ADVERTISEMENT

ನವದುರ್ಗೆಯರ ಆರಾಧನೆಗೆ ಕಲಬುರಗಿ ಸಜ್ಜು

ನವರಾತ್ರಿ: ಇಂದು ಘಟ ಸ್ಥಾಪನೆ– ದೇವಸ್ಥಾನ, ಬಡಾವಣೆಗಳಲ್ಲಿ ವಿದ್ಯುತ್‌ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:58 IST
Last Updated 22 ಸೆಪ್ಟೆಂಬರ್ 2025, 4:58 IST
ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ    ಪ್ರಜಾವಾಣಿ ಚಿತ್ರ
ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ    ಪ್ರಜಾವಾಣಿ ಚಿತ್ರ   

ಕಲಬುರಗಿ: ನಾಡಹಬ್ಬ ದಸರಾ ಆಚರಣೆ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದವರು, ವಿವಿಧ ಮಂಡಳಿಯವರು ಸೋಮವಾರದಿಂದ ನವದುರ್ಗೆಯರ ಆರಾಧನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ವಿವಿಧ ಕಾಲೊನಿಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಸತತ ಮಳೆ ನಡೆವೆಯೂ ಜನ ಕೊಂಚ ಬಿಸಿಲಿದ್ದರೂ ಮನೆಯಲ್ಲಿನ ಬಟ್ಟೆಬರೆ ಸ್ವಚ್ಛಗೊಳಿಸಿದ್ದಾರೆ. ಮನೆ, ಪಾತ್ರೆಪಗಡೆ ತೊಳೆದಿಟ್ಟಿದ್ದಾರೆ. ಕೆಲವರು ಮನೆಗೆ ಸುಣ್ಣಬಣ್ಣ ಬಳಿದಿದ್ದಾರೆ. ಮನೆಯಲ್ಲಿ ಘಟ (ಕಲಶ) ಸ್ಥಾಪನೆಯೊಂದಿಗೆ ಮಹಿಳೆಯರು ಒಂಬತ್ತು ದಿನ ಶ್ರದ್ಧಾ, ಭಕ್ತಿಯೊಂದಿಗೆ ಪೂಜಾ ಕೈಂಕರ್ಯ ನಡೆಸಲಿದ್ದಾರೆ.

ನಗರದ ಟ್ಯಾಂಕ್ ಬಂಡ್ ರಸ್ತೆಯ ಯಲ್ಲಮ್ಮ ದೇವಿ ದೇವಸ್ಥಾನ, ಮಕ್ತಂಪುರದ ಹಿಂಗುಲಾಂಬಿಕಾ ದೇವಿ ದೇವಸ್ಥಾನ, ಹೊಸ ಜೇವರ್ಗಿ ರಸ್ತೆಯ ಸಿಂದಗಿ ಅಂಬಾಭವಾನಿ ದೇವಸ್ಥಾನ, ಆಳಂದ ಚೆಕ್‌ಪೋಸ್ಟ್‌ ಸಮೀಪದ ವೈಷ್ಣೋದೇವಿ ದೇವಸ್ಥಾನ, ಅಯ್ಯರವಾಡಿಯ ಭವಾನಿ ದೇವಸ್ಥಾನ, ನ್ಯೂ ರಾಘವೇಂದ್ರ ಕಾಲೊನಿಯ ವೆಂಕಟೇಶ್ವರ ದೇವಸ್ಥಾನ, ಕರುಣೇಶ್ವರ ನಗರದ ಜೈವೀರ ಹನುಮಾನ ದೇವಸ್ಥಾನ ಸೇರಿದಂತೆ ವಿವಿಧೆಡೆ ನವರಾತ್ರಿ ಉತ್ಸವ ಆಚರಣೆ ನಡೆಯಲಿದೆ.

‘ಶಹಾಬಜಾರ್‌ನ ಜಗದಂಬಾ ಮಂದಿರದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಶಾರದಿಯ ನವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಸೆ.22ರಿಂದ ಅ.2ರವರೆಗೆ ಪ್ರತಿದಿನ ವಿಶೇಷ ಅಲಂಕಾರ ಪೂಜೆ ಜರುಗಲಿದೆ. ಶಿವಪಾರ್ವತಿ, ಗಣೇಶ, ಮದುರೈ ಮೀನಾಕ್ಷಿ, ಚಂದ್ರದೇವಿ, ಸಿಂಹದೇವಿ, ಗಜಲಕ್ಷ್ಮೀ, ಬ್ರಹ್ಮಾಂಡದೇವಿ, ವಾಸವಿದೇವಿ, ಸರಸ್ವತಿ ಮಾತಾ, ತುಳಜಾಭವಾನಿ, ಕರು ಮರಿಯಮ್ಮ ಮಹಾಕಾಲಿ ಮತ್ತು ವಿಜಯದಶಮಿ ದಿನ ಮಹಿಷಾಸುರ ಮರ್ದಿನಿ ಅಲಂಕಾರ ಪೂಜೆ ನಡೆಯಲಿದೆ’ ಎಂದು ದೇವಸ್ಥಾನದ ಅರ್ಚಕ ಉಮೇಶ ಮಹಾರಾಜ ಮಾಹಿತಿ ನೀಡಿದರು.

‘ಉದನೂರ ರಸ್ತೆಯ ಸಂತೋಷ ಕಾಲೊನಿಯಲ್ಲಿರುವ ತುಳಜಾ ಭವಾನಿ ದೇವಸ್ಥಾನದಲ್ಲಿ ಸೋಮವಾರ ಘಟ ಸ್ಥಾಪನೆ ನಡೆಯಲಿದೆ. ಅಕ್ಟೋಬರ್‌ 2ರವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವಿಗೆ ಅಭಿಷೇಕ, ಪೂಜೆ, ಅಲಂಕಾರ, ಆರತಿ ಮತ್ತು ಪ್ರಸಾದ ವ್ಯವಸ್ಥೆ ಇರುತ್ತದೆ’ ಎಂದು ದೇವಸ್ಥಾನದ ಶಕ್ತಿ ಚವಾಣ್‌ ತಿಳಿಸಿದರು.

ಕಲಬುರಗಿಯ ಮಾರುಕಟ್ಟೆಯಲ್ಲಿ ಭಾನುವಾರ ಜನರು ಪೂಜಾ ಸಾಮಗ್ರಿಗಳನ್ನು ಖರೀದಿಸಿದರು

ಖರೀದಿ ಭರಾಟೆ

ನವರಾತ್ರಿಯ ಘಟ (ಕಲಶ) ಸ್ಥಾಪನೆಯ ಮುನ್ನಾ ದಿನ ನಗರದ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಕಂಡುಬಂತು. ಹೂವು ಹಣ್ಣು ಕಬ್ಬು ಬಾಳೆಗೊನೆ ವೀಳ್ಯದೆಲೆ ಕೊಬ್ಬರಿ ಅರಿಶಿಣ ಕುಂಕುಮ ಸೇರಿದಂತೆ ಪೂಜೆ ಮತ್ತು ಅಲಂಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.