ADVERTISEMENT

ನರೇಗಾ; ಮಹಿಳೆಯರನ್ನು ಕರೆತರಲು ಸಮೀಕ್ಷೆ

ಜಿಲ್ಲೆಯ ಕೆಲವೆಡೆ ಮಾತ್ರ ಆಂದೋಲನ ಆರಂಭ; ಅಸಮಾಧಾನ

ಗಣೇಶ ಚಂದನಶಿವ
Published 20 ಫೆಬ್ರುವರಿ 2021, 7:55 IST
Last Updated 20 ಫೆಬ್ರುವರಿ 2021, 7:55 IST
ಬೀದರ್ ತಾಲ್ಲೂಕಿನ ಕಮಠಾಣ ಹೊರ ವಲಯದಲ್ಲಿ ಕೆರೆ ಹೂಳೆತ್ತುವ ಕೆಲಸ (ಸಂಗ್ರಹ ಚಿತ್ರ)
ಬೀದರ್ ತಾಲ್ಲೂಕಿನ ಕಮಠಾಣ ಹೊರ ವಲಯದಲ್ಲಿ ಕೆರೆ ಹೂಳೆತ್ತುವ ಕೆಲಸ (ಸಂಗ್ರಹ ಚಿತ್ರ)   

ಕಲಬುರ್ಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ‘ಮಹಿಳಾ ಕಾಯಕ ಶಕ್ತಿ ಅಭಿಯಾನ’ದ ಅಡಿ ಮನೆ ಮನೆ ಸಮೀಕ್ಷೆಗೆ ಮುಂದಾಗಿದೆ.

ನರೇಗಾದಲ್ಲಿ ಮಹಿಳೆಯರು ಹಾಗೂಪುರುಷರು ಇಬ್ಬರಿಗೂ ಸಮಾನವಾಗಿ ದಿನಕ್ಕೆ ₹ 275 ಕೂಲಿ ನೀಡಲಾಗುತ್ತಿದೆ. ಆದರೂ, ರಾಜ್ಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕಡಿಮೆ ಇದೆ. ಮಹಿಳೆಯರ ಭಾಗವಹಿಸುವಿಕೆಯನ್ನು ಕನಿಷ್ಠ ಶೇ 5ರಷ್ಟಾದರೂ ಹೆಚ್ಚಿಸುವುದು ಹಾಗೂ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದು. ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯನ್ನಾಗಿ ಮಾಡುವುದು. ಸ್ವ–ಸಹಾಯ ಸಂಘಗಳ ಭಾಗವಹಿಸುವಿಕೆಗೆ ಉತ್ತೇಜನ ನೀಡುವುದು ಈ ಅಭಿಯಾನದ ಉದ್ದೇಶ. ಮಾರ್ಚ್‌ 15ರವರೆಗೆ ಸಮೀಕ್ಷೆ ನಡೆಯಲಿದೆ.

ಎಲ್ಲಿ ಅಭಿಯಾನ: ಮಹಿಳೆಯರ ಭಾಗವಹಿಸುವಿಕೆ ಅತೀ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅವರು ಮೊದಲ ಹಂತಕ್ಕೆ ನಾಲ್ಕು ಮತ್ತು ಎರಡನೇ ಹಂತಕ್ಕೆ ಆರು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುತ್ತಾರೆ.

ADVERTISEMENT

ಅಭಿಯಾನ ಅನುಷ್ಠಾನಕ್ಕೆ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ)ರ ನೇತೃತ್ವದಲ್ಲಿ ಎರಡು ಟಾಸ್ಕ್‌ಫೋರ್ಸ್‌ ರಚಿಸಬೇಕು. ಈ ಟಾಸ್ಕ್‌ಫೋರ್ಸ್‌ ಮೊದಲನೇ ತಿಂಗಳಿನಲ್ಲಿ ತಲಾ ಎರಡು, 2ನೇ ತಿಂಗಳಲ್ಲಿ ತಲಾ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿರುತ್ತವೆ.

ಅಭಿಯಾನಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ತಲಾ ₹ 25 ಸಾವಿರ ಅನುದಾನವನ್ನು ಮುಂಗಡ ವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಅಭಿಯಾನದಡಿ ಸಮೀಕ್ಷಾ ಕಾರ್ಯಕರ್ತ ರನ್ನು ನೇಮಿಸಿ ಕೊಳ್ಳಲಾಗುತ್ತದೆ. ಅವರಿಗೆ ದಿನಕ್ಕೆ ₹ 350 ಸಂಭಾವನೆ ನೀಡಲಾಗುತ್ತದೆ. ತರಬೇತಿಯ ಒಂದು ದಿನ ಹಾಗೂ ಸಮೀಕ್ಷೆಯ 5 ದಿನಕ್ಕೆ ಒಟ್ಟು ₹ 2,100 ಸಂಭಾವನೆಯನ್ನು ಅವರಿಗೆ ನಿಗದಿ ಪಡಿಸಲಾಗಿದೆ. ಅವರು ನಿತ್ಯ 50 ಕುಟುಂಬಗಳ ಸಮೀಕ್ಷೆ ನಡೆಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕುಟುಂಬಗಳ ಸಮೀಕ್ಷೆಯನ್ನು ಐದು ದಿನಗಳಲ್ಲಿ ಪೂರ್ಣಗೊಳಿಸಬೇಕು. ಅಂದರೆ, ಪ್ರತಿ ಸಮೀಕ್ಷಾ ಕಾರ್ಯಕರ್ತ ಒಟ್ಟು 250 ಕುಟುಂಬಗಳ ಸಮೀಕ್ಷೆ ಮಾಡಬೇಕು. ಇದಕ್ಕೆ ಅಗತ್ಯವಿರುವಷ್ಟು ಸಮೀಕ್ಷಾ ಕಾರ್ಯಕರ್ತರನ್ನು ತಾಲ್ಲೂಕು ಮಟ್ಟದ ಟಾಸ್ಕ್‌ಫೋರ್ಸ್‌ ನೇಮಿಸಿಕೊಳ್ಳುತ್ತದೆ.

ಪ್ರತಿ ಜಿಲ್ಲೆಯಲ್ಲಿ ಅಭಿಯಾನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಅಧಿಕಾರಿ, ಸಿಬ್ಬಂದಿಗೆ ಬಹುಮಾನ ನೀಡುವ ಪಸ್ತಾವವೂ ಈ ಯೋಜನೆಯಲ್ಲಿದೆ.

ಪ್ರಶ್ನಾವಳಿಯಲ್ಲಿ ಏನೇನಿದೆ?

ನೀವು ಹೊಲ–ಗದ್ದೆಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತೀರಾ? ಇಲ್ಲ ಎಂದಾದರೆ ಬಿಡುವಿನಲ್ಲಿ ಏನು ಕೆಲಸ ಮಾಡುತ್ತೀರಿ? ನಿಮ್ಮ ಊರಲ್ಲಿ ಹೊಲ–ಗದ್ದೆ ಕೆಲಸಕ್ಕೆ ಮಹಿಳೆಯರಿಗೆ ಎಷ್ಟು ಕೂಲಿ ಕೊಡುತ್ತಾರೆ ಮತ್ತು ವರ್ಷಕ್ಕೆ ಎಷ್ಟು ದಿನ ಕೆಲಸ ಸಿಗುತ್ತದೆ? ನಿಮ್ಮದು ಮಹಿಳಾ ಪ್ರಧಾನ ಕುಟುಂಬವೇ? ನೀವು ಸ್ವ–ಸಹಾಯ ಸಂಘದ ಸದಸ್ಯರೇ? ನಿಮ್ಮಲ್ಲಿ ಜಾಬ್‌ ಕಾರ್ಡ್‌ ಇದೆಯೇ? ಎಂದು ಕೇಳಲಾಗುತ್ತದೆ. ಇದ್ದರೆ ಜಾಬ್‌ಕಾರ್ಡ್‌ ಪರಿಶೀಲಿಸಲಾಗುತ್ತದೆ. ಒಂದೊಮ್ಮೆ ಜಾಬ್‌ಕಾರ್ಡ್‌ ಹೊಂದಿ ಅದು ಬೇರೆಯವರ ಬಳಿ ಇದ್ದರೆ ಆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ.

ನಿಮಗೆ ಕೃಷಿ ಜಮೀನು ಇದೆಯೇ? ಇದ್ದರೆ ಅಲ್ಲಿ ಯಾವೆಲ್ಲ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದೀರಿ? ನಿಮ್ಮ ಮನೆಯ ಬಚ್ಚಲುಗುಂಡಿ ಮಾಡಲು ಯೋಚಿಸಿದ್ದೀರಾ? ಎಂಬಂತಹ ಪ್ರಶ್ನೆಗಳನ್ನು ಕೇಳಿ ಅವರಿಗೆ ತಮ್ಮ ಹೊಲ–ಮನೆಗಳಲ್ಲಿ ಕೆಲಸ ಮಾಡಲುಇರುವ ಅವಕಾಶಗಳನ್ನು ಗುರುತಿಸಲಾಗುತ್ತದೆ.ಅದರ ಆಧಾರದ ಮೇಲೆ ಅವರಿಗೆ ಕೆಲಸ ನೀಡುವುದು ಈ ಸಮೀಕ್ಷೆಯ ಉದ್ದೇಶ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.