ಕಲಬುರಗಿ: ‘ಬಹಮನಿ ಸುಲ್ತಾನರು ಉತ್ತರ ಭಾರತ, ದಕ್ಷಿಣ ಭಾರತದ ಮಧ್ಯೆ ಸೇತುವೆಯಾಗಿ ಕೆಲಸ ಮಾಡಿದ್ದಾರೆ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ವಿಭಾಗೀಯ ಪತ್ರಾಗಾರ ಕಚೇರಿ ಕಲಬುರಗಿ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯುತ್ತಿರುವ ‘ಬಹಮನಿ ಸಾಮ್ರಾಜ್ಯದ ಚರಿತ್ರೆ ಮತ್ತು ಸಂಸ್ಕೃತಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶುಕ್ರವಾರ ಅವರು ಮಾತನಾಡಿದರು.
‘ಇತಿಹಾಸದಲ್ಲಿ ಸಮಕಾಲಿನ ಸಾಮ್ರಾಜ್ಯಗಳೊಂದಿಗೆ ಅಧಿಕಾರ, ಸಂಪತ್ತು, ಪ್ರಾದೇಶಿಕ ವಿಸ್ತರಣೆಗಾಗಿ ಸಂಘರ್ಷ ನಡೆದಿದೆಯೇ ಹೊರತು ಧಾರ್ಮಿಕ ಕಾರಣಕ್ಕಾಗಿ ಅಲ್ಲ’ ಎಂದು ಹೇಳಿದರು.
‘ಬಹಮನಿಗಳು ಅಧಿಕಾರಕ್ಕೆ ಬರುವ ಮುಂಚೆಯೇ ಇಲ್ಲಿ ಶರಣರ ಕ್ರಾಂತಿ ನಡೆದಿತ್ತು. ಹೀಗಾಗಿ ಸುಮಾರು 200 ವರ್ಷಗಳ ಕಾಲ ಬಹಮನಿಗಳು ಶರಣರು ಮತ್ತು ಸೂಫಿ ತತ್ವಗಳನ್ನು ಬೆಸೆದರು. 14ನೇ ಶತಮಾನದಲ್ಲಿ ಆರಂಭವಾದ ಬಿದರಿ ಕಲೆ ಈಗಲೂ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿದೆ. ಬಹಮನಿ ಸ್ಮಾರಕಗಳ ಸಂರಕ್ಷಣೆಯಾಗಬೇಕು. ಮುಂದಿನ ಪೀಳಿಗೆಗೂ ಅವುಗಳನ್ನು ಪರಿಚಯಿಸಬೇಕು’ ಎಂದು ಹೇಳಿದರು.
ವಿಷಯಗಳು: ಎರಡು ದಿನಗಳ ವಿಚಾರ ಸಂಕಿರಣದಲ್ಲಿ ‘ಬಹಮನಿಗಳ ನಗರ ಯೋಜನೆ, ದಕ್ಷಿಣದಲ್ಲಿ ಅವರ ವಾಸ್ತುಶಿಲ್ಪ ಶೈಲಿ, ಬಿದರಿ ಕಲೆಯ ಇತಿಹಾಸ–ಪ್ರಕ್ರಿಯೆ ಮತ್ತು ವಿಧಾನ, ಸೂಫಿತತ್ವ, ದಾಖಲೆಪತ್ರ ಮತ್ತು ಸಾಹಿತ್ಯ, ಚಿತ್ರಕಲೆ, ಬಹಮನಿ ಕಾಲದಲ್ಲಿನ ಧಾರ್ಮಿಕ ವಾತಾವರಣ, ಬಹಮನಿಗಳ ಅವಧಿಯ ನಾಣ್ಯಗಳು ಕುರಿತು ಸಂಶೋಧಕರು ವಿಚಾರಗಳನ್ನು ಮಂಡಿಸಲಿದ್ದಾರೆ.
ವಿಚಾರ ಸಂಕಿರಣವನ್ನು ಎಚ್‌ಕೆಇ ಸೊಸೈಟಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಉದ್ಘಾಟಿಸಿದರು. ಎಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯರು, ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ, ಪ್ರಾಂಶುಪಾಲ ಆರ್.ಬಿ.ಕೊಂಡಾ, ಉಪ ಪ್ರಾಂಶುಪಾಲರಾದ ಪ್ರೊ.ವೀಣಾ ಪಿ.ಎಚ್, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಸುಭಾಷ್‌ಚಂದ್ರ ದೊಡ್ಡಮನಿ, ಸಂಶೋಧಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿಚಾರ ಸಂಕಿರಣದ ಭಾಗವಾಗಿ ನಾಣ್ಯಪ್ರದರ್ಶನ ಮತ್ತು ಛಾಯಾಚಿತ್ರ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ.
ಇತಿಹಾಸ ತಿಳಿಯದೇ ಭವಿಷ್ಯ ಸಾಧ್ಯವಿಲ್ಲ. ಬಹಮನಿಗಳು ಈ ಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ವಿಚಾರ ಸಂಕಿರಣದಿಂದ ಇನ್ನಷ್ಟು ವಿಷಯಗಳು ಹೊರಹೊಮ್ಮಲಿಶಶೀಲ್ ಜಿ. ನಮೋಶಿ ಎಚ್‌ಕೆಇ ಸೊಸೈಟಿ ಅಧ್ಯಕ್ಷ
ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉಪನಗರಗಳ ಕಲ್ಪನೆ ಕೊಟ್ಟಿದ್ದು ಬಹಮನಿಗಳು. ಅದಕ್ಕೆ ತಾಜಾ ಉದಾಹರಣೆಸುಲ್ತಾನಪುರ ಎಸ್.ಕೆ.ಅರುಣಿ ಸಂಶೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.