ADVERTISEMENT

ಕಮಲಾಪುರ ಬಳಿ KKRTC ಹೈದರಾಬಾದ್–ಕಲಬುರಗಿ ಬಸ್ ಪಲ್ಟಿ: ನಾಲ್ವರಿಗೆ ಗಾಯ

ಸೋಮವಾರ ಬೆಳಿಗ್ಗೆ ಹೈದರಾಬಾದ್‌ನಿಂದ ಕಲಬುರಗಿಗೆ ಬರುತ್ತಿತ್ತು

​ಪ್ರಜಾವಾಣಿ ವಾರ್ತೆ
Published 29 ಮೇ 2023, 7:48 IST
Last Updated 29 ಮೇ 2023, 7:48 IST
   

ಕಮಲಾಪುರ(ಕಲಬುರಗಿ): ತಾಲ್ಲೂಕಿನ ಕಿಣ್ಣ ಸಡಕ್ ಸಮೀಪದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಸೋಮವಾರ ಪಲ್ಟಿಯಾಗಿದ್ದು, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬಸ್‌ನಲ್ಲಿ 43 ಜನ ಪ್ರಯಾಣಿಕರಿದ್ದು, ಈ ಪೈಕಿ ನಾಲ್ವರಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರಗಿ–ಹೈದರಾಬಾದ್ ನಡುವೆ ಸಂಚರಿಸುತ್ತಿದ್ದ ಬಸ್, ಸೋಮವಾರ ಬೆಳಿಗ್ಗೆ ಹೈದರಾಬಾದ್‌ನಿಂದ ಕಲಬುರಗಿಗೆ ಬರುತ್ತಿತ್ತು. ಬೆಳಿಗ್ಗೆ 5.30ರ ಸುಮಾರಿಗೆ ಕಿಣ್ಣ ಸಡಕ ಬಳಿ ಸಾಗುತ್ತಿತ್ತು. ದರ್ಗಾ ಸಮೀಪ ಹೊಡ್ಡು ಹಾಗೂ ಹೆದ್ದಾರಿಯ ತಿರುವಿದೆ. ಎದುರಿಗೆ ವೇಗವಾಗಿ ಲಾರಿ ಬರುತ್ತಿದ್ದು ಡಿಕ್ಕಿ ಆಗುವ ಸಂಭವವಿತ್ತು. ಡಿಕ್ಕಿ ತಪ್ಪಿಸಲು ಚಾಲಕ ಬ್ರೇಕ್ ಹಾಕಿ ಪಕ್ಕಕ್ಕೆ ತೆರಳಲು ಪ್ರಯತ್ನಿಸಿದ್ದ. ಆಗ ಆಯ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಹೆದ್ದಾರಿಗೆ ಅಡ್ಡಲಾಗಿ ಬಸ್ ಬಿದ್ದಿರುವುದರಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಪಿಐ ವಿ. ನಾರಾಯಣ, ಪಿಎಸ್ಐ ವಿಶ್ವನಾಥ ಮುದ್ದಾರೆಡ್ಡಿ, ಕುಪೇಂದ್ರ, ರಾಜಶೇಖರ ನಾಶಿ ಅವರು ಸ್ಥಳಕ್ಕೆ ಭೇಟಿ ನೀಡಿ, ಪಲ್ಟಿಯಾಗಿ ಬಿದ್ದ ಬಸ್ ತೆರವುಗೊಳಿಸಿದರು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.