ADVERTISEMENT

ಭಾರತದ ಶಕ್ತಿ ವಿಶ್ವಕ್ಕೆ ತೋರಿಸಿದ ನೇತಾಜಿ: ಲಕ್ಷ್ಮಣ ದಸ್ತಿ

ಯುವ ಬ್ರಿಗೇಡ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಸುಭಾಷಚಂದ್ರ ಬೋಸ್‌ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 7:01 IST
Last Updated 24 ಜನವರಿ 2021, 7:01 IST
ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಶನಿವಾರ ಯುವ ಬ್ರಿಗೇಡ್‌ ಸದಸ್ಯರು ಸುಭಾಷಚಂದ್ರ ಬೋಸ್‌ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು
ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಶನಿವಾರ ಯುವ ಬ್ರಿಗೇಡ್‌ ಸದಸ್ಯರು ಸುಭಾಷಚಂದ್ರ ಬೋಸ್‌ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು   

ಕಲಬುರ್ಗಿ: ‘ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಬ್ರಿಟಿಷರ ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಟ ಮಾಡಿ, ಸಿಂಹ ಸ್ವಪ್ನವಾಗಿದ್ದ ಸುಭಾಷಚಂದ್ರ ಬೋಸ್ ಅವರು ಇಡೀ ಜಗತ್ತಿನ ಜನರಿಗೆ ದೇಶ ಭಕ್ತಿ ಏನೆಬುವದೆಂದು ತೊರಿಸಿಕೊಟ್ಟಿದ್ದಾರೆ’ ಎಂದು ಹೋರಾಟಗಾರ ಲಕ್ಷ್ಮಣ ದಸ್ತಿ ಹೇಳಿದರು.

ಯುವ ಬ್ರಿಗೇಡ್, ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಸುಭಾಷಚಂದ್ರ ಬೋಸ್‌ ಅವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಜಾದ್ ಹಿಂದ್ ಫೌಜ್‌ ರಚನೆ ಮಾಡಿ ಬ್ರಿಟಿಷರ ವಿರುದ್ಧ ದಿಟ್ಟತನದ ಹೋರಾಟ ನಡೆಸಿದ ಭೋಸರು, 1943 ಅಕ್ಟೋಬರ್ 21ರಂದು ಭಾರತದ ಹಂಗಾಮಿ ಸರ್ಕಾರ ರಚನೆ ಮಾಡಿ ಭಾರತದ ಮೊದಲನೇ ಪ್ರಧಾನ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಭಾರತದ ತ್ರಿವರ್ಣ ಧ್ವಜ ಹಾರಿಸಿ ಜಗತ್ತಿನಲ್ಲೇ ಸಂಚಲನ ಮೂಡಿಸಿದರು. ಬ್ರಿಟಿಷರ ಒಡೆದಾಳುವ ನೀತಿಯನ್ನು, ಬ್ರಿಟಿಷರ ಕುಟಿಲ ತಂತ್ರಗಳನ್ನು ಜಾಗತಿಕ ಮಟ್ಟದಲ್ಲಿ ಖಂಡಾತುಂಡವಾಗಿ ಖಂಡಿಸಿದರು’ ಎಂದರು.

ADVERTISEMENT

‘ಈ ಮಹಾನ್‌ ನಾಯಕನ ತ್ಯಾಗ, ಬಲಿದಾನ, ದಿಟ್ಟತನದ ಧೋರಣೆಯ ಫಲಸ್ವರೂಪದ ಬುನಾದಿ ಕಾರಣದಿಂದಲೇ ನಮ್ಮ ದೇಶ ಸ್ವಾತಂತ್ರ ಪಡೆಯಲು ಕಾರಣವಾಗಿದೆ’ ಎಂದರು.

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರರಾದ ಶಾಂತಯ್ಯ ಸ್ವಾಮಿ ಅವರು ಸೈನಿಕರಾಗಿದ್ದ ಸಂದರ್ಭದಲ್ಲಿನ ಅನುಭವ ಹಂಚಿಕೊಂಡರು. ರಾಮಕೃಷ್ಣ ಆಶ್ರಮದ ಮಹೇಶ್ವರಾನಂದ ಮಹಾರಾಜ ಆಶೀರ್ವಚನ ನೀಡಿದರು.

ಇದಕ್ಕೂ ಮುನ್ನ ಯುವ ಬ್ರಿಗೇಡ್ ವತಿಯಿಂದ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಗಂಜ್‌ನಿಂದ ‘ಜೈ ಹಿಂದ್ ರನ್’ ಎಂಬ ಮ್ಯಾರಥಾನ್‌ ಮೂಲಕ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತದಲ್ಲಿ ಸಮಾವೇಶಗೊಂಡರು.

ಈ ಸಂದರ್ಭದಲ್ಲಿ ಕರಾಟೆ ತರಬೇತುದಾರ ಶಿವಲಿಂಗಪ್ಪ, ಮಾಜಿ ಸೈನಿಕರರಾದ ಬಸವರಾಜ ಬಿರಾದಾರ್, ಯುವ ಬ್ರಿಗೇಡ್ ಮುಖಂಡರಾದ ಶರಣಯ್ಯ ಇಕ್ಕಳಕಿಮಠ, ಬಸವಂತರಾಯ ಮಾಲಿ ಪಾಟೀಲ, ರೋಹನ್ ರಟಕಲ್‌, ಹರೀಶ್ ಗುತ್ತೇದಾರ, ರವಿರಾಜ ದಮ್ಮೊರ, ಅನೀಲ ತಂಬಾಕೆ, ಪ್ರಶಾಂತ ತಂಬೂರಿ ಸೇರಿದಂತೆ ನೂರಾರು ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.