ADVERTISEMENT

‘ಮಗುವಿನ ಸುತ್ತಲಿನ ಪರಿಸರವೇ ಪಠ್ಯವಾಗಲಿ’

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಸಂವಾದದಲಲ್ಲಿ ಪ್ರಭಾರ ಕುಲಪತಿ ಡಾ.ಎಸ್‌.ಪಿ.ಮೇಲಕೇರಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 10:00 IST
Last Updated 28 ಜೂನ್ 2019, 10:00 IST
ಭಾರತ ಜ್ಞಾನ ವಿಜ್ಞಾನ ಸಮಿತಿಯು ಗುಲಬರ್ಗಾ ವಿ.ವಿ.ಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಸಂವಾದವನ್ನು ಪ್ರಭಾರ ಕುಲಪತಿ ಡಾ.ಎಸ್‌.ಪಿ.ಮೇಲಕೇರಿ ತಮಟೆ ಬಡಿಯುವ ಮೂಲಕ ಉದ್ಘಾಟಿಸಿದರು. ಡಾ.ಗಣಪತಿ ಶಿಂಧೆ, ಡಾ.ಶ್ರೀಶೈಲ ಘೂಳಿ, ಡಾ.ಶಿವಗಂಗಮ್ಮ ರುಮ್ಮಾ ಇದ್ದಾರೆ
ಭಾರತ ಜ್ಞಾನ ವಿಜ್ಞಾನ ಸಮಿತಿಯು ಗುಲಬರ್ಗಾ ವಿ.ವಿ.ಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಸಂವಾದವನ್ನು ಪ್ರಭಾರ ಕುಲಪತಿ ಡಾ.ಎಸ್‌.ಪಿ.ಮೇಲಕೇರಿ ತಮಟೆ ಬಡಿಯುವ ಮೂಲಕ ಉದ್ಘಾಟಿಸಿದರು. ಡಾ.ಗಣಪತಿ ಶಿಂಧೆ, ಡಾ.ಶ್ರೀಶೈಲ ಘೂಳಿ, ಡಾ.ಶಿವಗಂಗಮ್ಮ ರುಮ್ಮಾ ಇದ್ದಾರೆ   

ಕಲಬುರ್ಗಿ: ‘ಮಗುವಿಗೆ ಮೊದಲೇ ತನ್ನದಲ್ಲದ ಇತಿಹಾಸ, ತನಗೆ ಸರಿಹೊಂದದ ವಾತಾವರಣದ ಬಗ್ಗೆ ಪಠ್ಯದಲ್ಲಿ ತಿಳಿಹೇಳುವುದಕ್ಕಿಂತ ಸುತ್ತಲಿನ ಪರಿಸರದ ಸಂಗತಿಗಳನ್ನೇ ಸೇರಿಸಬೇಕು. ಇದರಿಂದ ಮಗುವಿನ ಕಲಿಕೆಗೆ ಅನುಕೂಲವಾಗಲಿದೆ‌’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಎಸ್‌.ಪಿ.ಮೇಲಕೇರಿ ಅಭಿಪ್ರಾಯಪಟ್ಟರು.

ಭಾರತ ಜ್ಞಾನ ವಿಜ್ಞಾನ ಸಮಿತಿಯು ಗುಲಬರ್ಗಾ ವಿ.ವಿ. ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾತೃಭಾಷೆಯನ್ನು ಗಟ್ಟಿಮುಟ್ಟಾಗಿ ಕಲಿತರೆ ಉಳಿದ ಭಾಷೆಗಳನ್ನು ಕಲಿಯಲು ಬುನಾದಿ ಹಾಕಿದಂತಾಗುತ್ತದೆ. ಮಗು ಅಡ್ಡಾಡುವ ಪರಿಸರದ ವಿಚಾರಗಳು ಅತ್ಯಂತ ಸರಳ ರೀತಿಯಲ್ಲಿ ವಿವರಿಸುವ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಬೇಕು. ಅದರ ಬದಲು ಒಮ್ಮೆಲೇ ಯೂರೋಪ್‌ ದೇಶದ ಇತಿಹಾಸವನ್ನು ಹೇಳಲು ಮುಂದಾದರೆ ಮಗುವಿಗೆ ಅರ್ಥವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

ಅತಿಯಾದ ತಂತ್ರಜ್ಞಾನದ ಬಳಕೆಯ ಮನುಷ್ಯ ಸಂಬಂಧಗಳನ್ನೇ ಶಿಥಿಲಗೊಳಿಸುತ್ತದೆ. ಮೊಬೈಲ್‌ ಹಾವಳಿಯಿಂದಾಗಿಒಂದೇ ಮನೆಯಲ್ಲಿದ್ದರೂ ಪರಸ್ಪರ ಮಾತನಾಡದ, ಭಾವನೆಗಳನ್ನು ಹಂಚಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಷಯ ಪರಿವೀಕ್ಷಕ ನಾಗೇಂದ್ರಪ್ಪ ಔರಾದಿ, ‘ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸುವ ಅಂಶಗಳು ಶಿಕ್ಷಣ ನೀತಿಯಲ್ಲಿವೆ. ಹಿಂದಿ ಭಾಷಿಕರು ಮತ್ತೊಂದು ಪರ್ಯಾಯ ಭಾಷೆಯನ್ನಾಗಿ ಸಂಸ್ಕೃತವನ್ನು ಆರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅನಗತ್ಯವಾಗಿ ಸಂಸ್ಕೃತಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ. ಅದರ ಬದಲು ಆಯಾ ಭಾಷೆಗಳಿಗೆ ಉತ್ತೇಜನ ನೀಡುವ ಅಂಶಗಳನ್ನು ನೀತಿಯು ಒಳಗೊಳ್ಳಬೇಕು ಎಂದರು.‌

ವಿಷಯ ತಜ್ಞ ಅರುಣಕುಮಾರ್‌ ಮಾತನಾಡಿ, ‘ನಮ್ಮ ದೇಶವನ್ನು ಆಳಿದ ಬ್ರಿಟಿಷರು ಆರ್ಥಿಕವಾಗಿ ನಮ್ಮನ್ನು ಶೋಷಿಸಿದರು. ಆದರೆ, ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಮೂಲಕ ಒಂದಷ್ಟು ಜನರಿಗೆ ಅಕ್ಷರವನ್ನಾದರೂ ಕಲಿಸಿದರು. ಸ್ವಾತಂತ್ರ್ಯಾನಂತರ ಹಲವು ಶಿಕ್ಷಣ ನೀತಿಗಳು ಬಂದರೂ ಒಂದು ಸಮಗ್ರ ನೀತಿ ಇನ್ನೂವರೆಗೂ ಬಂದಿಲ್ಲ. ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆ ಅಸಾಧ್ಯವೇ ಆಗಿದೆ’ ಎಂದು ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ.ಗಣಪತಿ ಶಿಂಧೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶಿವಗಂಗಮ್ಮ ರುಮ್ಮಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೊಳೆಗಾಂವ್‌, ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ.ಶ್ರೀಶೈಲ ಘೂಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.