ADVERTISEMENT

ಕ್ರಾಂತಿ ಹೆಸರಲ್ಲಿ ಯುವಕರ ಹಾದಿ ತಪ್ಪಿಸಿದ ನಕ್ಸಲರು: ದತ್ತಾತ್ರೇಯ ಹೊಸಬಾಳೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 13:53 IST
Last Updated 31 ಜನವರಿ 2025, 13:53 IST
<div class="paragraphs"><p>ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಶುಕ್ರವಾರ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ಯುವ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿದರು&nbsp; </p></div>

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಶುಕ್ರವಾರ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ಯುವ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿದರು 

   

–ಪ್ರಜಾವಾಣಿ ಚಿತ್ರ

ಸೇಡಂ (ಕಲಬುರಗಿ ಜಿಲ್ಲೆ): ‘ಸಮಾಜದಲ್ಲಿನ ಶೋಷಣೆ, ಬಡತನ, ಅನ್ಯಾಯವನ್ನು ತಡೆಯಲು ಕ್ರಾಂತಿಯೇ ಪರಿಹಾರ ಎಂಬ ಭಾವನೆಯನ್ನು ಯುವಕರಲ್ಲಿ ಬಿತ್ತಿದ ನಕ್ಸಲೀಯರು, ಅವರ ಕೈಗೆ ಬಂದೂಕು ಕೊಟ್ಟು ಹಾದಿ ತಪ್ಪಿಸಿದರು. ಇದರ ಪರಿಣಾಮ ಎಷ್ಟೋ ಯುವಕರು ಜೈಲಿನಲ್ಲಿ ಕೊಳೆಯುವಂತಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬೇಸರ ವ್ಯಕ್ತಪಡಿಸಿದರು.

ADVERTISEMENT

ಇಲ್ಲಿನ ಪ್ರಕೃತಿ ನಗರದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಶುಕ್ರವಾರ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ‍ಪರಿವರ್ತನೆ ತರಬೇಕು ಎಂದು ಬಯಸಿರುವ ಹಲವು ಯುವಕರಿಗೆ ಹಿಂಸೆ ಮಾಡದೆಯೂ ಸಾಧಿಸಬಹುದು ಎಂಬುದನ್ನು ಹೇಳಿಕೊಡಬೇಕಿತ್ತು. ಆದರೆ, ಬಂದೂಕಿನ ನಳಿಕೆಯ ಮೂಲಕವೇ ಇದಕ್ಕೆ ಪರಿಹಾರ ಎಂದು ಯುವಕರನ್ನು ನಕ್ಸಲ್‌ ನಾಯಕರು ನಂಬಿಸಿದ್ದರು’ ಎಂದು ದೂರಿದ ಅವರು, ‘ದೇಶದ ಮುಕ್ತಿಗೆ, ಏಳಿಗೆಗೆ ಸರಿಯಾದ ದಾರಿ ಯಾವುದೆಂದು ತೋರಿಸುವ ಹೊಣೆಗಾರಿಕೆ ತಂದೆ, ತಾಯಿ ಹಾಗೂ ಸಮಾಜಿಕ ಸಂಸ್ಥೆಗಳ ಮೇಲಿದೆ’ ಎಂದರು.

‘ಭಾರತೀಯ ಯುವಕರು ಅಮೆರಿಕ, ಇಂಗ್ಲೆಂಡ್‌ ಸೇರಿ ವಿವಿಧ ದೇಶಗಳಿಗೆ ಉತ್ತಮ ಉದ್ಯೋಗಾವಕಾಶ ಹುಡುಕಿ ಹೋಗುತ್ತಿದ್ದಾರೆ. ಅವರನ್ನು ಇಲ್ಲಿಯೇ ಹಿಡಿದಿಟ್ಟುಕೊಂಡು, ದೇಶದ ಒಳಿತಿಗಾಗಿ ಸಂಶೋಧನೆಗಳನ್ನು ನಡೆಸುವಂತೆ ಮನವೊಲಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ ಮಾತನಾಡಿ, ‘ಭಾರತವು ಅತ್ಯಂತ ಬೃಹತ್ ಯುವಪಡೆಯನ್ನು ಹೊಂದಿದ ದೇಶವಾಗಿದ್ದು, ಇದರ ಮೇಲೆ ಪಾಶ್ಚಾತ್ಯ ದೇಶಗಳು ಕಣ್ಣಿಟ್ಟಿವೆ. ಭಾರತದ ಯುವಕರು ವಿದೇಶಕ್ಕೆ ರಫ್ತಾಗದಂತೆ ತಡೆಯಬೇಕು. 1ನೇ ತರಗತಿಯಿಂದ ಪಿಯುಸಿವರೆಗೆ ದೇಶದಲ್ಲಿ 39 ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ದೇಶದ 1,500ಕ್ಕೂ ಅಧಿಕ ವಿಶ್ವವಿದ್ಯಾಲಯ, 50 ಸಾವಿರ ಕಾಲೇಜುಗಳಲ್ಲಿ 11.68 ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 51 ಕೋಟಿ ಯುವಕರು 25 ವಯಸ್ಸಿನ ಒಳಗಿದ್ದಾರೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕನಕಗಿರಿಯ ಸುವರ್ಣಗಿರಿ ಮಠದ ಚನ್ನಮಲ್ಲ ಸ್ವಾಮೀಜಿ ಮಾತನಾಡಿದರು. ದೆಹಲಿ ವಿಶ್ವವಿದ್ಯಾಲಯದ ವೃತ್ತಿಪರ ಶಿಕ್ಷಣ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಗೀತಾ ಸಿಂಗ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.