ADVERTISEMENT

ಕಲಬುರಗಿ | ‘ನಾರಾಯಣ ಗುರು ಮಹಾನ್‌ ದಾರ್ಶನಿಕ’: ಬಿ.ಕೆ.ಹರಿಪ್ರಸಾದ್‌

ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:12 IST
Last Updated 17 ಸೆಪ್ಟೆಂಬರ್ 2025, 6:12 IST
<div class="paragraphs"><p>ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಪ್ರತಿಮೆಗೆ ನಟ ವಿಜಯ ರಾಘವೇಂದ್ರ ಪೂಜೆ ಸಲ್ಲಿಸಿದರು&nbsp;&nbsp; </p></div>

ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಪ್ರತಿಮೆಗೆ ನಟ ವಿಜಯ ರಾಘವೇಂದ್ರ ಪೂಜೆ ಸಲ್ಲಿಸಿದರು  

   

ಪ್ರಜಾವಾಣಿ ಚಿತ್ರ

ಕಲಬುರಗಿ: ಒಂದೆಡೆ ತಮಟೆ ವಾದನ ರಂಗು. ಮತ್ತೊಂದೆಡೆ ಡೊಳ್ಳು ಕುಣಿತದ ಗುಂಗು. ಜೊತೆಗೆ ಗಾರುಡಿಗ ಗೊಂಬೆಗಳ ಕುಣಿತ. ಹಾರಾಡಿದ ಹಳದಿ ಬಾವುಟಗಳು. ಕುಂಭ ಹೊತ್ತು ಸಾಗಿದ ಮಹಿಳೆಯರು. ತುತ್ತೂರಿ ಊದಿದ ಕಲಾವಿದರು... ಅದರೊಂದಿಗೆ ಮೇಳೈಸಿದ ಡೋಲು–ತಾಷಾಗಳ ವಾದನದ ಸದ್ದು...

ADVERTISEMENT

ಇದು ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ಕಂಡುಬಂದ ವೈಭವದ ನೋಟ. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ನಾರಾಯಣಗುರು ಮೂರ್ತಿಯಿದ್ದ ಪುಷ್ಪಾಲಂಕೃತ ರಥಕ್ಕೆ ಗಣ್ಯರು ಚಾಲನೆ ನೀಡಿದರು.

ಬಳಿಕ ವಿವಿಧ ಕಲಾ ತಂಡಗಳು, ಮಹಿಳೆಯರ ಕುಂಭ ಮೆರವಣಿಗೆಯೊಂದಿಗೆ ಅದ್ದೂರಿ ಶೋಭಾಯಾತ್ರೆ ನಡೆಯಿತು. ಬ್ಲೋವರ್‌ ಮೂಲಕ ಹಳದಿ ಬಣ್ಣದ ಪರಪರಿ ಚೂರುಗಳನ್ನು ಚಿಮ್ಮಿಸಿ ನೃತ್ಯ ಮಾಡುತ್ತಿದ್ದ ಯುವಜನರ ಉತ್ಸಾಹ ಹೆಚ್ಚಿಸಲಾಯಿತು. ಕರದಾಳದ ನಾರಾಯಣ ಗುರು ಪೀಠದ ಪ್ರಣವಾನಂದ ಸ್ವಾಮೀಜಿ ಸೇರಿದಂತೆ ಹಲವು ಮುಖಂಡರು, ಸಾವಿರದಷ್ಟು ಜನರು ವೈಭವದ ಮೆರವಣಿಗೆಗೆ ಸಾಕ್ಷಿಯಾದರು.

