಕ ಮಾರಾಟ ಮಾಡುವುದಕ್ಕೆ ಕಲಬುರಗಿ ಬೀದರ್ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಸಿದ್ಧತೆ ನಡೆಸಿದೆ. 

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಎರಡು, ಮೂರು ತಿಂಗಳಲ್ಲಿ ಎಲ್ಲ ನಂದಿನಿ ಮಳಿಗೆಗಳಲ್ಲಿ ಶೇಂಗಾ ಹೋಳಿಗೆ, ಶೇಂಗಾ ಚಟ್ನಿಯ ಪ್ಯಾಕೆಟ್‌ಗಳು ಕಾಣಿಸಿಕೊಳ್ಳಲಿವೆ.

‘ಕಲಬುರಗಿ ರೊಟ್ಟಿ’ ಬ್ರ್ಯಾಂಡ್‌ನಡಿ ಜಿಲ್ಲಾಡಳಿತದ ನೆರವಿನೊಂದಿಗೆ ಈಗಾಗಲೇ ಮಹಿಳೆಯರು ಸ್ವ ಉದ್ಯಮಿಗಳಾಗಿ ಹೊರಹೊಮ್ಮಿದ್ದು, ನಿತ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ರೊಟ್ಟಿಯನ್ನು ಪ್ಯಾಕ್ ಮಾಡಿ ಕಳುಹಿಸಿಕೊಡುತ್ತಿದ್ದಾರೆ. ಅದೇ ರೀತಿ ದಶಕಗಳಿಂದ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಬಹುಬೇಡಿಕೆಯ ಖಾದ್ಯವಾಗಿರುವ ಶೇಂಗಾ ಹೋಳಿಗೆ, ಜೊತೆಗೆ ಕೇವಲ ಮೊಸರು, ಒಳ್ಳೆಣ್ಣೆ, ತುಪ್ಪದೊಂದಿಗೆ ಬೆರೆಸಿ ರೊಟ್ಟಿ, ಚಪಾತಿಯೊಂದಿಗೆ ಸವಿಯಬಹುದಾದ ಶೇಂಗಾ ಚಟ್ನಿಯನ್ನು ರಾಜ್ಯದ ಇತರ ಭಾಗಗಳಿಗೂ ತಲುಪಿಸಲು ಕಲಬುರಗಿ ಬೀದರ್ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್)ದ ನಿರ್ದೇಶಕರಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಆರ್.ಕೆ. ಪಾಟೀಲ ಅವರು ಎಲ್ಲ ನಂದಿನಿ ಮಳಿಗೆಗಳಲ್ಲಿ ಹೋಳಿಗೆಯ ಘಮ ಅರಳಿಸುವ ನಿಟ್ಟಿನಲ್ಲಿ ಮಹಾಮಂಡಳದ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡ ಆರ್.ಕೆ.ಪಾಟೀಲ, ‘ರಾಜ್ಯದ ಎಲ್ಲ ಮಳಿಗೆಗಳಲ್ಲಿ ಶೇಂಗಾ ಹೋಳಿಗೆ, ಶೇಂಗಾ ಚಟ್ನಿ ಮಾರಾಟ ಮಾಡಲು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರು ಒಪ್ಪಿಕೊಂಡಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಗುಣಮಟ್ಟದ ಹೋಳಿಗೆ ತಯಾರಿಸಲು ಅಗತ್ಯವಾದ ಆಹಾರದ ಮಾದರಿಗಳನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಗೆ ಕಳುಹಿಸಲಾಗಿದೆ. ಅದರ ಪ್ರಮಾಣಪತ್ರ ಸಿಕ್ಕ ನಂತರ ಉತ್ಪಾದನೆ ಆರಂಭಿಸಲಾಗುವುದು. ಇದಕ್ಕಾಗಿ ಗುಣಮಟ್ಟದ ಶೇಂಗಾ ಹಾಗೂ ಉತ್ಕೃಷ್ಟ ಗುಣಮಟ್ಟದ ಬೆಲ್ಲವನ್ನು ಬಳಕೆ ಮಾಡಲಾಗುವುದು. ಇದಕ್ಕಾಗಿ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.

‘ಶೇಂಗಾ ಹೋಳಿಗೆ, ಚಟ್ನಿ ತಯಾರಿಕೆ ಆರಂಭವಾದರೆ ಕನಿಷ್ಠ 80 ಜನರಿಗೆ ಉದ್ಯೋಗ ದೊರೆಯಲಿದೆ’ ಎಂದು ಹೇಳಿದರು.

ಈ ಭಾಗದ ಜನಪ್ರಿಯ ಖಾದ್ಯ ಪ್ರೊಟೀನ್ ಅಂಶವುಳ್ಳ ಶೇಂಗಾ ಹೋಳಿಗೆ ಶೇಂಗಾ ಚಟ್ನಿಯನ್ನು ನಂದಿನಿ ಮಳಿಗೆಗಳಲ್ಲಿ ಮಾರಾಟ ಮಾಡುವ ಬಗ್ಗೆ ಹಲವು ದಿನಗಳಿಂದ ಪ್ರಯತ್ನ ನಡೆದಿತ್ತು. ಪ್ರತಿ ನಿತ್ಯ ಸುಮಾರು 4–5 ಸಾವಿರ ಹೋಳಿಗೆಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ
ಆರ್.ಕೆ. ಪಾಟೀಲ ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.