ಜಿಲ್ಲಾ ಆರ್ಯ ಈಡಿಗ ಸಮಾಜ, ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಸಮಿತಿ, ಕಾಮಧೇನು ಈಡಿಗ ಮಹಿಳಾ ಸಂಘ, ನಾರಾಯಣ ಗುರು ಸಾಂಸ್ಕೃತಿಕ ಕಲಾ ಸಂಘ, ರಾಷ್ಟ್ರೀಯ ಈಡಿಗ ಮಹಾಮಂಡಳ, ಬಿಲ್ಲವ ಸಂಘ, ಜಿಲ್ಲಾ ಆರ್ಯ ಈಡಿಗ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಮಾರಂಭವನ್ನು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಹರಿಪ್ರಸಾದ್, ‘ಬ್ರಹ್ಮಶ್ರೀ ನಾರಾಯಣಗುರು ಮಹಾನ್‌ ದಾರ್ಶನಿಕ. ಅವರು ಶಿಕ್ಷಣಕ್ಕೆ ಅತೀವ ಒತ್ತು ನೀಡಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಕೇರಳ ಶೇ 100ರಷ್ಟು ಸಾಕ್ಷರತೆ ಸಾಧಿಸಲು ನಾರಾಯಣಗುರು ಕಾರಣ’ ಎಂದರು.

‘ವಿಶ್ವಗುರು ಬಸವಣ್ಣವರಿಗೂ ಬ್ರಹ್ಮಶ್ರೀ ನಾರಾಯಣ ಗುರುಗಳಿಗೂ ವ್ಯಾಪಕ‌ ಸಾಮ್ಯತೆಯಿದೆ. 12ನೇ ಶತಮಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವಣ್ಣವರು ಜಾತಿ ಭೇದವಿಲ್ಲದ ಮಾನವೀಯತೆ, ಸಮಾನತೆಯ ಸಂದೇಶ ಸಾರಿದ್ದರು. 19ನೇ ಶತಮಾನದಲ್ಲಿ ನಾರಾಯಣ ಗುರುಗಳೂ ಅದೇ ಬಗೆಯ ಸಂದೇಶ ಕೇರಳದಲ್ಲಿ ಕೊಟ್ಟರು. ಬಸವಣ್ಣ‌ ಲಿಂಗ ‌ಪೂಜಿಸಿದರು, ನಾರಾಯಣ ‌ಗುರು‌ ಸಹ ಶಿವಗಿರಿಯಲ್ಲಿ ಶಿವಲಿಂಗ ದೇವಾಲಯ ಪ್ರತಿಷ್ಠಾಪಿಸಿದರು’ ಎಂದರು.

‘ಪ್ರಪಂಚದಲ್ಲಿ ಒಂದೇ ದೇವರು, ಒಂದೇ ಜಾತಿ, ಒಂದೇ ಧರ್ಮವಿದೆ. ಶಿಕ್ಷಣದಿಂದ ಸ್ವಾತಂತ್ರ್ಯ, ಸ್ವಾತಂತ್ರ್ಯದಿಂದ ಸಂಘಟನೆ, ಆ ಮೂಲಕ ಹೋರಾಟ ಮಾಡಿ ಬದುಕು ಕಟ್ಟಿಕೊಳ್ಳಿ ಎಂದು ನಾರಾಯಣಗುರುಗಳು ಸಾರಿದ್ದಾರೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದು ಪ್ರಕಾಶಮಾನವಾಗಿ ಹೊರಬರಲು ಶಿಕ್ಷಣ ಮುಖ್ಯ. ಸಮಾಜದ ಜನರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಗುರು ದೊಡ್ಡವನು:

ನಟ ವಿಜಯ ರಾಘವೇಂದ್ರ ಮಾತನಾಡಿ, ‘ಹರ ಮುನಿದರೂ ಗುರು ಕಾಯುವ ಎಂಬುದು ಎಂದಿಗೂ ಸುಳ್ಳಲ್ಲ. ನಾವು ಬಹಳಷ್ಟು ನಂಬಿರುವ ದೇವರೇ ಒಮ್ಮೊಮ್ಮೆ ನಮ್ಮ ಮೇಲೆ ಮುನಿಸಿಕೊಳ್ಳಬಹುದು, ಬೇಡಿದ್ದನ್ನು ಕೊಡಲು ತಡವಾಗಬಹುದು. ಆದರೆ, ಗುರುವಿನ ಆಶೀರ್ವಾದ ಹಾಗಲ್ಲ. ಅದೊಂದು ರೀತಿ ಸ್ವಿಗ್ಗಿ, ಜೊಮ್ಯಾಟೊದ ತ್ವರಿತ ಸೇವೆಯಂತೆ. ಅಂಥ ದಯಾಗುಣ, ಕಾರುಣ್ಯದ ಮನಸು ಗುರುವಿಗೆ ಇರುತ್ತದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ ಮುಖಂಡ ರಾಜೇಶ ಗುತ್ತೇದಾರ, ‘ಈ ಸಲ ಜಯಂತ್ಯುತ್ಸವದ ಅಂಗವಾಗಿ 13 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣದ ವೆಚ್ಚ ಭರಿಸಲಾಗುತ್ತಿದೆ. ವಿಧಾನಸೌಧ ಆವರಣದಲ್ಲಿ ನಾರಾಯಣ ಗುರು ಪ್ರತಿಮೆ ಪ್ರತಿಷ್ಠಾಪಿಸುವ ಚಿಂತನೆ ಇನ್ನೂ ಸಾಕಾರಗೊಂಡಿಲ್ಲ. ಈ ನಿಟ್ಟಿನಲ್ಲಿ ಬಿ.ಕೆ.ಹರಿಪ್ರಸಾದ್ ಅವರು ಕಾಳಜಿ ತೋರಬೇಕು’ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿಲ್ಲಾಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೇಶ್ವರಿ ನಾಶಿ ಸ್ವಾಗತಿಸಿದರು. ಸದಾನಂದ ಪೆರ್ಲ ನಿರೂಪಿಸಿದರು. ತೊನಸನಹಳ್ಳಿಯ ಮಲ್ಲಪ್ಪಣ್ಣ ಸ್ವಾಮೀಜಿ, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ, ಮೇಯರ್‌ ವರ್ಷಾ ಜಾನೆ, ಜೆಡಿಎಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ನಿತಿನ್‌ ಗುತ್ತೇದಾರ, ಹರ್ಷಾನಂದ‌ ಗುತ್ತೇದಾರ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಿನಯ್ ಗುತ್ತೇದಾರ ಗಾರಂಪಳ್ಳಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ನಾರಾಯಣ ಗುರು ಜಯಂತ್ಯುತ್ಸವ ಅಂಗವಾಗಿ ಕಲಬುರಗಿಯಲ್ಲಿ ನಡೆದ ನಾರಾಯಣ ಗುರುಗಳ ಮೂರ್ತಿ ಮೆರವಣಿಗೆಯ ವೈಭವ

ಸಮುದಾಯದ ಕೆಲಸಕ್ಕೆ ಸಮಯದ ಮಿತಿಯಿಲ್ಲ. ಅದು ನಿರಂತರ ಸೇವೆ. ಪ್ರತಿಯೊಬ್ಬರಿಗೂ ದೇಶ ಧರ್ಮ ತಂದೆ–ತಾಯಿ ಮೇಲಿನ ಋಣದಂತೆ ಜಾತಿಯ ಮೇಲೂ ಋಣವಿರುತ್ತದೆ. ಅದನ್ನು ಸಮುದಾಯದ ಜನರು ಮರೆಯಬಾರದು.
ಪ್ರಣವಾನಂದ ಸ್ವಾಮೀಜಿ ಕರದಾಳ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ
ನಾರಾಯಣ ಗುರು ಆದರ್ಶಪ್ರಾಯರಾದ ಸಮಾಜ ಸುಧಾರಕರು. ಶೀಘ್ರದಲ್ಲೇ ಕಲಬುರಗಿ ನಗರದ ರಸ್ತೆಯೊಂದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು ಪ್ರಯತ್ನಿಸಲಾಗುವುದು
ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ
ಸರ್ವರ ಒಳಿತಿಗೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವಜನಾಂಗದ ಗುರುವಾಗಿದ್ದಾರೆ. ಈಡಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು
ಅಲ್ಲಮಪ್ರಭು ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.